ಸೋಮವಾರ, ಆಗಸ್ಟ್ 8, 2011

ಆದಾಯ ತೆರಿಗೆ ನಿಯಮಗಳನ್ನ ತಿಳಿಬೇಕಾದ್ರೆ ಹಿಂದಿ/ಇಂಗ್ಲೀಶ್ ಗೊತ್ತಿರಬೇಕಾ?

ಆದಾಯ ತೆರಿಗೆ ಇಲಾಕೆಯವರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ರಿಟರ್ನ್ ಪೈಲ್ ಮಾಡೊಕ್ಕೆ ಅವಕಾಶ ಆಗ್ಲಿ ಅಂತ ವ್ಯವಸ್ತೆ ಮಾಡಿದ್ದರು, ಅಶ್ಟು ಕರ್ಚು ಮಾಡಿದ್ರು ಅದು ಬರೆ ಕೆಲವೇ ಕೆಲವು ಮಂದಿಗೆ ಉಪಯೋಗವಾಗುವಂತಿದ್ದುದ್ದು ಮಾತ್ರ ದುರದ್ರುಶ್ಟಕರ. ಹೇಗೆ ಅಂತಿರ? ಮುಂದೆ ಓದಿ......


ಕಳೆದ ವಾರ ನನಗೆ ತಿಳಿದವರೊಬ್ಬರು ಐಟಿ ರಿಟರ್ನ್ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದವರು ದಂಗಾಗಿ ಮನೆಗೆ ವಾಪಸ್ ಬಂದು, ಯಾರಾದ್ರು ಸಿಎ ಗೊತ್ತಿದ್ದ್ರೆ ಹೇಳಪ್ಪ ಅಂತ ನನ್ನ ಕೇಳಿದ್ರು, ಅದಕ್ಕೆ ನಾನು ಸಿಎ ಹತ್ತಿರ ಯಾಕೆ ಹೋಗ್ತಿರಾ, ಸುಮ್ನೆ ಅರಮನೆ ಮೈದಾನಕ್ಕೆ ಹೋಗಿ ಅಲ್ಲಿ ಎಲ್ಲಾ ಆರಾಮಗಿ ಆಗುತ್ತೆ ಅಂದೆ. ಅದಕ್ಕೆ ಅವರು, ತಾವು ಅರಮನೆ ಮೈದಾನಕ್ಕೆ ಹೋಗಿದ್ದಾಗಿ ಮತ್ತು ಅಲ್ಲಿ ಪೈಲ್ ಮಾಡೊದು ಅಶ್ಟು ಸುಲಬ ಅಲ್ಲ ಅಂತ ಹೇಳಿದ್ರು. ಆಮೆಲೆ, ಅವರು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಸಿಎ ಕಡೆಯಿಂದ ಐಟಿ ರಿಟರ್ನ್ಸ್ ಪೈಲ್ ಮಾಡಿಸಿದ್ರು.

ಯಾಕೆ ಅರಮನೆ ಮೈದಾನದಲ್ಲಿ ಲಕ್ಯಾಂತರ ರೂಪಾಯಿ ಕರ್ಚು ಮಾಡಿ ಅಬಿಯಾನ ಮಾಡ್ತಿರಬೇಕಾದ್ರೆ ಅಲ್ಲಿ ಕೆಲ್ಸ ಸುಲಬವಾಗಿರ್ಬೇಕಾಲ್ವ ಅಂತ ನಾನು ನನ್ನ ತೆರಿಗೆ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದಾಗ ತಿಳಿತು, ಇಲ್ಲಿ ತೆರಿಗೆ ಪೈಲ್ ಮಾಡೊದು ಅಶ್ಟು ಸುಲಬವಲ್ಲ. ಇದು ಬಲೇ ಕಶ್ಟದ ಕೆಲ್ಸ. ಒಳಗೆ ಹೋಗ್ತಿದ್ದಂಗೆ ನನಗೆ ಅಯ್ಯೋ ಮತ್ತೇನಾದ್ರು ಇಂಗ್ಲೀಶ್ ನವರು ಇಲ್ಲಿ ಆಡಳಿತ ಶುರು ಮಾಡಿದ್ರ ಅನ್ನೊ ಆತಂಕ ಆಯ್ತು. ಯಾಕಂದ್ರೆ ಇಲ್ಲಿನ ವ್ಯವಸ್ತೆಗಳು ಇಂಗ್ಲೀಶ್ ಗೊತ್ತಿರುವವರಿಗೆ ಮಾತ್ರ! ಸರಿ ಇಲ್ಲಿ ಕೆಲವು ಪುಸ್ತಕಗಳನ್ನ ಮಾರ್ತಿದ್ರು ಅಲ್ಲಿ ಹೋಗಿ ನೊಡೋಣ ಕನ್ನಡದ ತೆರಿಗೆ ಗೆ ಬಗೆಗಿನ ಪುಸ್ತಕ ಇದ್ಯ ನೊಡಿದ್ರೆ ಅಲ್ಲಿದಿದ್ದು ಬರಿ ಇಂಗ್ಲೀಶ್ ಮತ್ತು ಹಿಂದಿ ಪುಸ್ತಕಗಳು.

