ಶುಕ್ರವಾರ, ನವೆಂಬರ್ 4, 2011

ನಮ್ಮ ತ್ಯಾಗದಿಂದಲೇ ಅಲ್ಲವೇ ನಮ್ಮ ಮೆಟ್ರೋ ಓಡುತ್ತಿರುವುದು?

ನಮ್ಮ ಮೆಟ್ರೋನ ಬಗ್ಗೆ ನವಂಬರ್ 3 ರಂದು ಡೆಕನ್ ಹೆರಾರ್ಡ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿದೆ, ಈ ವರದಿಯ ಪ್ರಕಾರ, ನಮ್ಮ ಮೆಟ್ರೊ, ಬೆಂಗಳೂರು ನಗರ ಪಾಲಿಕೆಯ ಹಲವಾರು ಜಾಗಗಳನ್ನ ಬಿಟ್ಟಿಯಾಗಿ ವಶಪಡಿಸಿಕೊಂಡು ಅಲ್ಲಿ ಕಾಮಗಾರಿಯನ್ನ ನಡೆಸುತ್ತಿದೆ, ಪಾಲಿಕೆಯ ಸುಮಾರು 65 ರಿಂದ 70 ಸಾವಿರ ಅಡಿಗಳಶ್ಟು ಜಾಗ ಮತ್ತು ಅಲ್ಲಿ ಇರುವ ಕಟ್ಟಡ ನಮ್ಮ ಮೆಟ್ರೋ ಪಾಲಾಗಿದೆ. ಈ ಆಸ್ತಿ ನೂರಾರು ಕೋಟಿ ಬೆಲೆಬಾಳುತ್ತದೆ.

ಇವಿಶ್ಟೇ ಅಲ್ಲದೇ ನಮ್ಮ ಮೆಟ್ರೊಗೆಂದು ನಗರದ ಹಲವಾರು ಕಡೆಗಳಲ್ಲಿ ನಮ್ಮ ನಾಡಿನ ಜನರು ಮಾರುಕಟ್ಟೆಯ ದರಕ್ಕಿಂತ ಕಡಿಮೆ ಹಣಕ್ಕೆ ತಮ್ಮ ಜಾಗವನ್ನ ಕೊಟ್ಟಿದ್ದಾರೆ, ಹಲವಾರು ಅಂಗಡಿ ಮುಂಗಟ್ಟುಗಳನ್ನ ನಮ್ಮ ಮೆಟ್ರೋಗೆಂದು ಮುಚ್ಚಿಸಲಾಗಿದೆ. ಬೆಂಗಳೂರಿನಾದ್ಯಂತ ನಡೆಯುತ್ತಿರುವ ಮೇಟ್ರೋ ಕಾಮಗಾರಿಯಿಂದ ಉಂಟಾಗಿರುವ ಟ್ರಾಪಿಕ್ ವೈಪರಿತ್ಯವನ್ನು ದಿನ ನಿತ್ಯ ನಮ್ಮ ಜನ ಅನುಬವಿಸುತ್ತಿದ್ದಾರೆ.. ಇಂತಹ ನಮ್ಮ ನಾಡಿನ ಜನರ ತ್ಯಾಗದಿಂದಲೇ ನಮ್ಮ ಮೆಟ್ರೊ ಬಿಡುಗಡೆಯಾಗಿ ಓಡಾಡಲು ಸಾದ್ಯವಾಗಿರುವುದು ಅಲ್ಲವೇ? ಆದರೆ ಇವ್ಯಾವು ಲೆಕ್ಕಕ್ಕೆ ಇಲ್ಲವೆಂಬಂತೆ ನಮ್ಮ ಮೆಟ್ರೊ ಬೆಂಗಳೂರಿಗರನ್ನ ನಡೆಸಿಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ..

ನಮ್ಮ ನಾಡಿನ ಜನರ ತ್ಯಾಗವಿದ್ದರೂ ಸಹ ನಮ್ಮ ನಾಡಿನ ಬಾಶೆಗೆ ಮನ್ನಣೆ ಸಿಗಬೇಕು, ನಮ್ಮ ನಾಡಿನ ಜನರಿಗೆ ಉದ್ಯೋಗ ಸಿಗಬೇಕು ಎನ್ನುವುದನ್ನ ಬೇಡಿಕೊಳ್ಳುವ ಪರಿಸ್ತಿತಿಯನ್ನ ನಮ್ಮ ಮೆಟ್ರೋ ನ ಅದಿಕಾರಿಗಳು ನಿರ್ಮಿಸಿದ್ದಾರೆ. ನಮ್ಮ ನಾಡಿನ ಜನರ ಬಾಶಾ ಮತ್ತು ಉದ್ಯೋಗದ ಕಳಕಳಿಗೆ, ಮೆಟ್ರೊ ಅದಿಕಾರಿಗಳು ಉದ್ದಟ ತನ ತೋರುತ್ತಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಪರರಾಜ್ಯದಿಂದ ಬಂದು ನಮ್ಮ ಮೆಟ್ರೊನಲ್ಲಿ ಕೆಲಸ ಮಾಡುತ್ತಿರುವರುಗಳು ನಮ್ಮ ನಾಡು ನುಡಿ ವಿರುದ್ದವಾಗಿ ಮಾತನಾಡಿ ನಮ್ಮ ಸ್ವಾಬಿಮಾನವನ್ನ ಕೆರಳಿಸುವಂತೆ ಮಾಡುತ್ತಿದ್ದಾರೆ. ಕನ್ನಡ ವಿರೋದಿ ಮೆಟ್ರೊ ಅದಿಕಾರಿಗಳು ಮತ್ತು ಪರರಾಜ್ಯದಿಂದ ಬಂದು ಕನ್ನಡ ವಿರೋದಿತನ ತೋರುತ್ತಿರುವ ಮೆಟ್ರೊ ಕೆಲಸಗಾರರಿಗೆ ದಿಕ್ಕಾರವಿರಲಿ... ನಮ್ಮ ನಾಡಿನ ಜನರ ತ್ಯಾಗಕ್ಕೆ ತಕ್ಕ ಮಾನ್ಯತೆ ಸಿಗಲಿ

ಭಾನುವಾರ, ಅಕ್ಟೋಬರ್ 16, 2011

ಮೆಟ್ರೋಗೆ ರಕ್ಷಣೆ ನೀಡುವ CISF ನವರಿಗೆ ಕನ್ನಡದ ಜ್ನಾನ ಅತ್ಯಂತ ಅವಶ್ಯಕವಾದುದು.

