ಬುಧವಾರ, ಆಗಸ್ಟ್ 22, 2012

ಬೆಂಗಳೂರು ಟ್ರಾಪಿಕ್ ಮೇಲೆ ಬೀಸುತ್ತಿರುವ ಕನ್ನಡದ ತಂಗಾಳಿ

ಕೆಲವು ದಿನಗಳ ಹಿಂದೆ ಬೆಂಗಳೂರು ಟ್ರಾಪಿಕ್ ಪೋಲೀಸ್ ಇಲಾಕೆಯಲ್ಲಿ ಆಗುತ್ತಿರುವ ಕನ್ನಡದ ಕಡೆಗಣನೆಯ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆನು. ಅವುಗಳಲ್ಲಿ  ಮುಕ್ಯವಾಗಿ-


  • ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡವಿಲ್ಲದಿರುವುದು
  • ಸಾರ್ವಜನಿಕ ಜಾಗದಲ್ಲಿ ಜನರಲ್ಲಿ ಜಾಗ್ರುತಿ ಮೂಡಿಸಲೆಂದು ಮಾಡಿದ್ದ ವಿಡಿಯೋನಿಂದ ಕನ್ನಡವನ್ನು ಕೈಬಿಟ್ಟಿದ್ದು
  •  ಆಟೋ ಚಾಲಕರ ಮಾಹಿತಿಯುಳ್ಳ ಚೀಟಿಯಲ್ಲಿ ಕನ್ನಡವನ್ನು ಕೈಬಿಟ್ಟಿದ್ದು
  • ಪೇಸ್ ಬುಕ್ಕಿನ ಕಾತೆಯಲ್ಲಿ ಇಂಗ್ಲೀಶ್ ನಲ್ಲಿ ಮಾತ್ರ ಮಾಹಿತಿ ಹಾಕುತ್ತಿದ್ದುದ್ದು
  • ದಂಡ ಕಟ್ಟಿದ್ದಕ್ಕೆ ಕೊಡುವ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಇಲ್ಲದಿರುವುದು
ಹೀಗೆ ಹಲವಾರು ಕಡೆಗಳಲ್ಲಿ ಟ್ರಾಪಿಕ್ ಪೋಲೀಸ್ ಇಲಾಕೆಯು ಕನ್ನಡವನ್ನು ಕಡೆಗಣಿಸಿತ್ತು. ಕನ್ನಡದ ಕಡೆಗಣನೆಯ ಬಗ್ಗೆ ಹಲವಾರು ಜಾಗ್ರುತ ಕನ್ನಡಿಗರು ದನಿ ಎತ್ತಿದ್ದರು. ಜಾಗ್ರುತ ಕನ್ನಡಿಗರ ಒತ್ತಾಯದ ಮೇರೆಗೆ ಇದೀಗ ಇಲಾಕೆಯು  ಒಂದೊಂದಾಗಿ ಕನ್ನಡವಿಲ್ಲದ ಕಡೆಗಳೆಲ್ಲಾ ಕನ್ನಡವನ್ನು ಬಳಕೆ ಮಾಡಲು ಪ್ರಾರಂಬಿಸಿದೆ, ಇದು ನಿಜಕ್ಕೂ ಸಂತೋಶದ ಸುದ್ದಿ. 

ಈಗ ನಿಲ್ದಾಣವಿಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲಾಗಿದೆ. ಟ್ರಾಪಿಕ್ ಜಾಗ್ರುತಿ ವಿಡಿಯೋ ನಲ್ಲಿ ಕನ್ನಡವನ್ನು ಬಳಸಲಾಗಿದೆ. ಆಟೋ ಚಾಲಕರ ವಿವರವುಳ್ಳ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗಿದೆ. ಪೇಸ್ ಬುಕ್ಕಿನಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗುತ್ತಿದೆ ಜೊತೆಗೆ ದಂಡ ಕಟ್ಟಿದ್ದಕ್ಕೆ ಕೊಡುವ ರಶೀತಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಕಾಣುವುದೆಂಬ ಆಶ್ವಾಸನೆಯನ್ನು ನೀಡಿದ್ದಾರೆ. 

ಪೋಲೀಸ್ ಇಲಾಕೆಯನ್ನು ಜನರ ಬಳಿಗೆ ಕೊಂಡೊಯ್ಯಲು ಆಡಳಿತದಲ್ಲಿ ಕನ್ನಡದ ಬಳಕೆ ಅತ್ಯವಶ್ಯಕ. ಇದನ್ನು ಮನಗಂಡು  ಕನ್ನಡದ ಬಳಕೆಗೆ ಮುಂದಾಗಿರುವ ಟ್ರಾಪಿಕ್ ಪೋಲೀಸ್  ಕಮಿಶನರ್ ಸಲೀಂ ರವರಿಗೆ ಮತ್ತು ಇಲಾಕೆಯ ಇನ್ನಿತರ ಅದಿಕಾರಿಗಳಿಗೆ ಅಬಿನಂದನೆಗಳು. ಟ್ರಾಪಿಕ್ ಇಲಾಕೆಯ ಈ ನಡೆ ಕನ್ನಡವನ್ನು ಕಡೆಗಣಿಸುತ್ತಿರುವ ಇನ್ನಿತರ ಇಲಾಕೆಗಳಿಗೆ ಮಾದರಿಯಾಗಲಿ.