ಇದನ್ನೆಲ್ಲಾ ನೋಡಿದ್ರೆ, ಪ್ರತಿ ವರ್ಶ ಕನ್ನಡಿಗರಿಂದ ಲಕ್ಯಾಂತರ ಕೊಟಿ ಹಣ ಆದಾಯ ತೆರಿಗೆ ಇಲಾಕೆಗೆ ಹೋಗುತ್ತೆ. ಆದ್ರೆ ತೆರಿಗೆ ಬಗ್ಗೆ ತಿಳಿಯೋಕ್ಕೆ ಒಂದೇ ಒಂದು ಪುಸ್ತಕ ಕೂಡ ಕನ್ನಡದಲ್ಲಿ ಇಲ್ಲ, ಅಪ್ಲಿಕೇಶನ್, ಸೂಚನೆಗಳಿರೋ ನಾಮಪಲಕಗಳಲ್ಲಿ ಎಲ್ಲೂ ಕರ್ನಾಟಕದ ಜನ ಬಳಸೋ ಬಾಶೆ ಕನ್ನಡಕ್ಕೆ ಒಂದೇ ಒಂದು ಚಿಕ್ಕ ಸ್ತಾನ ಕೂಡ ಇಲ್ಲ. ತೆರಿಗೆ ರಿಟರ್ನ್ ಪೈಲ್ ಮಾಡಬೇಕು ಅಂದ್ರೆ ಇಂಗ್ಲಿಶ್ ಅತವಾ ಹಿಂದಿ ಗೊತ್ತಿರಬೇಕು ಅನ್ನೊ ತರ ವಾತಾವರಣ ನಿರ್ಮಾಣ ಮಾಡೊಕ್ಕೆ ಹೊರಟಿದೆಯೇ ನಮ್ಮ ಆದಾಯ ತೆರಿಗೆ ಇಲಾಕೆ? ಬಾರತ ಒಕ್ಕೂಟ ವ್ಯವಸ್ತೆಯಲ್ಲಿ ಕನ್ನಡಿಗನಿಗೆ ತನ್ನ ದೇಶದ ಆದಾಯ ತೆರಿಗೆ ನಿಯಮಗಳನ್ನ ತಿಳಿಯಲು ಬೇರೊಂದು ಬಾಶೆ ಕಲಿಯಬೇಕಾದ ವ್ಯವಸ್ತೆ ನಿರ್ಮಿಸಿರುವುದು ಸರಿಯೇ? ಜನರಿಂದ ತೆರಿಗೆ ಒಟ್ಟುಹಾಕೊ ಆದಾಯ ಇಲಾಕೆಯೇ ಕನ್ನಡವನ್ನ ಮರೆತರೇ, ತೆರಿಗೆಯನ್ನ ಬಳೋಸೋ ಇತರೇ ಇಲಾಕೆಗಳಲ್ಲಿ ಕನ್ನಡದ ಕತೇ ಹೇಗೆ ಅನ್ನೊದನ್ನ ಊಹಿಸಿಕೊಳ್ಳಬಹುದು.

