ಭಾನುವಾರ, ಫೆಬ್ರವರಿ 24, 2013

ಸರಕಾರಿ ವೆಬ್ ಸೈಟ್ ನಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ

ಕನ್ನಡ ಗ್ರಾಹಕ ಕೂಟದ ಗೆಳೆಯರು ಹಲವಾರು ದಿನಗಳಿಂದ ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಬಳಕೆ ಸರಿಯಾಗಿ ಆಗಿಲ್ಲವೆಂದು ಅನೇಕ ರೀತಿಯಲ್ಲಿ ದನಿಯೆತ್ತುತ್ತಿದ್ದೇವೆ. ಈ ವಿಶಯವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ದ್ದಿ ಪ್ರಾಧಿಕಾರದವರು ನಮ್ಮ ಕೂಟದ ಗೆಳೆಯರು ಈ ವಿಶಯವಾಗಿ ನೀಡುವ ದೂರಿನ ಅನ್ವಯ ಅನೇಕ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಅಭಿವೃದ್ದಿ ಪ್ರಾಧಿಕಾರದ ಸಹಾಯದೊಂದಿದೆ ಈ ವಿಶಯವನ್ನು ಮುಖ್ಯಮಂತ್ರಿಗಳೂ ಸೇರಿದಂತೆ ಸರಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು ಯಶಸ್ವಿಯಾಗಿದ್ದೇವೆ.

ಇದೇ ನಿಟ್ಟಿನಲ್ಲಿ ಶನಿವಾರ 23-2-2013 ರಂದು, ವಿಕಾಸ ಸೌಧದಲ್ಲಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದವರು  ಸರಕಾರಿ ವೆಬ್ ಸೈಟ್ ಗಳಲ್ಲಿ ಕನ್ನಡಕ್ಕೆ ಮೊದಲ ಪ್ರಾಮುಖ್ಯತೆ ಸಿಗಬೇಕೆಂದು ಸಭೆಯೊಂದನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಸರಕಾರದ ಇ-ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರಕಾರಕ್ಕೆ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವ NIC ಸಂಸ್ಥೆಯವರು ಭಾಗವಹಿಸಿದ್ದರು. ಕನ್ನಡ ಗ್ರಾಹಕ ಕೂಟದ ಗೆಳೆಯರು ಹಲವಾರು ಬಾರಿ ಸರಕಾರಿ ವೆಬ್ ಸೈಟ್ ಗಳ ಬಗ್ಗೆ ದೂರು ನೀಡುತ್ತಿರುವುದರಿಂದ ನನ್ನನ್ನು ಸಹ ಆಹ್ವಾನಿಸಿದ್ದರು. ಸಭೆಗೆ ಬಂದಿದ್ದ NIC ಮತ್ತು ಇ-ಆಡಳಿತದ ಅಧಿಕಾರಿಗಳು ಮತ್ತು NIC ಸಂಸ್ಥೆಯವರು ಅತೀ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುವ ಬರವಸೆಯನ್ನು ನೀಡಿದ್ದಾರೆ.

ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಸ್ಥಿತಿಯ ಬಗ್ಗೆ ನೀಡಿದ್ದ ವರದಿ ಹೀಗಿದೆ-


ಬುಧವಾರ, ಜನವರಿ 9, 2013

ಕರ್ನಾಟಕದಲ್ಲಿ ಕನ್ನಡ ಹಾಡು ಕೇಳೋದು ತಪ್ಪೇ?