ಬೆಂಗಳೂರು ಮೆಟ್ರೋ ಕೆಲವೇ ದಿನಗಳಲ್ಲಿ ಪ್ರಾರಂಬವಾಗುತ್ತಿದೆ. CISF ಮೆಟ್ರೋ ಗೆ ರಕ್ಷಣೆ ನೀಡತ್ತಾರೆಂದು ಹೇಳಲಾಗುತ್ತಿದೆ. CISF ನವರು ರಕ್ಷಣೆ ನೀಡುತ್ತಾರೆಂಬುದು ನಿಜಕ್ಕು ಸಂತೋಶದ ವಿಶಯ CISF ನವರಿಗೆ ಉತ್ತಮ ರೀತಿಯ ತರಬೇತಿ ಕೊಡಲಾಗಿರುತ್ತದೆ ಮತ್ತು ಇದು ದುಶ್ಟ್ರ ಕ್ರುತ್ಯಗಳ ತಡೆಗೆ ತುಂಬಾನೆ ಅನುಕೂಲಕಾರಿಯಾಗಿರುತ್ತೆ.


ಆದರೆ CISF ನವರನ್ನ ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ನೋಡಿದ್ದೇವೆ ಅವರುಗಳಿಗೆ ಕನ್ನಡದ ಜ್ನಾನವೇ ಇರುವುದಿಲ್ಲ, ಅನೇಕರು ಹಲವಾರು ಬಾರಿ ವಿಮಾನ ನಿಲ್ದಾಣದಲ್ಲಿ ಇದರಿಂದ ತೊಂದರೆಗೊಳಗಿರುವುದೂ ಉಂಟು. ತುರ್ತು ಸಮಯದಲ್ಲಿ ಪರಿಸ್ತಿತಿಯನ್ನ ನಿಬಾಯಿಸಲು ಇತರೆ ಕಟಿಣ ತರಬೇತಿಗಳಂತೆ ಕನ್ನಡ ಬಾಶೆಯ ಜ್ನಾನವೂ ಅತ್ಯಂತ ಅವಶ್ಯಕವಲ್ಲವೇ?

ಬೆಂಗಳೂರಿನ ವಿಮಾನ ನಿಲ್ದಾಣವನ್ನ ಬಳಸುವವರ ಸಂಕ್ಯೆಗಿಂತ ಮೆಟ್ರೋ ಬಳಸುವ ಜನ ಸಾಮಾನ್ಯರ ಸಂಕ್ಯೆ ಹೆಚ್ಚಾಗಿಯೇ ಇರುತ್ತದೆ. ಮೆಟ್ರೋ ನಿಲ್ದಾಣದಲ್ಲಿ ಇರುವ CISF ನವರು ದುಶ್ಟ ಕ್ರುತ್ಯಗಳ ತಡೆಯುವುದರ ಜೊತೆಗೆ ಪ್ರಯಾಣಿಕರ ಸ್ನೇಹಿಯಾಗಿ ಅನೇಕ ಸಮಯಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ಇವರಿಗೆ ಕನ್ನಡ ಬಾಶೆಯ ಜ್ನಾನ ಇರಲೇಬೇಕು. ಇದರಿಂದ ಮೆಟ್ರೋಗೆ ರಕ್ಷಣೆ ನೀಡುವ CISF ನವರಿಗೆ ಕನ್ನಡ ಬಾಶೆಯ ಕಲಿಕೆ ಅತ್ಯಂತ ಅವಶ್ಯಕವಾದುದು ಕೂಡ.

ಬೆಂಗಳೂರು ಮೆಟ್ರೋ ನವರು CISF ನವರನ್ನ ರಕ್ಷಣೆಗೆ ಕರೆಸಿಕೊಳ್ಳುವುದರ ಜೊತೆಗೆ ಎಲ್ಲಾ CISF ಸಿಬ್ಬಂದಿಗಳಿಗೆ ಕನ್ನಡದ ಜ್ನಾನಕ್ಕಾಗಿ ತರಬೇತಿ ನಡೆಸಿ ಆ ನಂತರ ಕೆಲಸದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬೇಕು, ಇದು ಬೆಂಗಳೂರು ಮೆಟ್ರೋ ನಿಗಮದ ಕರ್ತವ್ಯ ಕೂಡ

ಶುಕ್ರವಾರ, ಸೆಪ್ಟೆಂಬರ್ 30, 2011

ಮೈಸೂರು ದಸರ ನಾಡ ಹಬ್ಬನ?