ಒಬ್ಬ ಸಾಮಾನ್ಯ ಕನ್ನಡಿಗ ತಾನು ಸುಲಬವಾಗಿ ತೆರಿಗೆ ಬಗ್ಗೆ ಅರ್ತ ಮಾಡಿಕೊಳ್ಳೊಕ್ಕೆ ಮತ್ತು ಸುಲಬವಾಗಿ ತನ್ನ ತೆರಿಗೆ ರಿಟರ್ನ ಪೈಲ್ ಮಾಡೊತರ ವ್ಯವಸ್ತೆಯನ್ನ ಮಾಡೊದ್ರಲ್ಲಿ ನಮ್ಮ ಆದಾಯ ತೆರಿಗೆ ಇಲಾಕೆ ಸಂಪೂರ್ಣವಾಗಿ ವಿಪಲವಾಗಿದೆ. ಇದರಿಂದ ಕನ್ನಡಿಗರು ಬೇರೊಬ್ಬ ವ್ಯಕ್ತಿಯನ್ನ ಅವಲಂಬಿಸುವಂತೆ ಆಗಿರೋದು ನಿಜಕ್ಕೂ ದುರಂತ!

ಮುಂದಿನ ಬಾರಿಯಾದರೂ ಆದಾಯ ತೆರಿಗೆ ಇಲಾಕೆ ತನ್ನ ತಪ್ಪನ್ನ ತಿದ್ದಿಕೊಂಡು ಕನ್ನಡಿಗರ ಸ್ವಾವಲಂಬಿಗಳಾಗಿ ತಮ್ಮ ಆದಾಯ ತೆರಿಗೆ ವಿಶಯವನ್ನ ತಾವೇ ಅರಿತುಕೊಳ್ಳಲು ಅವಕಾಶವಾಗುವಂತೆ ವ್ಯವಸ್ತೆ ಕಲ್ಪಿಸವೇಕೆಂದು ಆಶಿಸುತ್ತೇನೆ.

ಬುಧವಾರ, ಆಗಸ್ಟ್ 3, 2011

ಸಂಸತ್ತಿನಲ್ಲಿ ಕನ್ನಡದ ಕಂಪು ಸದಾ ಮೊಳಗಲಿ

ನೆನ್ನೆ ನಡೆದ ಸಂಸತ್ ಕಲಾಪದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾದ ಲೋಕಸಬಾ ಸದಸ್ಯರಾದ ಚಲುವರಾಯಸ್ವಾಮಿಯವರು ಕನ್ನಡದಲ್ಲಿ ಬಾಶಣ ಮಾಡಿ ಗಮನ ಸೆಳೆದಿದ್ದಾರೆ. ಬಹಳ ದಿನಗಳ ಮೇಲೆ ಸಂಸತ್ತಿನಲ್ಲಿ ಕನ್ನಡದ ಕಂಪು ಮೊಳಗಿದೆ.


೧೯೬೭ ರಲ್ಲಿ ಲೋಕಸಬೆಯ ಕಲಾಪಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ ಹೆಚ್ ಪಟೇಲ್ ರವರು ಬಾಶಣ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲಬೇಕು.

ಲೋಕಸಬೆ ಕಲಾಪಗಳಿಗೆ ಹಿಂದಿ/ಇಂಗ್ಲೀಶ್ ಬರಲ್ಲ ಅಂತ ಹಲವಾರು ಜನ ಹಿಂದಿಯೇತರ ಲೋಕಸಬಾ ಸದಸ್ಯರು ಕಲಾಪಗಳಿಗೆ ಹೋಗದೆ ಅತವಾ ಹೋದರು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳದ ಬಗ್ಗೆ ಕೇಳಿದ್ದಿವಿ. ಆದರೆ ತಮ್ಮ ಬಾಶೆಯಲ್ಲು ಬಾಶಣ ಮಾಡಲು ಪ್ರಜಾಪ್ರಬುತ್ವದಲ್ಲಿ ಅವಕಾಶವಿದ್ದರು ಹಲವಾರು ಜನ ಸದಸ್ಯರು ತಮ್ಮ ಬಾಶೆಯನ್ನ ಬಳಸದಿರುವುದು ದುರಂತವೇ! ನಿಜಕ್ಕು ಅವರು ತಮ್ಮ ಬಾಶೆಯನ್ನ ಬಳಸಿದ್ದೇ ಆದಲ್ಲಿ ವಿಶಯವನ್ನ ಅತ್ಯಂತ ನೇರ ಮತ್ತು ನಿಕರವಾಗಿ ಹೇಳಬಹುದಲ್ಲದೇ ಲೋಕಸಬಾ ಟಿವಿ ಅತವಾ ಇನ್ಯಾವುದೋ ಟಿವಿಯಲ್ಲಿ ಅವರವರ ಕ್ಷೇತ್ರದ ಜನರಿಗೂ ತಾವು ಆಯ್ಕೆ ಮಾಡಿ ಕಳಿಸಿದ ಸದಸ್ಯ ಏನ್ ಮಾತಾಡ್ತಿದ್ದಾರೆ, ಯಾವ ವಿಶಯ ಪ್ರಸ್ತಾಪಿಸುತ್ತಿದ್ದಾರೆ ಅನ್ನೊದು ತಿಳಿಯೋ ಹಾಗೆ ಆಗುತ್ತೆ.

ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವಾರು ಜನರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ, ನಾಡಿನ ಬಗೆಗಿನ ಪ್ರೀತಿಯನ್ನ ತೋರಿಸಿದ್ದಾರೆ. ಕನ್ನಡ ಬಾಶೆಯನ್ನ ಬರಿ ಪ್ರಮಾಣವಚನಕ್ಕೆ ಮಾತ್ರ ಮೀಸಲಿಡದೇ ಎಲ್ಲಾ ರೀತಿಯ ಚರ್ಚೆಯಲ್ಲಿ ಕನ್ನಡ ಬಾಶೆಯನ್ನು ಬಳಸುವಂತಾಗಬೇಕು.ನೆನ್ನೆಯ ಕನ್ನಡ ಬಾಶಣ ಎಲ್ಲಾ ಲೋಕ ಸಭಾ ಸದಸ್ಯರಿಗೂ ಮಾದರಿಯಾಗಲಿ, ಮುಂದಿನ ದಿನಗಳಲ್ಲಿ ಲೋಕಸಬೆಯಲ್ಲಿ ನಮ್ಮ ನಾಡಿನ ಬಗೆಗಿನ ವಿಶಯಗಳ ಚರ್ಚೆ ನಮ್ಮ ಬಾಶೆಯಲ್ಲೇ ನಡೆಯಲಿ.

ಮುಕ್ಯವಾಗಿ- ಇದೆಲ್ಲಾ ನಡೆಯುತ್ತಿರುವುದು ಕನ್ನಡಿಗರಲ್ಲಿ ಆಗುತ್ತಿರೋ ಜಾಗ್ರುತಿಯಿಂದಲೇ. ಕನ್ನಡಿಗ ತನ್ನ ಬಾಶೆಯ ಬಗ್ಗೆ ಜಾಗ್ರುತಿ ಹೊಂದಿದಲ್ಲಿ ಎಲ್ಲಾ ಸದಸ್ಯರು ಕನ್ನಡದಲ್ಲೇ ಬಾಶಣ ಮಾಡುವಂತಾಗುತ್ತಾರೆ.

ಸೋಮವಾರ, ಜುಲೈ 4, 2011

ಪೆದ್ದುತನದ ಪರಮಾವದಿ?

ಸುವರ್ಣ ಕನ್ನಡ ಪಿಲಂ ಅವಾರ್ಡ್ ಕಾರ್ಯಕ್ರಮ ಕಳೆದ ವಾರ ಟಿವಿಯಲ್ಲಿ ನೋಡಿದೆ. ನಿಜಕ್ಕು ಅದ್ಬುತವಾದ ಕಾರ್ಯಕ್ರಮ, ಪರಬಾಶೆಗಳಲ್ಲಿ ಮಾತ್ರ ನಡೆಯುತ್ತಿದ್ದ ಅದ್ದೂರಿ ಕಾರ್ಯಕ್ರಮಗಳು, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲು ನಡೆಯಲು ಪ್ರಾರಂಬವಾಗಿರೋದು ನಿಜಕ್ಕೂ ಸಂತೋಶಕರ. ಈ ರೀತಿಯ ಕಾರ್ಯಕ್ರಮಗಳು, ಕನ್ನಡ ಚಿತ್ರರಂಗ, ತಾವೇನು ಯಾರಿಗೂ ಕಡಿಮೆಯಿಲ್ಲ ಅನ್ನೊದನ್ನ ಎತ್ತಿಹಿಡಿದಿದೆ....