ಕರ್ನಾಟಕದಲ್ಲೇ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ Cafe Coffee Day - Official ಕರ್ನಾಟಕದಲ್ಲೇ ಕನ್ನಡದ ಹಾಡುಗಳನ್ನು ಹಾಕುವುದಿಲ್ಲ ಎಂಬ ಧೋರಣೆ ತೋರಿಸಿದೆ .ಕಾಫೀ ಡೇ ತರಹದ ಅನೇಕ ಹೊರ ದೇಶದ ಕಂಪನಿಗಳು ಕರ್ನಾಟಕದಲ್ಲಿ ಅಂಗಡಿಗಳನ್ನು ತೆರೆದಿದ್ದು, ಕನ್ನಡ ಹಾಡು ಹಾಕಿ ಎಂದು ನೀಡಿದ ಸಲಹೆಯನ್ನು ಸ್ವೀಕರಿಸಿ, ಸಲಹೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಉತ್ತರಿಸಿ ಕನ್ನಡ ಹಾಡುನ್ನು ಹಾಕಲು ಕ್ರಮ ಕೈಗೊಂಡಿದ್ದಾರೆ. ಆದರೆ ನಮ್ಮದೇ ನಾಡಿನ ಕಾಫೀ ಡೇ ನವರು ಕನ್ನಡ ಹಾಡು ಹಾಕಿ ಎನ್ನುವ ಸಲಹೆಯನ್ನು ಸಾರಾ ಸಗಟು ತೆಗೆದುಹಾಕುತ್ತಿರುವುದು ದುರಂತವೇ ಸರಿ. ಇದೆಲ್ಲವುದರ ಜೊತೆಗೆ ಪೇಸ್ ಬುಕ್ಕಿನ ಕಾಫೀ ಡೇ ಯ ಅಧಿಕ್ರುತ ಪೇಜಿನಲ್ಲಿ ಹಲವಾರು ಕನ್ನಡಿಗರು ಈ ಬಗ್ಗೆ ಪ್ರಸ್ತಾಪ ಮಾಡಿದಾಗ, ಯಾವುದೇ ರೀತಿಯ ಉತ್ತರ ನೀಡದೇ, ಕನ್ನಡ ಹಾಡು ಹಾಕಿ ಎಂದು ಕೇಳಿದವರನ್ನೆಲ್ಲಾ ತಮ್ಮ ಪೇಜಿನಿಂದ ಬ್ಯಾನ್ ಮಾಡಿದ್ದಾರೆ. ಇದೀಗ ಬ್ಯಾನ್ ಆದ ಕನ್ನಡಿಗರ ಮನಸ್ಸಿನಲ್ಲಿ ಕರ್ನಾಟಕದಲ್ಲಿ ಕನ್ನಡ ಹಾಡು ಕೇಳುವುದು ತಪ್ಪೇ ಎನ್ನುವಂತಾಗಿದೆ. ಜೊತೆಗೆ ಇದೇ ವಿಶಯವಾಗಿ ಕೆಲವು ಪ್ರಶ್ನೆಗಳು ’ಬ್ಯಾನ್’ ಆದ ಕನ್ನಡಿಗರ ಮನಸ್ಸಿನಲ್ಲಿ ಮೂಡುತ್ತಿದೆ. ಈ ಪ್ರಶ್ನೆಗಳಿಗೆ ಕಾಪಿ ಡೇನವರು ಉತ್ತರಿಸುವ ದಯೆತೋರಲಿ.

ಪ್ರಶ್ನೆಗಳು-
  • ಒಬ್ಬ ಸಾಮಾನ್ಯ ಕನ್ನಡಿಗನಿಗೆ ತಮ್ಮ ಅಂಗಡಿಗೆ  ಬರಲು ಅವಕಾಶವಿದೆಯೇ ಅತವಾ ಎಲ್ಲಾ ಅಂಗಡಿಯಲ್ಲೂ ಒಂದೇ ತರನಾದ ವಾತಾವರಣ ಇರಬೇಕೆಂದು ಒಂದೇ  ತರನಾದ ಜನ ಬರಬೇಕೆಂಬ ನಿಯಮವೇನಾದರೂ ಇದೆಯೇ? 
  • ತಮ್ಮ ಅಂಗಡಿಗ ಬರುವ ಸಾಮಾನ್ಯ ಕನ್ನಡಿಗ ಎರಡನೇ ದರ್ಜೆ ಗ್ರಾಹಕನೇ?
  • ಕನ್ನಡ ಹಾಡು ಬೇಕು ಎನ್ನುವ ಸಾಮಾನ್ಯ ಕನ್ನಡಿಗರಿಗೆ ಪ್ರವೇಶ ನಿರ್ಬಂದಿಸಲಾಗಿದೆ ಎನ್ನುವ ನಾಮಪಲಕವನ್ನು ಹಾಕಬಾರದೇಕೆ?
  •  ಸಾಮಾನ್ಯ ಕನ್ನಡಿಗನೊಬ್ಬನಿಗೆ ಏನಾದರೂ  ನಿಮ್ಮ ಅಂಗಡಿಯಲ್ಲಿ ತೊಂದರೆಯಾರೆ ತಮ್ಮ ಸಂಸ್ತೆಗೆ ದೂರು ನೀಡಬಹುದುದಾದ ಹಕ್ಕಿದೆಯೇ ಅತವಾ ತಾವು ಸಾಮಾನ್ಯ ಕನ್ನಡಿಗರಿಂದ ದೂರನ್ನು ಸ್ವೀಕರಿಸುವುದಿಲ್ಲವೇ?
  •  ಅಂಗಡಿಯ ಮುಂದೆ ತಾವು ಮಾಡಿಕೊಂಡಿರುವ ನಿಯಮದ ಪ್ರಕಾರ ಕರ್ನಾಟಕದ ಅಂಗಡಿಗಳ ಮುಂದೆ ಕನ್ನಡ ಹಾಡು ಹಾಕಲಾಗುವುದಿಲ್ಲ ಎನ್ನುವ ಬೋರ್ಡ್ ಹಾಕಬಾರದೇಕೆ?
ಕೊನೆಯದಾಗಿ-
  •  ಕರ್ನಾಟಕದ ಅಂಗಡಿಯಲ್ಲಿ ಕನ್ನಡದ ಹಾಡುಗಳನ್ನು ಹಾಕಿ ಎಂದು ಕೇಳುವುದು ತಪ್ಪೇ?