ಮೈಸೂರು ದಸರಾ ೪೦೦ ಕ್ಕು ಹೆಚ್ಚು ಆಚರಣೆಗಳನ್ನ ಕಂಡಿದ್ದು ಕೆಲವು ವರ್ಶಗಳಿಂದ ಕರ್ನಾಟಕ ಸರಕಾರ ನಾಡ ಹಬ್ಬವನ್ನಾಗಿ ಆಚರಿಸುತ್ತಿದೆ. ದಸರಾ ಸಮಯದಲ್ಲಿ ವಿದೇಶೀ ಪ್ರವಾಸಿಗರೂ ಸೇರಿದಂತೆ ಲಕ್ಶಾಂತರ ಪ್ರವಾಸಿಗರು ಮೈಸೂರು ದಸರದಲ್ಲಿ ಬಾಗವಹಿಸುತ್ತಾರೆ. ದಸರಾದಲ್ಲಿ ನಮ್ಮ ಕಲೆ ಸಂಸ್ಕ್ರುತಿ ಬಾಶೆಯನ್ನ ಎತ್ತಿ ಹಿಡಿಯಲು ಸರಕಾರ ಕೋಟ್ಯಾಂತರ ಹಣ ಬಳಸುತ್ತೆ.


ಇತ್ತೀಚಿನ ದಿನಗಳಲ್ಲಿ ದಸರದಲ್ಲಿ ಯುವ ದಸರಾ, ಮಕ್ಕಳ ದಸರಾ, ಚಲನಚಿತ್ರೋತ್ಸವ,ಕುಸ್ತಿ, ಗ್ರಾಮೀಣ ದಸರಾ, ಆಹಾರ ಮೇಳ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳ ಮೂಲಕ ಹೆಚ್ಚು ಹೆಚ್ಚು ಜನರು ದಸರಾದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕಾರ್ಯಕ್ರಮಗಳನ್ನ ರೂಪಿಸಿದೆ. ಆದರೆ..........ಈ ಕಾರ್ಯಕ್ರಮಗಳಲ್ಲಿ ಆಗುತ್ತಿರೋದೇನು?????

ನಾಡ ಹಬ್ಬದಲ್ಲಿ ನಮ್ಮ ನಾಡಿನ ಬಾಶೆ ಕಲೆ ಸಂಸ್ಕ್ರುತಿಯನ್ನ ಎತ್ತಿ ಹಿಡಿಯೋ ಕೆಲ್ಸ ಆಗಬೇಕಿತ್ತು ಆದ್ರೆ ನಮ್ಮ ನಾಡಿನದ್ದಲ್ಲದ ಕಲೆ, ಬಾಶೆ, ಸಂಸ್ಕ್ರುತಿಯನ್ನ ಎತ್ತಿ ಕುಣಿಸುತ್ತಿದ್ದಾರೆ. ಯುವ ದಸರಾದಿಂದ ಹಿಡಿದು ಅನೇಕ ದಸರಾ ಕಾರ್ಯಕ್ರಮಗಳಲ್ಲಿ ಎಲ್ಲಿಹೋದರಲ್ಲಿ ಸಿಗೋದು ಹೊರನಾಡಿನ ಕಲೆ ಸಂಸ್ಕ್ರುತಿಯ ಮೇಲುಗೈ !!!! ಇದು ಯಾಕೆ ಎಂದು ಕೇಳಿದ್ದಕ್ಕೆ ಪೇಸ್ ಬುಕ್ಕಿನಲ್ಲಿ ಇವರಿಂದ ಬಂದ ಉತ್ತರವನ್ನ ನೊಡಿ-

Mysore Dasara 2011 How come taste/likes of people appearing for these shows and also Music show at Palace are appears to be different from views/openions expressed here? If they haven't liked a show by a non-kannadiga, they would have stayed home! The programmes are not ad-hoc but they are published in advance...


ಮೈಸೂರು ದಸರ ನೊಡಲು ಬರುವ ಪ್ರವಾಸಿಗರು ನಮ್ಮ ನಾಡಿನ ಕಲೆ ಸಂಸ್ಕ್ರುತಿಯ ಪರಿಚಯ ಪಡೆಯಲು ಬರುತ್ತಾರಲ್ಲವೇ? ಈ ಪ್ರವಾಸಿಗರಿಗೆ ಸರಕಾರ ದಸರಾದ ಮೂಲಕ ಪರಿಚಯಿಸಲು ಹೊರಟಿರುವುದು ಯಾವ ಸಂಸ್ಕ್ರುತಿಯನ್ನ? ಯಾವ ಬಾಶೆಯನ್ನ? ಯಾವ ನಾಡಿನ ಕಲೆಗಳನ್ನ???ಇವರು ಮೇಲೆ ಹೇಳಿರೋದು ನಿಜವಾಗಿದ್ದಲ್ಲಿ ಸರಕಾರ ದಸರಾವನ್ನ ನಾಡ ಹಬ್ಬವಾಗಿ ಆಚರಿಸಿದ್ದರ ಅವಶ್ಯಕತೆಯೇನಿದೆ? ದಸರಾಕ್ಕೆ ಜನಿಫ಼ರ್ ಲೋಪೇಸ್ ಕರೆಸಿದ್ರೆ ಅತವಾ ಇನ್ಯಾರನ್ನೊ ಕರೆಸಿ ಕ್ಯಾಬರೆ ನಡೆಸಿದ್ರೆ ಅತವಾ ಕುಸ್ತಿ ಪಂದ್ಯಾವಳಿ ಬದಲಿಗೆ WWF championship ನಡೆಸಿದ್ರೆ ಅತವಾ ಜಂಬು ಸವಾರಿ ಜೊತೆಗಿನ ಸ್ತಬ್ದ ಚಿತ್ರಗಳ ಬದಲಿಗೆ ಮಾಡೆಲ್ ಗಳ ಕ್ಯಾಟ್ ವಾಕ್ ನಡೆಸಿದ್ರೆ ಇನ್ನು ಹೆಚ್ಚು ಜನ ಬರಬಹುದೇನೋ..... ಆದ್ರೆ ನಾಡಹಬ್ಬವನ್ನಾಗಿ ಆಚರಿಸೋ ಸರಕಾರಕ್ಕೆ ಯಾವ ಕಾರ್ಯಕ್ರಮ ನಡೆಸುವ ಮೂಲಕ ನಮ್ಮ ಸಂಸ್ಕ್ರುತಿ ಕಲೆ ಬಾಶೆಯನ್ನ ಎತ್ತಿಹಿಡಿಯಬೇಕು ಎನ್ನುವುದು ಗೊತ್ತಿರಬೇಕಲ್ವೇ?

