ಬುಧವಾರ, ಆಗಸ್ಟ್ 17, 2011

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತೆ!


ಕೆಲ ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬ ಗಾಡಿ ನಿಲ್ದಾಣವಲ್ಲದ ಜಾಗದಲ್ಲಿ ತನ್ನ ಕಾರನ್ನ ನಿಲ್ಲಿಸಿದ್ದನಂತೆ, ಆ ಕಾರಣಕ್ಕೆ ಬೆಂಗಳೂರು ನಗರ ಟ್ರಾಪಿಕ್ ಪೋಲೀಸರು ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ೧೦೦% ದಂಡ ಕಟ್ಟಬೇಕು ಅಂತ ಒಂದು ಚೀಟಿನ ಕಾರಿಗೆ ಅಂಟಿಸಿ ಹೋಗಿದ್ದರಂತೆ-

ಆ ಚೀಟಿ ನೋಡಿ-



ನನ್ನ ಸ್ನೇಹಿತ ಆ ಚೀಟಿ ತಗೊಂಡು ಪೋಲೀಸ್ ಟಾಣಿಗೆ ಹೋಗಿ ದಂಡ ಕಟ್ಟಿದ ನಂತರ- ಯಾಕ್ ಸಾರ್ ಈ ಚೀಟಿ ಬರಿ ಇಂಗ್ಲೀಶ್ ನಲ್ಲೆ ಇದೆ, ಇದರಲ್ಲಿ ೨೪ ಗಂಟೆ ಒಳಗೆ ದಂಡ ಕಟ್ಟಬೇಕು ಅಂತ ಬೇರೆ ಇದೆ. ಅಕಸ್ಮಾತ್ ಇಂಗ್ಲೀಶ್ ಗೊತ್ತಿಲ್ಲದವರ ಕೈಗೆ ಇದು ಸಿಕ್ಕಿದ್ರೆ ಏನ್ ಗತಿ ಪಾಪ, ಅಂತ ಅಲ್ಲಿನ ಅದಿಕಾರಿನ ಕೇಳಿದ್ದನೆ. ಅದಕ್ಕೆ ಪೋಲೀಸ್ ಅದಿಕಾರಿ ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅದುಕ್ಕೆ ಇಂಗ್ಲೀಶ್ ನಲ್ಲಿ ಇದೆ ಅಂತ ಹೇಳಿ ಕಳಿಸಿದ್ದಾರೆ.

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತ ಇಟ್ಟುಕೊಂಡರೂ ನಮ್ಮ ಬಾಶೆನ ಬಿಡಬೇಕು, ಇಂಗ್ಲೀಶ್ ಬಳಸಬೇಕು ಎಂದೇನಿಲ್ಲ ಅಲ್ವ? ಜಗತ್ತಿನ ಎಲ್ಲಾ ಇಂಟರ್ನಾಶಿನಲ್ ಸಿಟಗಳಲ್ಲಿ ಅವರವರ ಬಾಶೆಗಳಿಗೆ ಪ್ರಾಮುಕ್ಯತೆ ಕೊಡ್ತಾರೆ ಹೊರೆತು ಇಂಗ್ಲೀಶ್ ಅತವಾ ಇನ್ಯಾವುದೋ ಬಾಶೆಗೆ ಅಲ್ಲ ಅಲ್ವ.

ಕರ್ನಾಟಕ ಸರಕಾರದ ಸಂಸ್ತೆಯಾದ ಬೆಂಗಳೂರು ಟ್ರಾಪಿಕ್ ಪೋಲೀಸ್ ಸಂಸ್ತೆ ತನಗೂ ಸರಕಾರದ ಆಡಳಿತದಲ್ಲಿ ಕನ್ನಡದ ನಿಯಮಕ್ಕು ಯಾವುದೇ ಸಂಬಂದವಿಲ್ಲ. ತನಗೆ ಸರಕಾರದ ನಿಯಮ ಅನ್ವಯಿಸೊಲ್ಲ ಅನ್ನೊ ತರ ಎಲ್ಲೆಲ್ಲಿ ಆಗುತ್ತೊ ಅಲ್ಲೆಲ್ಲ ಕನ್ನಡವನ್ನ ತೆಗೆದುಹಾಕೊ ಕೆಲ್ಸ ಮಾಡ್ತಿದೆ, ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರಿನಲ್ಲಿ ಗಾಡಿ ಓಡಿಸಬೇಕು ಅಂದ್ರೆ ಬೆಂಗಳೂರು ಇಂಟರ್ನಾಶಿನಲ್ ಸಿಟಿ, ಇಲ್ಲಿ ಗಾಡಿ ಓಡಿಸಬೇಕು ಅಂದ್ರೆ ಇಂಗ್ಲೀಶ್ ಗೊತ್ತಿರಬೇಕು ಅನ್ನೊ ನಿಯಮ ಹೊರಡಿಸಿದ್ರು ಅಚ್ಚರಿಪಡಬೇಕಾಗಿಲ್ಲ.