ಮಂಗಳವಾರ, ಜನವರಿ 8, 2013

ಕರ್ನಾಟಕದಲ್ಲಿ ಕನ್ನಡ ಹಾಡನ್ನು ಹಾಕಲು ಕೀಳರಿಮೆಯೇಕೆ?

ಕಾಪಿ ಡೇ ನಲ್ಲಿ ಕನ್ನಡದ ಹಾಡುಗಳನ್ನು ಹಾಕದಿರುವುದರ ಬಗ್ಗೆ ಕಾಪಿ ಡೇ ಗೆ ಹೋಗಿದ್ದ ಗೆಳೆಯರೊಬ್ಬರು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಪಿ ಡೇ ತಾವು ದೇಶದ ಎಲ್ಲಾ ಅಂಗಡಿಗಳಲ್ಲೂ ಒಂದೇ ತರನಾದ ವಾತಾವಣವನ್ನು ಹೊಂದಲು, ಹಿಂದಿ/ ಇಂಗ್ಲೀಶ್ ಗೀತೆಗಳನ್ನು ಮಾತ್ರ ಹಾಕುತ್ತೇವೆಂದು ತಿಳಿಸಿದ್ದಾರೆ. 


ಕಾಪಿ ಡೇ ಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಂಗಡಿಯನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಹಿಂದಿ/ಇಂಗ್ಲೀಶ್ ಹಾಡುಗಳನ್ನು ಮಾತ್ರ ಹಾಕುತ್ತೇವೆ ಎನ್ನುವ ಮೂಲಕ ಕಂಪನಿಯು ತನ್ನ ಗ್ರಾಹಕರು, ಬೇಕಿದ್ದರೆ ಬರಲಿ ಇಲ್ಲವೇ ಬಿಡಲಿ ಎನ್ನುವಂತೆ ಆಡುತ್ತಿರುವುದು ಎಶ್ಟರ ಮಟ್ಟಿಗೆ ಸರಿ?

ಹೊರದೇಶದ ಅನೇಕ ಕಾಪಿ ಡೇ ತರನಾದ ಅಂಗಡಿಗಳು ಬಾರತದ ವೈವಿದ್ಯತೆಯನ್ನು ಗೌರವಿಸುವುದನ್ನು ನೋಡಿದ್ದೇನೆ ಆದರೆ ಕಾಪಿ ಡೇಯ ಈ ಉತ್ತರವನ್ನು ಗಮನಿಸಿದ್ರೆ, ಕಾಪಿ ಡೇ ತನ್ನ ಗ್ರಾಹಕರನ್ನು ಸರಿಯಾಗಿ ಅರ್ತ ಮಾಡಿಕೊಳ್ಳಲು ಎಡವುತ್ತಿರುವುದು ಕಾಣಿಸುತ್ತದೆ. ಬಾರತದಂತ ವೈವಿದ್ಯಮಯ ದೇಶದಲ್ಲಿ ದೇಶಕ್ಕೆಲ್ಲಾ ಒಪ್ಪುವಂತೆ ಒಂದೇ ನಿಯಮ ಮಾಡ್ತಿವಿ ಅನ್ನೋದು  ವೈವಿದ್ಯತೆಯಿಂದ ಕೂಡಿರುವ ಗ್ರಾಹಕರು ತಮಗೆ ಬೇಡ ಎನ್ನುವಂತಿದೆ. ಕಾಪಿ ಡೇ ನಂತೆಯೇ ಹೊರದೇಶಗಳ ಅಂಗಡಿಗಳು ಇದೇ ರೀತಿ ವೈವಿದ್ಯತೆಯನ್ನು ಬದಿಗೊಡ್ಡಿ ನಿಯಮ ಮಾಡಿದಲ್ಲಿ ಮುಂದೆ ಆಗುವ ಅನಾಹುತವನ್ನು ಊಹಿಸಿಕೊಳ್ಳಲೂ ಅಸಾದ್ಯ. 