ನಮ್ಮ ನಾಡಿಗೆ ಸಂಬಂದಪಡದ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಸರಕಾರ ಪ್ರವಾಸಿಗರಿಗೆ ಬೇರೆ ನಾಡಿನ ಕಲೆ, ಸಂಸ್ಕ್ರುತಿ ಮತ್ತು ಬಾಶೆಯನ್ನ ಪರಿಚಯಿಸಲು ಮತ್ತು ಅವಕ್ಕೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಸರಿಯೇ??? ಒಮ್ಮೆ ಯೋಚಿಸಿ...........

ಸೋಮವಾರ, ಸೆಪ್ಟೆಂಬರ್ 5, 2011

ಹಿಂದಿ ಹೇರಿಕೆಗೆ ದಿಕ್ಕಾರ ಎನ್ನೋಣ


ಬಾರತ ಬಾಶಾ ವೈವಿದ್ಯತೆಗಳಿಂದ ಕೂಡಿದ ದೇಶ. ಇಲ್ಲಿ ಎಲ್ಲಾ ಬಾಶೆಗಳಿಗೂ ತನ್ನದೇ ಆದ ವೈಶಿಶ್ಟಗಳಿವೆ. ಆದರೆ ಈ ವೈವಿದ್ಯತೆಯನ್ನ ಅರಿಯದ ಕೆಲವರು ಹಿಂದಿಯನ್ನ ರಾಶ್ಟ್ರಬಾಶೆಯನ್ನಾಗಿಸಲು ಹಲವಾರು ಬಾರಿ ಪ್ರಯತ್ನ ನಡೆಸಿದ್ದರು, ಈ ಸಮಯದಲ್ಲಿ ಹಿಂದಿಯೇತರರಿಂದ ಬಂದ ವಿರೋದದಿಂದ ಅವರ ಪ್ರಯತ್ನ ವಿಪಲವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುವ ಉದ್ದೇಶದಿಂದ, ಸೆಪ್ಟೆಂಬರ್ ೧೪, ೧೯೪೯ರಂದು ಬಾರತದ ಸಂವಿದಾನದಲ್ಲಿ ಹಿಂದಿ ಬಾಶೆಗೆ ಆಡಳಿತ ಬಾಶೆ ಎನ್ನುವ ಸ್ತಾನ ನೀಡಿಲಾಗಿದ್ದು ,ಅಂದಿನಿಂದ ಇಂದಿನವರೆಗೂ ಆಡಳಿತ ಬಾಶೆಯ ಹೆಸರಿನಲ್ಲಿ ಹಿಂದಿಯೇತರರ ಮೇಲೆ ಹಿಂದಿ ಬಾಶೆಯ ಹೇರಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಹಿಂದಿ ಹೇರಿಕೆಯ ಪರಿಣಾಮವಾಗಿ ಸರಕಾರದ ಸವಲತ್ತುಗಳಿಂದ ಹಿಡಿದು ಉದ್ಯೋಗದ ವರೆಗೆ ಹಿಂದಿ ಬಾಶೆಯನ್ನಾಡುವ ಜನರು ಮಾತ್ರ ಉಪಯೋಗ ಪಡೆದುಕೊಂಡು, ಹಿಂದಿಯೇತರರು ವಂಚನೆಗೆ ಗುರಿಯಾಗುತ್ತಿದ್ದಾರೆ ಮತ್ತು ಸರಕಾರ ಹಿಂದಿ ಬಾಶೆಗೆ ಪ್ರಾಮುಕ್ಯತೆ ದೊರೆಕಿಸಿ ಕೊಡಲು ಟೊಂಕ ಕಟ್ಟಿ ನಿಂತಿರುವುದರಿಂದ. ಇತರೇ ಬಾಶೆಗೆ ಮತ್ತು ಆ ಬಾಶೆಯನ್ನಾಡುವ ಜನರಿಗೆ ಅನ್ಯಾಯದ ಸರಮಾಲೆಗಳೇ ಸಿಗುತ್ತಿದೆ.

ಕೇಂದ್ರಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಪ್ರತಿವರ್ಶ ಹಿಂದಿಯನ್ನ ಆಡಳಿತ ಬಾಶೆಯನ್ನಾಗಿ ಮಾಡಿದ ದಿನವನ್ನ(ಸೆಪ್ಟೆಂಬರ್ ೧೪) ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ಹಿಂದಿಯೇತರರಿಗೆ ಆಮಿಶಗಳನ್ನ ಒಡ್ಡಿ ಹಿಂದಿ ಹೇರಿಕೆಗೆ ತಲೆಬಾಗುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದು ಮಾರಕವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುತ್ತಿರುವ ಹೀನ ಕ್ರುತ್ಯವನ್ನ ಒಟ್ಟಾಗಿ ಕಂಡಿಸೋಣ. ಬಾರತದ ಬಾಶಾ ವೈವಿದ್ಯತೆಯನ್ನ ಕಾಪಾಡೋಣ. ಸೆಪ್ಟೆಂಬರ್ ೧೪ ರಂದು ನಡೆಸುವ ಹಿಂದಿ ಹೇರಿಕೆ/ಹಿಂದಿ ದಿವಸ್ ಗೆ ದಿಕ್ಕಾರ ಎನ್ನೊಣ!!