ಈ ರೀತಿಯ ಕಾರ್ಯಕ್ರಮಗಳನ್ನ ಬಳಸಿಕೊಂಡು ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳಬಹುದು. ಈ ಕೆಲಸವನ್ನು ಬೇರೆ ಬಾಶೆಯ ಚಿತ್ರರಂಗದರು ತುಂಬ ಚೆನ್ನಾಗಿಯೇ ಮಾಡಿಕೊಂಡು ಬಂದಿದ್ದಾರೆ, ಆದರೆ ದುರದ್ರುಶ್ಟ ಅಂದ್ರೆ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಪರಬಾಶೆಯ ಹಾಡು/ಕುಣಿತದೊಂದಿಗೆ ಪರಬಾಶೆಯ ಚಿತ್ರಗಳಿಗೆ ನಮ್ಮ ರಾಜ್ಯದಲ್ಲಿ ಮಾರುಕಟ್ಟೆ ನಿರ್ಮಿಸೋಕ್ಕೆ ಹೊರಟಿರೋದು ಯಾಕೆ ಅನ್ನೊದು ಗೊತ್ತಾಗುತ್ತಿಲ್ಲ.



ಕಾರ್ಯಕ್ರಮಗಳಲ್ಲಿ- ಕನ್ನಡಿಗರು ಕನ್ನಡ ಸಿನೆಮಾಗಳನ್ನ ನೋಡಿ ಉತ್ತೇಜನ ಕೊಡಬೇಕು....., ಸಿನೆಮಾ ನೋಡೊ ಹವ್ಯಾಸ ಹೊರ ರಾಜ್ಯದಲ್ಲಿರುವಶ್ಟು ನಮ್ಮಲ್ಲಿಲ್ಲ....., ಕನ್ನಡ ಸಿನೆಮಾ ನೋಡೊಕ್ಕೆ ಜನರೇ ಇಲ್ಲ...ಸಿನೆಮಾವನ್ನ ತಿಯೇಟರಿನಲ್ಲೇ ನೋಡಿ....ಹೀಗೆ ಬಾಶಣಗಳನ್ನ ಮಾಡಿ.. ಅದೇ ಕಾರ್ಯಕ್ರಮದಲ್ಲಿ ಪರಬಾಶೆಯ ಹಾಡು/ಕುಣಿತ ನಡೆಸಿದರೆ ಕನ್ನಡಿಗರ ಪಾಡು ಏನಾಗಬಾರದು. ಗಂಟೆಗಟ್ಟಳೆ ಬಾಶಣ ಮಾಡಿ ಚಿತ್ರರಂಗದ ಎಲ್ಲಾ ತೊಡುಕು/ತೊಂದರೆಗಳಿಗೆ ಕನ್ನಡ ಚಿತ್ರ ನೋಡುಗರನ್ನೇ ಹೆಚ್ಚು ಗುರಿಯನ್ನಾಗಿಸಿ, ಪರಬಾಶೆಯ ಚಿತ್ರಗಳಿಗೆ ಕೈಮುಗಿಯುವ ಜನರಿಗೆ ನೈತಿಕತೆಯ ಬಗ್ಗೆ ಅರಿವಿದೆಯೇ?

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದವರೆ ಪರಬಾಶೆಯ ಸಿನೆಮಾಗಳಿಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಇವರಿಗೆ ಕನ್ನಡದ ಬಗ್ಗೆ ಕಳಕಳಿ ಇದೆಯೇ ಎಂಬ ಪ್ರಶ್ನೆ ಹುಟ್ಟೊ ಹಾಗೆ ಮಾಡಿದೆ. ಮತ್ತು ಇದರ ಬಗ್ಗೆ ಚಿತ್ರರಂಗದಲ್ಲಿ ಎಲ್ಲೂ ವಿರೋದ ಕಂಡುಬರದಿರುವುದು ಏಕೆ ಎನ್ನುವುದು ತಿಳಿಯುತ್ತಿಲ್ಲ.


ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ, ಇಲ್ಲ ಅಂದಿದ್ರೆ, ವರ್ಶಕ್ಕೆ ೧೫೦ ಕ್ಕು ಹೆಚ್ಚು ಸಿನೆಮಾಗಳು ಬಿಡುಗಡೆ ಆಗ್ತಾ ಇರಲಿಲ್ಲ, ಮತ್ತು ಮೊನ್ನೆ ನಡೆದಂತಹ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತಲೂ ಇರುತ್ತಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ ಮತ್ತು ಈ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳೊ ಅವಶ್ಯಕತೆ ಕೂಡ ಇದೆ. ಇದನ್ನ ಬಿಟ್ಟು ಹಿಂದಿ ಅತವಾ ಇನ್ಯಾವುದೋ ಹಾಡಿಗೆ ಕುಣಿಯೋದರ ಮೂಲಕ ಕನ್ನಡದ ಚಿತ್ರರಂಗದ ಮಾರುಕಟ್ಟೆಯನ್ನ ಕಡಿಮೆ ಮಾಡಿಕೊಳ್ತಿರೋದು ಪೆದ್ದುತನದ ಪರಮಾವದಿ ಅಲ್ವ?

ನಿಮಗೂ ಕನ್ನಡ ಕಾರ್ಯಕ್ರಮದಲ್ಲಿ ಪರಬಾಶೆಯ ಕುಣಿತ ಏಕೆ ಅನ್ನೊ ಪ್ರಶ್ನೆ ಇದ್ರೆ,
ಚಿತ್ರರಂಗದ ಅನೇಕರು ಪೇಸ್ ಬುಕ್ ಸೇರಿದಂತೆ ಅನೇಕ ಸಾಮಾಜಿಕ ತಾಣಗಳಲ್ಲಿ ಸುಲಬವಾಗಿ ಸಿಗ್ತಿದ್ದಾರೆ ಅವರಿಗೆ ಈ ವಿಶಯವನ್ನು ತಿಳಿಸಿ, ಮುಂದಿನ ಕಾರ್ಯಕ್ರಮದಲ್ಲಾದ್ರು ಸರಿ ಮಾಡಿಕೊಳ್ತಾರಾ ನೋಡೋಣ.

ಬುಧವಾರ, ಜೂನ್ 29, 2011

ಟ್ರಾಪಿಕ್ ಸಮಸ್ಯೆ ಯ ಜಾಗ್ರುತಿ ಕನ್ನಡದಲ್ಲಿರಲಿ

ಬೆಂಗಳೂರಿನ ಟ್ರಾಪಿಕ್ ನಿಯಂತ್ರಿಸುವಲ್ಲಿ ದೇಶದ ಹಲವಾರು ನಗರಗಳ ಪೋಲೀಸರಿಗೆ ಹೋಲಿಸಿದರೆ ನಮ್ಮ ಪೋಲೀಸರು ಬಹಳ ಮುಂದಿದ್ದಾರೆ. ತಂತ್ರಜ್ನಾನವನ್ನ ಬಳಸೋದರ ಮೂಲಕ ಟ್ರಾಪಿಕ್ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವಂತಹದ್ದು.

ಆದ್ರೆ, ಬೆಂಗಳೂರಿನ ಟ್ರಾಪಿಕ್ ಸಮಸ್ಯ್ತೆಯನ್ನು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರು ಪೋಲೀಸರಿಗೆ ಸರಿಯಾಗಿ ಸಹಕರಿಸಿಲ್ಲ ಎಂದು ಬೆಂಗಳೂರಿನ ಪೋಲೀಸ್ ಕಮಿಶನರ್ ಆದ ಜ್ಯೋತಿ ಪ್ರಕಾಶ್ ಮಿರ್ಜಿಯವರು ಇಂದು ನಗರದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಟ್ರಾಪಿಕ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪೋಲೀಸಿನವರಶ್ಟೇ ಸಾರ್ವಜನಿಕರ ಪಾತ್ರವೂ ಇದೆ. ಟ್ರಾಪಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರುತಿ ಅತ್ಯಗತ್ಯ. ಈ ಜಾಗ್ರುತಿ ಕೆಲಸವನ್ನು ಪೋಲೀಸಿನವರ ಮಾಡುತ್ತಿಲ್ಲವೆಂದೇನಿಲ್ಲ. ಸಾರ್ವಜನಿಕರಲ್ಲಿ ಟ್ರಾಪಿಕ್ ಸಮಸ್ಯೆ ಬಗ್ಗೆ ಜಾಗ್ರುತಿ ಮೂಡಿಸೋ ಕೆಲ್ಸನೂ ಸಹ ಪೋಲೀಸಿನವರು ಮಾಡುತ್ತಿದ್ದಾರೆ. ಆದರೆ ಇದು ಪರಿಣಾಮಕಾರಿಯಾಗಿಲ್ಲ ಅನ್ನೊದು ನನ್ನ ಅನಿಸಿಕೆ.