ಈ ರೀತಿಯ ಗ್ರಾಹಕ ವಿರೋದಿ ನಿಯಮವನ್ನು ಮಾಡಿಕೊಳ್ಳಲು, ಇಂದಿಗೂ ಅನೇಕ ಕನ್ನಡದ  ಗ್ರಾಹಕರು ತಮ್ಮ ಬಾಶೆಯಲ್ಲಿ ಸೇವೆ ಕೇಳುವುದು ತಪ್ಪು ಎನ್ನುವಂತಹ ಮನಸ್ತಿತಿ ಹೊಂದಿರುವುದು ಕಾರಣವಾಗಿದೆ. ಕನ್ನಡಿಗರು ತಮ್ಮ ಬಾಶೆಯ ಬಗೆಗಿನ ಕೀಳರಿಮೆಯನ್ನು ತೊಡೆದು ಇಂತಹಾ ನಿಯಮಗಳನ್ನು ಪ್ರಶ್ನಿಸಿದಲ್ಲಿ,  ನಿಯಮ ಬದಲಾಗಿ ಎಲ್ಲೆಡೆ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾದ್ಯವಾದೀತು. 

ತಾವು ಕಾಪಿ ಡೇ ಗೆ ಹೋದ ಸಮಯದಲ್ಲಿ ಅಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗುವಂತೆ ಸಲಹೆಯನ್ನು ನೀಡಿ ಬನ್ನಿ. ಜೊತೆಗೆ ಕೆಳಗಿನ ಕೊಂಡಿಯಲ್ಲೂ ಸಹ ಈ ವಿಶಯದ ಬಗ್ಗೆ ಪ್ರಸ್ತಾಪಿಸಬಹುದು- 


ಬುಧವಾರ, ಅಕ್ಟೋಬರ್ 17, 2012

ರೆಡ್ FM 93.5 ನ ಕೇಳುಗರ ಸಂಕ್ಯೆ ಕಡಿಮೆ ಆದ್ರೆ ಆಶ್ಚರ್ಯಪಡಬೇಕಾಗಿಲ್ಲ.



ಇದು ಇತ್ತೀಚಿಗೆ ಬಿಡುಗಡೆಯಾಗಿರೋ ಬೆಂಗಳೂರಿನ FM ರೇಡಿಯೋ ಕೇಳುಗರ ಸರ್ವೇಯ ಮಾಹಿತಿ.  ಈ ಚಿತ್ರದಲ್ಲಿ ಇರುವಂತೆ ಕನ್ನಡ ಹಾಡು ಹಾಕೋ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ ಸರಿ ಸುಮಾರು 80 ಕಿಂತ ಹೆಚ್ಚು ಇನ್ನುಳಿದಂತೆ ಹಿಂದಿ /ಇಂಗ್ಲೀಶ್ ಹಾಡನ್ನು ಹಾಕುವ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ 15 ನ್ನೂ ಸಹ ದಾಟುತ್ತಿಲ್ಲ. ಈಗ ಕೆಲವು ತಿಂಗಳ ಹಿಂದೆ fever 104 ನವರು ಕನ್ನಡ ಹಾಡು ಹಾಕುವ ಸಮಯದಲ್ಲಿ ಅವರ ಕೇಳುಗರ ಸಂಕ್ಯೆ 15 ರ ಆಸುಪಾಸಿಗೂ ಮುಟ್ಟಿತ್ತು. ಆದರೆ ಯಾವಾಗ ಹಿಂದಿ ಹಾಡುಗಳನ್ನು ಹಾಕಿದ್ರೊ ಆಗಲಿಂದ ಕೇಳುಗರ ಸಂಕ್ಯೆ 5-6 ರ ಆಸುಪಾಸಿಗೆ ಬಂದು ನಿಂತಿದೆ. ಇದೀಗ ರೆಡ್ FM 93.5 ನವರೂ ಹಿಂದಿ ಹಾಡುಗಳನ್ನು ಹಾಕಲು ಶುರುಮಾಡಿದ್ದಾರೆ. ಕಳೆದ ಕೆಲವು ವರ್ಶಗಳ ರೇಡಿಯೋ ಕೇಳುಗರ ಸಂಕ್ಯೆಯ Trend  ನೋಡಿದ್ರೆ ರೆಡ್ FM ನವರ ಕೇಳುಗರ ಸಂಕ್ಯೆ ಕಡಿಮೆ ಆದ್ರೆ ಆಶ್ಚರ್ಯ ಪಡಬೇಕಾಗಿಲ್ಲ. ...