ಅಚ್ಚರಿಪಡಬೇಕಾದ ವಿಶಯ ಅಂದ್ರೆ, ತಂತ್ರಜ್ನಾನ ಬಳಸುವ ನೆಪದಲ್ಲಿ, ಸಂಸ್ತೆ ತನ್ನಲ್ಲ ವ್ಯವಸ್ತೆಯನ್ನು ವಲಸಿಗರಿಗೆಂದೇ ನಿರ್ಮಿಸಲು ಹೊರಟಿದೆ. ಕನ್ನಡಿಗರಿಗೆ ತೊಂದರೆ ಆದ್ರು ಪರವಾಗಿಲ್ಲ, ವಲಸಿಗರಿಗೆ ತೊಂದರೆ ಆಗಬಾರದು ಎನ್ನುವಂತಹ ಸಂಸ್ತೆಯ ನಿಲುವು ಕಂಡನಾಹ೯ವಾದುದು. ಸರಕಾರ ಮತ್ತು ಆಡಳಿತದಲ್ಲಿ ಕನ್ನಡದ ಅನುಶ್ಟಾನಕ್ಕೆಂದೇ ಮಾಡಿರುವ ಕನ್ನಡ ಅಬಿವ್ರುದ್ದಿ ಪ್ರಾದಿಕಾರ ಇತ್ತಕಡೆ ಗಮನ ಹರಿಸಬೇಕು.

ಸೋಮವಾರ, ಆಗಸ್ಟ್ 8, 2011

ಆದಾಯ ತೆರಿಗೆ ನಿಯಮಗಳನ್ನ ತಿಳಿಬೇಕಾದ್ರೆ ಹಿಂದಿ/ಇಂಗ್ಲೀಶ್ ಗೊತ್ತಿರಬೇಕಾ?

ಆದಾಯ ತೆರಿಗೆ ಇಲಾಕೆಯವರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ರಿಟರ್ನ್ ಪೈಲ್ ಮಾಡೊಕ್ಕೆ ಅವಕಾಶ ಆಗ್ಲಿ ಅಂತ ವ್ಯವಸ್ತೆ ಮಾಡಿದ್ದರು, ಅಶ್ಟು ಕರ್ಚು ಮಾಡಿದ್ರು ಅದು ಬರೆ ಕೆಲವೇ ಕೆಲವು ಮಂದಿಗೆ ಉಪಯೋಗವಾಗುವಂತಿದ್ದುದ್ದು ಮಾತ್ರ ದುರದ್ರುಶ್ಟಕರ. ಹೇಗೆ ಅಂತಿರ? ಮುಂದೆ ಓದಿ......


ಕಳೆದ ವಾರ ನನಗೆ ತಿಳಿದವರೊಬ್ಬರು ಐಟಿ ರಿಟರ್ನ್ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದವರು ದಂಗಾಗಿ ಮನೆಗೆ ವಾಪಸ್ ಬಂದು, ಯಾರಾದ್ರು ಸಿಎ ಗೊತ್ತಿದ್ದ್ರೆ ಹೇಳಪ್ಪ ಅಂತ ನನ್ನ ಕೇಳಿದ್ರು, ಅದಕ್ಕೆ ನಾನು ಸಿಎ ಹತ್ತಿರ ಯಾಕೆ ಹೋಗ್ತಿರಾ, ಸುಮ್ನೆ ಅರಮನೆ ಮೈದಾನಕ್ಕೆ ಹೋಗಿ ಅಲ್ಲಿ ಎಲ್ಲಾ ಆರಾಮಗಿ ಆಗುತ್ತೆ ಅಂದೆ. ಅದಕ್ಕೆ ಅವರು, ತಾವು ಅರಮನೆ ಮೈದಾನಕ್ಕೆ ಹೋಗಿದ್ದಾಗಿ ಮತ್ತು ಅಲ್ಲಿ ಪೈಲ್ ಮಾಡೊದು ಅಶ್ಟು ಸುಲಬ ಅಲ್ಲ ಅಂತ ಹೇಳಿದ್ರು. ಆಮೆಲೆ, ಅವರು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಸಿಎ ಕಡೆಯಿಂದ ಐಟಿ ರಿಟರ್ನ್ಸ್ ಪೈಲ್ ಮಾಡಿಸಿದ್ರು.