ಟ್ರಾಪಿಕ್ ಸಮಸ್ಯೆಯ ಬಗ್ಗೆ ಜಾಗ್ರುತಿ ಕೆಲ್ಸದಲ್ಲಿ ಬಾಶೆ ಅತ್ಯಂತ ಮುಕ್ಯ. ಜನರಿಗೆ ಅರ್ತ ಆಗೋ ಬಾಶೆಲಿ ಈ ಕೆಲ್ಸ ನಡೆದ್ರೆ ಪರಿಣಾಮಕಾರಿಯಾಗಿರುತ್ತೆ. ಬೆಂಗಳೂರಿನ ಬಹುಸಂಕ್ಯಾತ ಜನರ ಬಾಶೆ ಕನ್ನಡದಲ್ಲಿ ಜಾಗ್ರುತಿ ಕಾರ್ಯಕ್ರಮ ನಡೆದ್ರೆ ಜಾಗ್ರುತಿಯ ಸಂದೇಶ ಜನರಿಗೆ ತಲುಪುತ್ತೆ. ವಿಶಾದದ ಸಂಗತಿಯೆಂದರೆ, ಪೋಲೀಸಿನವರು ಸಾರ್ವಜನಿಕರನ್ನ ಜಾಗ್ರುತಿ ಮಾಡೋ ಕಾರ್ಯದಲ್ಲಿ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಬಹುಸಂಕ್ಯಾತ ಕನ್ನಡಿಗರನ್ನ ಮರೆತಿರುವುದು ದುರದ್ರುಶ್ಟವೇ.

ಟ್ರಾಪಿಕ್ ಸಮಸ್ಯೆಯ ಬಗ್ಗೆ ನಗರದಲ್ಲಿ ಹಲವಾರು ಹೋರ್ಡಿಂಗ್ ಗಳನ್ನ ನೋಡಬಹುದು ಈ ಹೋರ್ಡಿಂಗ್ ಗಳನ್ನ ಪೋಲೀಸ್ ಇಲಾಕೆ ಜನರಿಗೆ ಜಾಗ್ರುತಿ ಮಾಡೊಕ್ಕೆ ಅಂತನೇ ಹಾಕಿರೋದು . ಆದ್ರೆ ಹೆಚ್ಚಿನ ಹೋರ್ಡಿಂಗ್ ಗಳಲ್ಲಿ ಬಹುಸಂಕ್ಯಾತ ಬೆಂಗಳೂರಿಗರಿಗೆ ಅರ್ತವಾಗದ ಇಂಗ್ಲೀಶ್ ಬಾಶೆಯಲ್ಲಿ ಮಾತ್ರ ಇದೆ. ಇನ್ನು ಇತ್ತೀಚೆಗೆ ಹಲವಾರು ಕಡೆ ಅಳವಡಿಸಲಾಗಿರೋ ಎಲೆಟ್ರಾನಿಕ್ ಡಿಸ್ಪ್ಲೆ ಕಡೆ ನೋಡಿದ್ರೆ, ಅಲ್ಲೂ ಸಹ ಇದೆ ರೀತಿ ಜನರಿಗೆ ಗೊತ್ತಿಲ್ಲದ ಬಾಶೆಯಲ್ಲಿ ಜಾಗ್ರುತಿ ಮಾಡೊ ಪ್ರಯತ್ನ ಮಾಡ್ತಿರೋದು ಎದ್ದು ಕಾಣಿಸುತ್ತಿದೆ.