ಬುಧವಾರ, ಆಗಸ್ಟ್ 22, 2012

ಬೆಂಗಳೂರು ಟ್ರಾಪಿಕ್ ಮೇಲೆ ಬೀಸುತ್ತಿರುವ ಕನ್ನಡದ ತಂಗಾಳಿ

ಕೆಲವು ದಿನಗಳ ಹಿಂದೆ ಬೆಂಗಳೂರು ಟ್ರಾಪಿಕ್ ಪೋಲೀಸ್ ಇಲಾಕೆಯಲ್ಲಿ ಆಗುತ್ತಿರುವ ಕನ್ನಡದ ಕಡೆಗಣನೆಯ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆನು. ಅವುಗಳಲ್ಲಿ  ಮುಕ್ಯವಾಗಿ-


  • ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡವಿಲ್ಲದಿರುವುದು
  • ಸಾರ್ವಜನಿಕ ಜಾಗದಲ್ಲಿ ಜನರಲ್ಲಿ ಜಾಗ್ರುತಿ ಮೂಡಿಸಲೆಂದು ಮಾಡಿದ್ದ ವಿಡಿಯೋನಿಂದ ಕನ್ನಡವನ್ನು ಕೈಬಿಟ್ಟಿದ್ದು
  •  ಆಟೋ ಚಾಲಕರ ಮಾಹಿತಿಯುಳ್ಳ ಚೀಟಿಯಲ್ಲಿ ಕನ್ನಡವನ್ನು ಕೈಬಿಟ್ಟಿದ್ದು
  • ಪೇಸ್ ಬುಕ್ಕಿನ ಕಾತೆಯಲ್ಲಿ ಇಂಗ್ಲೀಶ್ ನಲ್ಲಿ ಮಾತ್ರ ಮಾಹಿತಿ ಹಾಕುತ್ತಿದ್ದುದ್ದು
  • ದಂಡ ಕಟ್ಟಿದ್ದಕ್ಕೆ ಕೊಡುವ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಇಲ್ಲದಿರುವುದು
ಹೀಗೆ ಹಲವಾರು ಕಡೆಗಳಲ್ಲಿ ಟ್ರಾಪಿಕ್ ಪೋಲೀಸ್ ಇಲಾಕೆಯು ಕನ್ನಡವನ್ನು ಕಡೆಗಣಿಸಿತ್ತು. ಕನ್ನಡದ ಕಡೆಗಣನೆಯ ಬಗ್ಗೆ ಹಲವಾರು ಜಾಗ್ರುತ ಕನ್ನಡಿಗರು ದನಿ ಎತ್ತಿದ್ದರು. ಜಾಗ್ರುತ ಕನ್ನಡಿಗರ ಒತ್ತಾಯದ ಮೇರೆಗೆ ಇದೀಗ ಇಲಾಕೆಯು  ಒಂದೊಂದಾಗಿ ಕನ್ನಡವಿಲ್ಲದ ಕಡೆಗಳೆಲ್ಲಾ ಕನ್ನಡವನ್ನು ಬಳಕೆ ಮಾಡಲು ಪ್ರಾರಂಬಿಸಿದೆ, ಇದು ನಿಜಕ್ಕೂ ಸಂತೋಶದ ಸುದ್ದಿ. 

ಈಗ ನಿಲ್ದಾಣವಿಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲಾಗಿದೆ. ಟ್ರಾಪಿಕ್ ಜಾಗ್ರುತಿ ವಿಡಿಯೋ ನಲ್ಲಿ ಕನ್ನಡವನ್ನು ಬಳಸಲಾಗಿದೆ. ಆಟೋ ಚಾಲಕರ ವಿವರವುಳ್ಳ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗಿದೆ. ಪೇಸ್ ಬುಕ್ಕಿನಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗುತ್ತಿದೆ ಜೊತೆಗೆ ದಂಡ ಕಟ್ಟಿದ್ದಕ್ಕೆ ಕೊಡುವ ರಶೀತಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಕಾಣುವುದೆಂಬ ಆಶ್ವಾಸನೆಯನ್ನು ನೀಡಿದ್ದಾರೆ. 

ಪೋಲೀಸ್ ಇಲಾಕೆಯನ್ನು ಜನರ ಬಳಿಗೆ ಕೊಂಡೊಯ್ಯಲು ಆಡಳಿತದಲ್ಲಿ ಕನ್ನಡದ ಬಳಕೆ ಅತ್ಯವಶ್ಯಕ. ಇದನ್ನು ಮನಗಂಡು  ಕನ್ನಡದ ಬಳಕೆಗೆ ಮುಂದಾಗಿರುವ ಟ್ರಾಪಿಕ್ ಪೋಲೀಸ್  ಕಮಿಶನರ್ ಸಲೀಂ ರವರಿಗೆ ಮತ್ತು ಇಲಾಕೆಯ ಇನ್ನಿತರ ಅದಿಕಾರಿಗಳಿಗೆ ಅಬಿನಂದನೆಗಳು. ಟ್ರಾಪಿಕ್ ಇಲಾಕೆಯ ಈ ನಡೆ ಕನ್ನಡವನ್ನು ಕಡೆಗಣಿಸುತ್ತಿರುವ ಇನ್ನಿತರ ಇಲಾಕೆಗಳಿಗೆ ಮಾದರಿಯಾಗಲಿ.