ಯಾಕೆ ಅರಮನೆ ಮೈದಾನದಲ್ಲಿ ಲಕ್ಯಾಂತರ ರೂಪಾಯಿ ಕರ್ಚು ಮಾಡಿ ಅಬಿಯಾನ ಮಾಡ್ತಿರಬೇಕಾದ್ರೆ ಅಲ್ಲಿ ಕೆಲ್ಸ ಸುಲಬವಾಗಿರ್ಬೇಕಾಲ್ವ ಅಂತ ನಾನು ನನ್ನ ತೆರಿಗೆ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದಾಗ ತಿಳಿತು, ಇಲ್ಲಿ ತೆರಿಗೆ ಪೈಲ್ ಮಾಡೊದು ಅಶ್ಟು ಸುಲಬವಲ್ಲ. ಇದು ಬಲೇ ಕಶ್ಟದ ಕೆಲ್ಸ. ಒಳಗೆ ಹೋಗ್ತಿದ್ದಂಗೆ ನನಗೆ ಅಯ್ಯೋ ಮತ್ತೇನಾದ್ರು ಇಂಗ್ಲೀಶ್ ನವರು ಇಲ್ಲಿ ಆಡಳಿತ ಶುರು ಮಾಡಿದ್ರ ಅನ್ನೊ ಆತಂಕ ಆಯ್ತು. ಯಾಕಂದ್ರೆ ಇಲ್ಲಿನ ವ್ಯವಸ್ತೆಗಳು ಇಂಗ್ಲೀಶ್ ಗೊತ್ತಿರುವವರಿಗೆ ಮಾತ್ರ! ಸರಿ ಇಲ್ಲಿ ಕೆಲವು ಪುಸ್ತಕಗಳನ್ನ ಮಾರ್ತಿದ್ರು ಅಲ್ಲಿ ಹೋಗಿ ನೊಡೋಣ ಕನ್ನಡದ ತೆರಿಗೆ ಗೆ ಬಗೆಗಿನ ಪುಸ್ತಕ ಇದ್ಯ ನೊಡಿದ್ರೆ ಅಲ್ಲಿದಿದ್ದು ಬರಿ ಇಂಗ್ಲೀಶ್ ಮತ್ತು ಹಿಂದಿ ಪುಸ್ತಕಗಳು.

ಇದನ್ನೆಲ್ಲಾ ನೋಡಿದ್ರೆ, ಪ್ರತಿ ವರ್ಶ ಕನ್ನಡಿಗರಿಂದ ಲಕ್ಯಾಂತರ ಕೊಟಿ ಹಣ ಆದಾಯ ತೆರಿಗೆ ಇಲಾಕೆಗೆ ಹೋಗುತ್ತೆ. ಆದ್ರೆ ತೆರಿಗೆ ಬಗ್ಗೆ ತಿಳಿಯೋಕ್ಕೆ ಒಂದೇ ಒಂದು ಪುಸ್ತಕ ಕೂಡ ಕನ್ನಡದಲ್ಲಿ ಇಲ್ಲ, ಅಪ್ಲಿಕೇಶನ್, ಸೂಚನೆಗಳಿರೋ ನಾಮಪಲಕಗಳಲ್ಲಿ ಎಲ್ಲೂ ಕರ್ನಾಟಕದ ಜನ ಬಳಸೋ ಬಾಶೆ ಕನ್ನಡಕ್ಕೆ ಒಂದೇ ಒಂದು ಚಿಕ್ಕ ಸ್ತಾನ ಕೂಡ ಇಲ್ಲ. ತೆರಿಗೆ ರಿಟರ್ನ್ ಪೈಲ್ ಮಾಡಬೇಕು ಅಂದ್ರೆ ಇಂಗ್ಲಿಶ್ ಅತವಾ ಹಿಂದಿ ಗೊತ್ತಿರಬೇಕು ಅನ್ನೊ ತರ ವಾತಾವರಣ ನಿರ್ಮಾಣ ಮಾಡೊಕ್ಕೆ ಹೊರಟಿದೆಯೇ ನಮ್ಮ ಆದಾಯ ತೆರಿಗೆ ಇಲಾಕೆ? ಬಾರತ ಒಕ್ಕೂಟ ವ್ಯವಸ್ತೆಯಲ್ಲಿ ಕನ್ನಡಿಗನಿಗೆ ತನ್ನ ದೇಶದ ಆದಾಯ ತೆರಿಗೆ ನಿಯಮಗಳನ್ನ ತಿಳಿಯಲು ಬೇರೊಂದು ಬಾಶೆ ಕಲಿಯಬೇಕಾದ ವ್ಯವಸ್ತೆ ನಿರ್ಮಿಸಿರುವುದು ಸರಿಯೇ? ಜನರಿಂದ ತೆರಿಗೆ ಒಟ್ಟುಹಾಕೊ ಆದಾಯ ಇಲಾಕೆಯೇ ಕನ್ನಡವನ್ನ ಮರೆತರೇ, ತೆರಿಗೆಯನ್ನ ಬಳೋಸೋ ಇತರೇ ಇಲಾಕೆಗಳಲ್ಲಿ ಕನ್ನಡದ ಕತೇ ಹೇಗೆ ಅನ್ನೊದನ್ನ ಊಹಿಸಿಕೊಳ್ಳಬಹುದು.