ಕೊನೆಯದಾಗಿ: ಹಿಂದಿ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ರವರು ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಸೆಪ್ಟೆಂಬರ್ ೧೦ ೨೦೧೧ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಬೆಂಗಳೂರಿನ ನಯನ ಸಬಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಹಿಂದಿ ಹೇರಿಕೆಯ ಬಗ್ಗೆ ಹೆಚ್ಚಿನ ವಿಶಯಗಳನ್ನ ತಿಳಿಯಬಹುದು.

ಬುಧವಾರ, ಆಗಸ್ಟ್ 17, 2011

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತೆ!


ಕೆಲ ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬ ಗಾಡಿ ನಿಲ್ದಾಣವಲ್ಲದ ಜಾಗದಲ್ಲಿ ತನ್ನ ಕಾರನ್ನ ನಿಲ್ಲಿಸಿದ್ದನಂತೆ, ಆ ಕಾರಣಕ್ಕೆ ಬೆಂಗಳೂರು ನಗರ ಟ್ರಾಪಿಕ್ ಪೋಲೀಸರು ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ೧೦೦% ದಂಡ ಕಟ್ಟಬೇಕು ಅಂತ ಒಂದು ಚೀಟಿನ ಕಾರಿಗೆ ಅಂಟಿಸಿ ಹೋಗಿದ್ದರಂತೆ-

ಆ ಚೀಟಿ ನೋಡಿ-



ನನ್ನ ಸ್ನೇಹಿತ ಆ ಚೀಟಿ ತಗೊಂಡು ಪೋಲೀಸ್ ಟಾಣಿಗೆ ಹೋಗಿ ದಂಡ ಕಟ್ಟಿದ ನಂತರ- ಯಾಕ್ ಸಾರ್ ಈ ಚೀಟಿ ಬರಿ ಇಂಗ್ಲೀಶ್ ನಲ್ಲೆ ಇದೆ, ಇದರಲ್ಲಿ ೨೪ ಗಂಟೆ ಒಳಗೆ ದಂಡ ಕಟ್ಟಬೇಕು ಅಂತ ಬೇರೆ ಇದೆ. ಅಕಸ್ಮಾತ್ ಇಂಗ್ಲೀಶ್ ಗೊತ್ತಿಲ್ಲದವರ ಕೈಗೆ ಇದು ಸಿಕ್ಕಿದ್ರೆ ಏನ್ ಗತಿ ಪಾಪ, ಅಂತ ಅಲ್ಲಿನ ಅದಿಕಾರಿನ ಕೇಳಿದ್ದನೆ. ಅದಕ್ಕೆ ಪೋಲೀಸ್ ಅದಿಕಾರಿ ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅದುಕ್ಕೆ ಇಂಗ್ಲೀಶ್ ನಲ್ಲಿ ಇದೆ ಅಂತ ಹೇಳಿ ಕಳಿಸಿದ್ದಾರೆ.

ಬೆಂಗಳೂರು ಇಂಟರ್ನಾಶಿನಲ್ ಸಿಟಿ ಅಂತ ಇಟ್ಟುಕೊಂಡರೂ ನಮ್ಮ ಬಾಶೆನ ಬಿಡಬೇಕು, ಇಂಗ್ಲೀಶ್ ಬಳಸಬೇಕು ಎಂದೇನಿಲ್ಲ ಅಲ್ವ? ಜಗತ್ತಿನ ಎಲ್ಲಾ ಇಂಟರ್ನಾಶಿನಲ್ ಸಿಟಗಳಲ್ಲಿ ಅವರವರ ಬಾಶೆಗಳಿಗೆ ಪ್ರಾಮುಕ್ಯತೆ ಕೊಡ್ತಾರೆ ಹೊರೆತು ಇಂಗ್ಲೀಶ್ ಅತವಾ ಇನ್ಯಾವುದೋ ಬಾಶೆಗೆ ಅಲ್ಲ ಅಲ್ವ.

ಕರ್ನಾಟಕ ಸರಕಾರದ ಸಂಸ್ತೆಯಾದ ಬೆಂಗಳೂರು ಟ್ರಾಪಿಕ್ ಪೋಲೀಸ್ ಸಂಸ್ತೆ ತನಗೂ ಸರಕಾರದ ಆಡಳಿತದಲ್ಲಿ ಕನ್ನಡದ ನಿಯಮಕ್ಕು ಯಾವುದೇ ಸಂಬಂದವಿಲ್ಲ. ತನಗೆ ಸರಕಾರದ ನಿಯಮ ಅನ್ವಯಿಸೊಲ್ಲ ಅನ್ನೊ ತರ ಎಲ್ಲೆಲ್ಲಿ ಆಗುತ್ತೊ ಅಲ್ಲೆಲ್ಲ ಕನ್ನಡವನ್ನ ತೆಗೆದುಹಾಕೊ ಕೆಲ್ಸ ಮಾಡ್ತಿದೆ, ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರಿನಲ್ಲಿ ಗಾಡಿ ಓಡಿಸಬೇಕು ಅಂದ್ರೆ ಬೆಂಗಳೂರು ಇಂಟರ್ನಾಶಿನಲ್ ಸಿಟಿ, ಇಲ್ಲಿ ಗಾಡಿ ಓಡಿಸಬೇಕು ಅಂದ್ರೆ ಇಂಗ್ಲೀಶ್ ಗೊತ್ತಿರಬೇಕು ಅನ್ನೊ ನಿಯಮ ಹೊರಡಿಸಿದ್ರು ಅಚ್ಚರಿಪಡಬೇಕಾಗಿಲ್ಲ.