ಸೋಮವಾರ, ಜುಲೈ 30, 2012

ಕನ್ನಡದಲ್ಲಿ ರಶೀತಿ ಸಿಗುವಂತಾಗಲಿ

ಬೆಂಗಳೂರು ಟ್ರಾಪಿಕ್ ಪೋಲೀಸರು ಮೋಟಾರು ವಾಹನ ಕಾಯಿದೆಯನ್ನು ಉಲ್ಲಂಗಿಸಿದಕ್ಕೆ ದಂಡ ಕಟ್ಟಿದಾಗ ಕೊಡುವ ರಶೀತಿಯಲ್ಲಿ ಕನ್ನಡ ಇಲ್ಲದ ಬಗ್ಗೆ ಟ್ರಾಪಿಕ್ ಪೋಲೀಸರಿಗೆ ಹಲವಾರು ಬಾರಿ ಪತ್ರವನ್ನು ಬರೆದು  ಕನ್ನಡದಲ್ಲಿ ರಶೀತಿ ನೀಡದಿರುವುದು ಕರ್ನಾಟಕ ಸರಕಾರ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪರಿಣಾಮಕಾರಿಗಾಗಿ ರೂಪಿಸಿರುವ ಆಡಳಿತ ಬಾಶೆಯ ನಿಯಮದ ಉಲ್ಲಂಗನೆ ಎನ್ನುವುದನ್ನು ತಿಳಿಸಿ, ಕನ್ನಡದಲ್ಲಿ ರಶೀತಿಯನ್ನು ನೀಡುವಂತೆ ಕೆಲವು ಗೆಳೆಯರೆಲ್ಲರೂ ಒತ್ತಾಯಿಸಿದೆವು. ಆದರೆ ಅವರಿಂದ ಯಾವುದೇ ಸಮಂಜಸವಾದ ಉತ್ತರ ಸಿಗದಿದ್ದರಿಂದ, ಆಡಳಿತ ಬಾಶೆಯ ಉಲ್ಲಂಗನೆಯಾಗಿರುವುದರ ಆದಾರದ ಮೇಲೆ ಕನ್ನಡ ಅಬಿವ್ರುದ್ದಿ ಪ್ರಾದಿಕಾರಕ್ಕೆ ದೂರೊಂದನ್ನು ನೀಡಿದ್ದೆವು. ನಮ್ಮ ದೂರಗೆ ಪ್ರತಿಯಾಗಿ ಅಬಿವ್ರುದ್ದಿ ಪ್ರಾದಿಕಾರ ಸಾರಿಗೆ ಸಚಿವರಾದ ಅಶೋಕ್ ರವರಿಗೆ ಪತ್ರಬರೆದು ಆಡಳಿತ ಬಾಶೆಯ ನಿಯಮದ ಉಲ್ಲಂಗನೆ ಬಗ್ಗೆ ಗಮನಸೆಳೆದಿತ್ತು.  
ಇದೀಗ ಅಬಿವ್ರುದ್ದಿ ಪ್ರಾದಿಕಾರದ ಪತ್ರಕ್ಕೆ ಪ್ರತಿಯಾಗಿ ಸಾರಿಗೆ ಇಲಾಕೆಯು ಕೂಡ ಬೆಂಗಳೂರು ಟ್ರಾಪಿಕ್ ಕಮಿಶನರ್ ರವರಿಗೆ ಪತ್ರ ಬರೆದು ಕನ್ನಡದ ರಶೀತಿ ಸಿಗುವಂತೆ ಮಾಡಬೇಕೆಂದು ತಿಳಿಸಿದ್ದಾರೆ.
ತಂತ್ರಗ್ನಾನ ಇಶ್ಟು ಮುಂದುವರೆದರೂ ಸಹ ಅದಿಕಾರಿಗಳು ಕನ್ನಡದ ಅನುಶ್ಟಾನದ ವಿಶಯದಲ್ಲಿ ಗಮನಹರಿಸದಿರುವುದು ನಿಜಕ್ಕು ದುರದ್ರುಶ್ಟಕರ.  ಕನ್ನಡವನ್ನು ಬಿಟ್ಟು ಪರಿಣಾಮಕಾರಿ ಮತ್ತು ಪಾರದರ್ಶಕ ಆಡಳಿತ ಅಸಾದ್ಯ ಎನ್ನುವುದನ್ನು ಅದಿಕಾರಿಗಳು ಅರಿತುಕೊಳ್ಳಲಿ ಇನ್ನು ಮುಂದೆಯಾದಾರೂ ಕನ್ನಡದಲ್ಲಿ ರಶೀತಿ ಸಿಗುವಂತಾಗಲಿ.