ಒಬ್ಬ ಸಾಮಾನ್ಯ ಕನ್ನಡಿಗ ತಾನು ಸುಲಬವಾಗಿ ತೆರಿಗೆ ಬಗ್ಗೆ ಅರ್ತ ಮಾಡಿಕೊಳ್ಳೊಕ್ಕೆ ಮತ್ತು ಸುಲಬವಾಗಿ ತನ್ನ ತೆರಿಗೆ ರಿಟರ್ನ ಪೈಲ್ ಮಾಡೊತರ ವ್ಯವಸ್ತೆಯನ್ನ ಮಾಡೊದ್ರಲ್ಲಿ ನಮ್ಮ ಆದಾಯ ತೆರಿಗೆ ಇಲಾಕೆ ಸಂಪೂರ್ಣವಾಗಿ ವಿಪಲವಾಗಿದೆ. ಇದರಿಂದ ಕನ್ನಡಿಗರು ಬೇರೊಬ್ಬ ವ್ಯಕ್ತಿಯನ್ನ ಅವಲಂಬಿಸುವಂತೆ ಆಗಿರೋದು ನಿಜಕ್ಕೂ ದುರಂತ!

ಮುಂದಿನ ಬಾರಿಯಾದರೂ ಆದಾಯ ತೆರಿಗೆ ಇಲಾಕೆ ತನ್ನ ತಪ್ಪನ್ನ ತಿದ್ದಿಕೊಂಡು ಕನ್ನಡಿಗರ ಸ್ವಾವಲಂಬಿಗಳಾಗಿ ತಮ್ಮ ಆದಾಯ ತೆರಿಗೆ ವಿಶಯವನ್ನ ತಾವೇ ಅರಿತುಕೊಳ್ಳಲು ಅವಕಾಶವಾಗುವಂತೆ ವ್ಯವಸ್ತೆ ಕಲ್ಪಿಸವೇಕೆಂದು ಆಶಿಸುತ್ತೇನೆ.

ಬುಧವಾರ, ಆಗಸ್ಟ್ 3, 2011

ಸಂಸತ್ತಿನಲ್ಲಿ ಕನ್ನಡದ ಕಂಪು ಸದಾ ಮೊಳಗಲಿ

ನೆನ್ನೆ ನಡೆದ ಸಂಸತ್ ಕಲಾಪದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾದ ಲೋಕಸಬಾ ಸದಸ್ಯರಾದ ಚಲುವರಾಯಸ್ವಾಮಿಯವರು ಕನ್ನಡದಲ್ಲಿ ಬಾಶಣ ಮಾಡಿ ಗಮನ ಸೆಳೆದಿದ್ದಾರೆ. ಬಹಳ ದಿನಗಳ ಮೇಲೆ ಸಂಸತ್ತಿನಲ್ಲಿ ಕನ್ನಡದ ಕಂಪು ಮೊಳಗಿದೆ.


೧೯೬೭ ರಲ್ಲಿ ಲೋಕಸಬೆಯ ಕಲಾಪಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ ಹೆಚ್ ಪಟೇಲ್ ರವರು ಬಾಶಣ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲಬೇಕು.