ಅಚ್ಚರಿಪಡಬೇಕಾದ ವಿಶಯ ಅಂದ್ರೆ, ತಂತ್ರಜ್ನಾನ ಬಳಸುವ ನೆಪದಲ್ಲಿ, ಸಂಸ್ತೆ ತನ್ನಲ್ಲ ವ್ಯವಸ್ತೆಯನ್ನು ವಲಸಿಗರಿಗೆಂದೇ ನಿರ್ಮಿಸಲು ಹೊರಟಿದೆ. ಕನ್ನಡಿಗರಿಗೆ ತೊಂದರೆ ಆದ್ರು ಪರವಾಗಿಲ್ಲ, ವಲಸಿಗರಿಗೆ ತೊಂದರೆ ಆಗಬಾರದು ಎನ್ನುವಂತಹ ಸಂಸ್ತೆಯ ನಿಲುವು ಕಂಡನಾಹ೯ವಾದುದು. ಸರಕಾರ ಮತ್ತು ಆಡಳಿತದಲ್ಲಿ ಕನ್ನಡದ ಅನುಶ್ಟಾನಕ್ಕೆಂದೇ ಮಾಡಿರುವ ಕನ್ನಡ ಅಬಿವ್ರುದ್ದಿ ಪ್ರಾದಿಕಾರ ಇತ್ತಕಡೆ ಗಮನ ಹರಿಸಬೇಕು.

ಸೋಮವಾರ, ಆಗಸ್ಟ್ 8, 2011

ಆದಾಯ ತೆರಿಗೆ ನಿಯಮಗಳನ್ನ ತಿಳಿಬೇಕಾದ್ರೆ ಹಿಂದಿ/ಇಂಗ್ಲೀಶ್ ಗೊತ್ತಿರಬೇಕಾ?

ಆದಾಯ ತೆರಿಗೆ ಇಲಾಕೆಯವರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ರಿಟರ್ನ್ ಪೈಲ್ ಮಾಡೊಕ್ಕೆ ಅವಕಾಶ ಆಗ್ಲಿ ಅಂತ ವ್ಯವಸ್ತೆ ಮಾಡಿದ್ದರು, ಅಶ್ಟು ಕರ್ಚು ಮಾಡಿದ್ರು ಅದು ಬರೆ ಕೆಲವೇ ಕೆಲವು ಮಂದಿಗೆ ಉಪಯೋಗವಾಗುವಂತಿದ್ದುದ್ದು ಮಾತ್ರ ದುರದ್ರುಶ್ಟಕರ. ಹೇಗೆ ಅಂತಿರ? ಮುಂದೆ ಓದಿ......


ಕಳೆದ ವಾರ ನನಗೆ ತಿಳಿದವರೊಬ್ಬರು ಐಟಿ ರಿಟರ್ನ್ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದವರು ದಂಗಾಗಿ ಮನೆಗೆ ವಾಪಸ್ ಬಂದು, ಯಾರಾದ್ರು ಸಿಎ ಗೊತ್ತಿದ್ದ್ರೆ ಹೇಳಪ್ಪ ಅಂತ ನನ್ನ ಕೇಳಿದ್ರು, ಅದಕ್ಕೆ ನಾನು ಸಿಎ ಹತ್ತಿರ ಯಾಕೆ ಹೋಗ್ತಿರಾ, ಸುಮ್ನೆ ಅರಮನೆ ಮೈದಾನಕ್ಕೆ ಹೋಗಿ ಅಲ್ಲಿ ಎಲ್ಲಾ ಆರಾಮಗಿ ಆಗುತ್ತೆ ಅಂದೆ. ಅದಕ್ಕೆ ಅವರು, ತಾವು ಅರಮನೆ ಮೈದಾನಕ್ಕೆ ಹೋಗಿದ್ದಾಗಿ ಮತ್ತು ಅಲ್ಲಿ ಪೈಲ್ ಮಾಡೊದು ಅಶ್ಟು ಸುಲಬ ಅಲ್ಲ ಅಂತ ಹೇಳಿದ್ರು. ಆಮೆಲೆ, ಅವರು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಸಿಎ ಕಡೆಯಿಂದ ಐಟಿ ರಿಟರ್ನ್ಸ್ ಪೈಲ್ ಮಾಡಿಸಿದ್ರು.

ಯಾಕೆ ಅರಮನೆ ಮೈದಾನದಲ್ಲಿ ಲಕ್ಯಾಂತರ ರೂಪಾಯಿ ಕರ್ಚು ಮಾಡಿ ಅಬಿಯಾನ ಮಾಡ್ತಿರಬೇಕಾದ್ರೆ ಅಲ್ಲಿ ಕೆಲ್ಸ ಸುಲಬವಾಗಿರ್ಬೇಕಾಲ್ವ ಅಂತ ನಾನು ನನ್ನ ತೆರಿಗೆ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದಾಗ ತಿಳಿತು, ಇಲ್ಲಿ ತೆರಿಗೆ ಪೈಲ್ ಮಾಡೊದು ಅಶ್ಟು ಸುಲಬವಲ್ಲ. ಇದು ಬಲೇ ಕಶ್ಟದ ಕೆಲ್ಸ. ಒಳಗೆ ಹೋಗ್ತಿದ್ದಂಗೆ ನನಗೆ ಅಯ್ಯೋ ಮತ್ತೇನಾದ್ರು ಇಂಗ್ಲೀಶ್ ನವರು ಇಲ್ಲಿ ಆಡಳಿತ ಶುರು ಮಾಡಿದ್ರ ಅನ್ನೊ ಆತಂಕ ಆಯ್ತು. ಯಾಕಂದ್ರೆ ಇಲ್ಲಿನ ವ್ಯವಸ್ತೆಗಳು ಇಂಗ್ಲೀಶ್ ಗೊತ್ತಿರುವವರಿಗೆ ಮಾತ್ರ! ಸರಿ ಇಲ್ಲಿ ಕೆಲವು ಪುಸ್ತಕಗಳನ್ನ ಮಾರ್ತಿದ್ರು ಅಲ್ಲಿ ಹೋಗಿ ನೊಡೋಣ ಕನ್ನಡದ ತೆರಿಗೆ ಗೆ ಬಗೆಗಿನ ಪುಸ್ತಕ ಇದ್ಯ ನೊಡಿದ್ರೆ ಅಲ್ಲಿದಿದ್ದು ಬರಿ ಇಂಗ್ಲೀಶ್ ಮತ್ತು ಹಿಂದಿ ಪುಸ್ತಕಗಳು.