ಮಂಗಳವಾರ, ಜೂನ್ 19, 2012

ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗ ಎರಡನೇ ದರ್ಜೆ ಪ್ರಯಾಣಿಕ

ನಮ್ಮ ನಾಡಿಗೆ ಉಪಯೋಗವಾಗಲೆಂದು  ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲು ಕನ್ನಡದ ಸಾವಿರಾರು ರೈತರು ತಮ್ಮ ಬೂಮಿಯನ್ನು ನೀಡಿದ್ದಾರೆ ಜೊತೆಗೆ ಕರ್ನಾಟಕ ಸರಕಾರವೂ ಸಹ ಹಣಕಾಸಿನ ನೆರವನ್ನು ನೀಡಿದೆ. ಆದರೆ ಕನ್ನಡದ ರೈತರ ಬೂಮಿಯನ್ನು, ಕರ್ನಾಟಕ ಸರಕಾರದ ಹಣವನ್ನು ಪಡೆದ ವಿಮಾನ ನಿಲ್ದಾಣ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಎಶ್ಟರ ಮಟ್ಟಿಗೆ ಮನ್ನಣೆ ನೀಡಿದೆ?

ಬೆಂಗಳೂರು ವಿಮಾನ ನಿಲ್ದಾಣದ ಕನ್ನಡ-ಕನ್ನಡಿಗ-ಕರ್ನಾಟಕ ವಿರೋದಿ ದೋರಣೆಯ ಕೆಲವು ಸ್ಯಾಂಪಲ್ ಗಳನ್ನು ಒಮ್ಮೆ ಗಮನಿಸಿ-

೧. ವಿಮಾನ ನಿಲ್ದಾಣದಲ್ಲಿನ ಪಾರ್ಕಿಂಗ್ ಸ್ಟಿಕರ್ ಗಳು ಕೇವಲ ಇಂಗ್ಲೀಶ್ ನಲ್ಲಿದೆ.

೨. ಸೂಚನಾ ಪಲಕಗಳಲ್ಲಿ ಕನ್ನಡವನ್ನು ಬಳಸಿದ್ದರೂ, ಕನ್ನಡಕ್ಕೆ ಕೊನೆಯ ಸ್ತಾನ ನೀಡಲಾಗಿದ್ದು ಎಶ್ಟಾಗುತ್ತೋ ಅಶ್ಟು ಸಣ್ಣಕ್ಷರದಲ್ಲಿ 'ಕಾಟಾಚಾರ'ಕ್ಕೆ ಬರೆಸಿದ್ದಾರೆ

೩. ವಿಮಾನ ನಿಲ್ದಾಣದಲ್ಲಿರುವ ಕಾವಲುಗಾರರೊಡನೆ ಕನ್ನಡದಲ್ಲಿ ಮಾತನಾಡಿ ಅವರಿಂದ ಬೈಯಿಸಿಕೊಂಡ ಉದಾಹರಣೆಗಳಿವೆ
೪. ಹೊರಡುವ ಮತ್ತು ಬರುವ ವಿಮಾನಗಳ ಬಗ್ಗೆ ಟಿವಿಗಳಲ್ಲಿ ತೋರಿಸುವ ಮಾಹಿತಿ ಬರಿಯ ಇಂಗ್ಲೀಶ್ /ಹಿಂದಿಯಲ್ಲಿದೆ
೫. ವಿಮಾನ ನಿಲ್ದಾಣದ ಒಳಗೆ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಸೂಚನೆಗಳನ್ನು ನೀಡಲಾಗುತ್ತಿದೆ.
೬. ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಗೆ ಇರುವ ಸ್ತಾನದ ಬಗ್ಗೆ ಹೇಳಬೇಕಾಗಿಯೇನು ಇಲ್ಲ.

ಹೀಗೆ ಇನ್ನೂ ಹಲವೆಡೆಗಳಲ್ಲಿ ಇಂಗ್ಲೀಶ್ ಮತ್ತು ಹಿಂದಿಗೆ ಮನ್ನಣೆ ನೀಡಿ ಕನ್ನಡವನ್ನು ಹಿಂದಕ್ಕೆ ತಳ್ಳಲಾಗಿದೆ.