ಲೋಕಸಬೆ ಕಲಾಪಗಳಿಗೆ ಹಿಂದಿ/ಇಂಗ್ಲೀಶ್ ಬರಲ್ಲ ಅಂತ ಹಲವಾರು ಜನ ಹಿಂದಿಯೇತರ ಲೋಕಸಬಾ ಸದಸ್ಯರು ಕಲಾಪಗಳಿಗೆ ಹೋಗದೆ ಅತವಾ ಹೋದರು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳದ ಬಗ್ಗೆ ಕೇಳಿದ್ದಿವಿ. ಆದರೆ ತಮ್ಮ ಬಾಶೆಯಲ್ಲು ಬಾಶಣ ಮಾಡಲು ಪ್ರಜಾಪ್ರಬುತ್ವದಲ್ಲಿ ಅವಕಾಶವಿದ್ದರು ಹಲವಾರು ಜನ ಸದಸ್ಯರು ತಮ್ಮ ಬಾಶೆಯನ್ನ ಬಳಸದಿರುವುದು ದುರಂತವೇ! ನಿಜಕ್ಕು ಅವರು ತಮ್ಮ ಬಾಶೆಯನ್ನ ಬಳಸಿದ್ದೇ ಆದಲ್ಲಿ ವಿಶಯವನ್ನ ಅತ್ಯಂತ ನೇರ ಮತ್ತು ನಿಕರವಾಗಿ ಹೇಳಬಹುದಲ್ಲದೇ ಲೋಕಸಬಾ ಟಿವಿ ಅತವಾ ಇನ್ಯಾವುದೋ ಟಿವಿಯಲ್ಲಿ ಅವರವರ ಕ್ಷೇತ್ರದ ಜನರಿಗೂ ತಾವು ಆಯ್ಕೆ ಮಾಡಿ ಕಳಿಸಿದ ಸದಸ್ಯ ಏನ್ ಮಾತಾಡ್ತಿದ್ದಾರೆ, ಯಾವ ವಿಶಯ ಪ್ರಸ್ತಾಪಿಸುತ್ತಿದ್ದಾರೆ ಅನ್ನೊದು ತಿಳಿಯೋ ಹಾಗೆ ಆಗುತ್ತೆ.

ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವಾರು ಜನರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ, ನಾಡಿನ ಬಗೆಗಿನ ಪ್ರೀತಿಯನ್ನ ತೋರಿಸಿದ್ದಾರೆ. ಕನ್ನಡ ಬಾಶೆಯನ್ನ ಬರಿ ಪ್ರಮಾಣವಚನಕ್ಕೆ ಮಾತ್ರ ಮೀಸಲಿಡದೇ ಎಲ್ಲಾ ರೀತಿಯ ಚರ್ಚೆಯಲ್ಲಿ ಕನ್ನಡ ಬಾಶೆಯನ್ನು ಬಳಸುವಂತಾಗಬೇಕು.ನೆನ್ನೆಯ ಕನ್ನಡ ಬಾಶಣ ಎಲ್ಲಾ ಲೋಕ ಸಭಾ ಸದಸ್ಯರಿಗೂ ಮಾದರಿಯಾಗಲಿ, ಮುಂದಿನ ದಿನಗಳಲ್ಲಿ ಲೋಕಸಬೆಯಲ್ಲಿ ನಮ್ಮ ನಾಡಿನ ಬಗೆಗಿನ ವಿಶಯಗಳ ಚರ್ಚೆ ನಮ್ಮ ಬಾಶೆಯಲ್ಲೇ ನಡೆಯಲಿ.

ಮುಕ್ಯವಾಗಿ- ಇದೆಲ್ಲಾ ನಡೆಯುತ್ತಿರುವುದು ಕನ್ನಡಿಗರಲ್ಲಿ ಆಗುತ್ತಿರೋ ಜಾಗ್ರುತಿಯಿಂದಲೇ. ಕನ್ನಡಿಗ ತನ್ನ ಬಾಶೆಯ ಬಗ್ಗೆ ಜಾಗ್ರುತಿ ಹೊಂದಿದಲ್ಲಿ ಎಲ್ಲಾ ಸದಸ್ಯರು ಕನ್ನಡದಲ್ಲೇ ಬಾಶಣ ಮಾಡುವಂತಾಗುತ್ತಾರೆ.