ಇದನ್ನೆಲ್ಲಾ ನೋಡಿದ್ರೆ, ಪ್ರತಿ ವರ್ಶ ಕನ್ನಡಿಗರಿಂದ ಲಕ್ಯಾಂತರ ಕೊಟಿ ಹಣ ಆದಾಯ ತೆರಿಗೆ ಇಲಾಕೆಗೆ ಹೋಗುತ್ತೆ. ಆದ್ರೆ ತೆರಿಗೆ ಬಗ್ಗೆ ತಿಳಿಯೋಕ್ಕೆ ಒಂದೇ ಒಂದು ಪುಸ್ತಕ ಕೂಡ ಕನ್ನಡದಲ್ಲಿ ಇಲ್ಲ, ಅಪ್ಲಿಕೇಶನ್, ಸೂಚನೆಗಳಿರೋ ನಾಮಪಲಕಗಳಲ್ಲಿ ಎಲ್ಲೂ ಕರ್ನಾಟಕದ ಜನ ಬಳಸೋ ಬಾಶೆ ಕನ್ನಡಕ್ಕೆ ಒಂದೇ ಒಂದು ಚಿಕ್ಕ ಸ್ತಾನ ಕೂಡ ಇಲ್ಲ. ತೆರಿಗೆ ರಿಟರ್ನ್ ಪೈಲ್ ಮಾಡಬೇಕು ಅಂದ್ರೆ ಇಂಗ್ಲಿಶ್ ಅತವಾ ಹಿಂದಿ ಗೊತ್ತಿರಬೇಕು ಅನ್ನೊ ತರ ವಾತಾವರಣ ನಿರ್ಮಾಣ ಮಾಡೊಕ್ಕೆ ಹೊರಟಿದೆಯೇ ನಮ್ಮ ಆದಾಯ ತೆರಿಗೆ ಇಲಾಕೆ? ಬಾರತ ಒಕ್ಕೂಟ ವ್ಯವಸ್ತೆಯಲ್ಲಿ ಕನ್ನಡಿಗನಿಗೆ ತನ್ನ ದೇಶದ ಆದಾಯ ತೆರಿಗೆ ನಿಯಮಗಳನ್ನ ತಿಳಿಯಲು ಬೇರೊಂದು ಬಾಶೆ ಕಲಿಯಬೇಕಾದ ವ್ಯವಸ್ತೆ ನಿರ್ಮಿಸಿರುವುದು ಸರಿಯೇ? ಜನರಿಂದ ತೆರಿಗೆ ಒಟ್ಟುಹಾಕೊ ಆದಾಯ ಇಲಾಕೆಯೇ ಕನ್ನಡವನ್ನ ಮರೆತರೇ, ತೆರಿಗೆಯನ್ನ ಬಳೋಸೋ ಇತರೇ ಇಲಾಕೆಗಳಲ್ಲಿ ಕನ್ನಡದ ಕತೇ ಹೇಗೆ ಅನ್ನೊದನ್ನ ಊಹಿಸಿಕೊಳ್ಳಬಹುದು.

ಒಬ್ಬ ಸಾಮಾನ್ಯ ಕನ್ನಡಿಗ ತಾನು ಸುಲಬವಾಗಿ ತೆರಿಗೆ ಬಗ್ಗೆ ಅರ್ತ ಮಾಡಿಕೊಳ್ಳೊಕ್ಕೆ ಮತ್ತು ಸುಲಬವಾಗಿ ತನ್ನ ತೆರಿಗೆ ರಿಟರ್ನ ಪೈಲ್ ಮಾಡೊತರ ವ್ಯವಸ್ತೆಯನ್ನ ಮಾಡೊದ್ರಲ್ಲಿ ನಮ್ಮ ಆದಾಯ ತೆರಿಗೆ ಇಲಾಕೆ ಸಂಪೂರ್ಣವಾಗಿ ವಿಪಲವಾಗಿದೆ. ಇದರಿಂದ ಕನ್ನಡಿಗರು ಬೇರೊಬ್ಬ ವ್ಯಕ್ತಿಯನ್ನ ಅವಲಂಬಿಸುವಂತೆ ಆಗಿರೋದು ನಿಜಕ್ಕೂ ದುರಂತ!

ಮುಂದಿನ ಬಾರಿಯಾದರೂ ಆದಾಯ ತೆರಿಗೆ ಇಲಾಕೆ ತನ್ನ ತಪ್ಪನ್ನ ತಿದ್ದಿಕೊಂಡು ಕನ್ನಡಿಗರ ಸ್ವಾವಲಂಬಿಗಳಾಗಿ ತಮ್ಮ ಆದಾಯ ತೆರಿಗೆ ವಿಶಯವನ್ನ ತಾವೇ ಅರಿತುಕೊಳ್ಳಲು ಅವಕಾಶವಾಗುವಂತೆ ವ್ಯವಸ್ತೆ ಕಲ್ಪಿಸವೇಕೆಂದು ಆಶಿಸುತ್ತೇನೆ.