ಒಟ್ಟಾರೆಯಾಗಿ ಗಮನಿಸಿದರೆ ಕನ್ನಡ-ಕನ್ನಡಿಗ-ಕರ್ನಾಟಕರನ್ನು ವಿಮಾನ ನಿಲ್ದಾಣದಲ್ಲಿ ಎರಡೆನೇ ದರ್ಜೆಯಂತೆ ನೋಡಲಾಗುತ್ತಿದೆ. ನಮ್ಮ ರಾಜ್ಯ ಸರಕಾರದ ಹಣದಿಂದ ಮತ್ತು ನಮ್ಮ ರೈತರ ಬೂಮಿಯಲ್ಲಿ ನಮಗೆ ಬರೆ ಹಾಕಿ ಪರರಿಗೆ ಮನ್ನಣೆ ನೀಡಲಾಗಿರುವುದು ನಿಜಕ್ಕೂ ದುರಂತವೇ ಸರಿ. ಜಗತ್ತಿನ ಹಲವಾರು ದೇಶಗಳಲಿನ ಅಂತರಾಶ್ಟ್ರೀಯ ವಿಮಾನ ನಿಲ್ದಾಣಗಳನ್ನು ನೋಡಿದಾಗ ಅಲ್ಲೆಲ್ಲೂ ಅಂತರಾಶ್ಟ್ರೀಯ ಎಂದ ಮಾತ್ರಕ್ಕೆ ತಮ್ಮ ತನವನ್ನು ಮರೆತಿರುವುದು ಕಾಣುವುದಿಲ್ಲ.. ತಮ್ಮ ತನಕ್ಕೆ ಮೊದಲನೇ ಮನ್ನಣೆ ನೀಡುವುದರ ಮೂಲಕ ತಮ್ಮ ನಾಡಿನ ಜನರಿಗೆ ಉಪಯೋಗವಾಗುವಂತೆ ವ್ಯವಸ್ತೆಯನ್ನು ರೂಪಿಸಿದ್ದಾರೆ. ಆದರೆ, ನಮ್ಮ ನಾಡಿನ ವಿಮಾನ ನಿಲ್ದಾಣಕ್ಕೆ ನಮ್ಮ ನಾಡಿನ ಜನರು ಹೋಗಬೇಕೆಂದರೆ ಇಂಗ್ಲೀಶ್ ಅತವಾ ಹಿಂದಿಯನ್ನು ಕಲಿತು ಹೋಗಬೇಕೆನ್ನುವ ಅನಿವಾರ್ಯತೆಯನ್ನು ನಿರ್ಮಿಸಿದ್ದಾರೆ. ಇದು ಏಕೆ ಎಂದು ಪ್ರಶ್ನಿಸುವ ಕನ್ನಡದ ಪ್ರಯಾಣಿಕರಿಗೆ ನಿಲ್ದಾಣದ ಅದಿಕಾರಿಗಳು ಉದ್ದಟತನದ ಉತ್ತರಗಳನ್ನೂ ನೀಡಿರುವ ಉದಾಹರಣೆಗಳಿವೆ,

ಅಂತರಾಶ್ಟ್ರೀಯ ಅಂತ ಹೆಸರನ್ನು ಇಟ್ಟುಕೊಂಡ ಮಾತ್ರಕ್ಕೆ ನಮ್ಮ ತನವನ್ನು ಬಿಟ್ಟುಕೊಡುವುದು ಯಾತಕ್ಕಾಗಿ? ಅಂತರಾಶ್ಟ್ರೀಯವಾಗಲಿ ಮತ್ತೊಂದಾಗಲಿ ಕೊನೆಗೆ ವಿಮಾನ ನಿಲ್ದಾಣವಿರುವುದು ಕನ್ನಡದ ನೆಲದಲ್ಲೆ ಎನ್ನುವುದನ್ನು ಮರೆಯಬಾರದು, ಇದನ್ನು ಮರೆತಿರುವ ವಿಮಾನ ನಿಲ್ದಾಣಕ್ಕೆ  ಮತ್ತು ಸರಕಾರದವರಿಗೆ ಪತ್ರಬರೆದು ಕನ್ನಡದ ನೆಲದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಮೊದಲ ಸ್ತಾನ ಸಿಕ್ಕೇ ಸಿಗಬೇಕು ಎನ್ನುವುದನ್ನು ತಿಳಿಸೋಣ..
ವಿಮಾನ ನಿಲ್ದಾಣದ ಮತ್ತು ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳ ಮಿಂಚೆ- feedback@bialairport.com, cm@kar.nic.in