ಬುಧವಾರ, ಆಗಸ್ಟ್ 3, 2011

ಸಂಸತ್ತಿನಲ್ಲಿ ಕನ್ನಡದ ಕಂಪು ಸದಾ ಮೊಳಗಲಿ

ನೆನ್ನೆ ನಡೆದ ಸಂಸತ್ ಕಲಾಪದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾದ ಲೋಕಸಬಾ ಸದಸ್ಯರಾದ ಚಲುವರಾಯಸ್ವಾಮಿಯವರು ಕನ್ನಡದಲ್ಲಿ ಬಾಶಣ ಮಾಡಿ ಗಮನ ಸೆಳೆದಿದ್ದಾರೆ. ಬಹಳ ದಿನಗಳ ಮೇಲೆ ಸಂಸತ್ತಿನಲ್ಲಿ ಕನ್ನಡದ ಕಂಪು ಮೊಳಗಿದೆ.


೧೯೬೭ ರಲ್ಲಿ ಲೋಕಸಬೆಯ ಕಲಾಪಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ ಹೆಚ್ ಪಟೇಲ್ ರವರು ಬಾಶಣ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲಬೇಕು.

ಲೋಕಸಬೆ ಕಲಾಪಗಳಿಗೆ ಹಿಂದಿ/ಇಂಗ್ಲೀಶ್ ಬರಲ್ಲ ಅಂತ ಹಲವಾರು ಜನ ಹಿಂದಿಯೇತರ ಲೋಕಸಬಾ ಸದಸ್ಯರು ಕಲಾಪಗಳಿಗೆ ಹೋಗದೆ ಅತವಾ ಹೋದರು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳದ ಬಗ್ಗೆ ಕೇಳಿದ್ದಿವಿ. ಆದರೆ ತಮ್ಮ ಬಾಶೆಯಲ್ಲು ಬಾಶಣ ಮಾಡಲು ಪ್ರಜಾಪ್ರಬುತ್ವದಲ್ಲಿ ಅವಕಾಶವಿದ್ದರು ಹಲವಾರು ಜನ ಸದಸ್ಯರು ತಮ್ಮ ಬಾಶೆಯನ್ನ ಬಳಸದಿರುವುದು ದುರಂತವೇ! ನಿಜಕ್ಕು ಅವರು ತಮ್ಮ ಬಾಶೆಯನ್ನ ಬಳಸಿದ್ದೇ ಆದಲ್ಲಿ ವಿಶಯವನ್ನ ಅತ್ಯಂತ ನೇರ ಮತ್ತು ನಿಕರವಾಗಿ ಹೇಳಬಹುದಲ್ಲದೇ ಲೋಕಸಬಾ ಟಿವಿ ಅತವಾ ಇನ್ಯಾವುದೋ ಟಿವಿಯಲ್ಲಿ ಅವರವರ ಕ್ಷೇತ್ರದ ಜನರಿಗೂ ತಾವು ಆಯ್ಕೆ ಮಾಡಿ ಕಳಿಸಿದ ಸದಸ್ಯ ಏನ್ ಮಾತಾಡ್ತಿದ್ದಾರೆ, ಯಾವ ವಿಶಯ ಪ್ರಸ್ತಾಪಿಸುತ್ತಿದ್ದಾರೆ ಅನ್ನೊದು ತಿಳಿಯೋ ಹಾಗೆ ಆಗುತ್ತೆ.

ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವಾರು ಜನರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ, ನಾಡಿನ ಬಗೆಗಿನ ಪ್ರೀತಿಯನ್ನ ತೋರಿಸಿದ್ದಾರೆ. ಕನ್ನಡ ಬಾಶೆಯನ್ನ ಬರಿ ಪ್ರಮಾಣವಚನಕ್ಕೆ ಮಾತ್ರ ಮೀಸಲಿಡದೇ ಎಲ್ಲಾ ರೀತಿಯ ಚರ್ಚೆಯಲ್ಲಿ ಕನ್ನಡ ಬಾಶೆಯನ್ನು ಬಳಸುವಂತಾಗಬೇಕು.ನೆನ್ನೆಯ ಕನ್ನಡ ಬಾಶಣ ಎಲ್ಲಾ ಲೋಕ ಸಭಾ ಸದಸ್ಯರಿಗೂ ಮಾದರಿಯಾಗಲಿ, ಮುಂದಿನ ದಿನಗಳಲ್ಲಿ ಲೋಕಸಬೆಯಲ್ಲಿ ನಮ್ಮ ನಾಡಿನ ಬಗೆಗಿನ ವಿಶಯಗಳ ಚರ್ಚೆ ನಮ್ಮ ಬಾಶೆಯಲ್ಲೇ ನಡೆಯಲಿ.

ಮುಕ್ಯವಾಗಿ- ಇದೆಲ್ಲಾ ನಡೆಯುತ್ತಿರುವುದು ಕನ್ನಡಿಗರಲ್ಲಿ ಆಗುತ್ತಿರೋ ಜಾಗ್ರುತಿಯಿಂದಲೇ. ಕನ್ನಡಿಗ ತನ್ನ ಬಾಶೆಯ ಬಗ್ಗೆ ಜಾಗ್ರುತಿ ಹೊಂದಿದಲ್ಲಿ ಎಲ್ಲಾ ಸದಸ್ಯರು ಕನ್ನಡದಲ್ಲೇ ಬಾಶಣ ಮಾಡುವಂತಾಗುತ್ತಾರೆ.