ಇನ್ನು ಟ್ರಾಫಿಕ್ ಪೋಲೀಸಿನವರು ಕಳೆದ ಕೆಲವು ತಿಂಗಳ ಹಿಂದೆ ಜನರಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಜಾಗ್ರುತಿ ಮಾಡೊಕ್ಕೆ ಅಂತ ಒಂದು ವೀಡಿಯೋ ಮಾಡಿ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಪ್ರದರ್ಶನ ಮಾಡೊ ವ್ಯವಸ್ತೆ ಮಾಡಿದ್ದಾರೆ. ಇದು ಒಂದು ಉತ್ತಮ ನಡೆಯೇ, ಆದ್ರೆ ಈ ವೀಡಿಯೋ ನಲ್ಲಿ ಜಾಗ್ರುತಿಗೆ ಅಂತ ಬಳಸಿರೋದು ಬೆಂಗಳೂರಿನ ಜನರಿಗೆ ಅರ್ತವಾಗದಿರೋ ಹಿಂದಿ ಬಾಶೆನ! ಜಾಗ್ರುತಿ ಮಾಡೊವಾಗ ಬಳಸಬೇಕಾದ್ದು ಜನರಿಗೆ ಗೊತ್ತಿರೋ ಕನ್ನಡ ಬಾಶೆನ ಹೊರೆತು, ಜನರಿಗೆ ತಿಳಿಯದ ಹಿಂದಿ ಬಾಶೆಯನ್ನಲ್ಲ ಅಲ್ವ?

ನಿಜವಾಗಿಯೂ ಪೋಲೀಸ್ ಇಲಾಕೆ ತನ್ನ ಜಾಗ್ರುತಿ ಮೂಡಿಸೋ ಕಾರ್ಯದಲ್ಲಿ ಕನ್ನಡವನ್ನ ಬಳಸಿದ್ರೆ, ಇಂದಿಗಿಂತ ಹೆಚ್ಹು ಪರಿಣಾಮಕಾರಿಯಾಗಿ ಜನರನ್ನ ಜಾಗ್ರುತರನ್ನಾಗಿ ಮಾಡೊಕ್ಕೆ ಸಾದ್ಯ ಅಲ್ವ?

ಟ್ರಾಪಿಕ್ ಸಮಸ್ಯೆಯನ್ನ ಜನರಲ್ಲಿ ಜಾಗ್ರುತಿ ಮಾಡೊದ್ರಿಂದ ಮಾತ್ರ ಕಡಿಮೆ ಮಾಡಬಹುದು, ಜಾಗ್ರುತಿಗೆ ಬಳಸೋ ಬಾಶೆ ಕೂಡ ಜನರಿಗೆ ಅರ್ತ ಆಗೋ ಬಾಶೆ, ಕನ್ನಡ ಆಗಿರಬೇಕು ಅಲ್ವ? ಏನಂತೀರ.

ಬುಧವಾರ, ಜೂನ್ 1, 2011

ಕನ್ನಡ ಪ್ರೇಕ್ಷಕರಿಗೆ ತಿಳುವಳಿಕೆ ಇಲ್ವ?


ಡಬ್ಬಿಂಗ್ ಬೇಡ ಎಂದು ಹೇಳುತ್ತಿರುವ ಬಿ ಸುರೇಶ ರವರು ಫೇಸ್ ಬುಕ್ ನಲ್ಲಿ ಕೆಲವು ಡಬ್ಬಿಂಗ್ ಪರವಾದ ಮಾತುಗಳನ್ನು ಪಟ್ಟಿ ಮಾಡಿ ಅದಕ್ಕೆ ಉತ್ತರಿಸಲು ಪ್ರಯತ್ಸಿಸಿದ್ದಾರೆ. ಡಬ್ಬಿಂಗ್ ಪರವಾದ ಹೆಚ್ಚು ಕಡಿಮೆ ಎಲ್ಲಾ ಮಾತುಗಳನ್ನ ಪಟ್ಟಿಮಾಡಿದ್ದಕ್ಕಾಗಿ ಮತ್ತು ಅದಕ್ಕೆ ಅರೋಗ್ಯಕರ ರೀತಿಯಲ್ಲಿ ಉತ್ತರಿಸಲು ಪ್ರಯತ್ಸಿಸಿದ್ದಕ್ಕೆ ನಾನು ಅಬಿನಂದಿಸುತ್ತೇನೆ.

ಡಬ್ಬಿಂಗ್ ಪರವಾದ ಮಾತುಗಳಲ್ಲಿ ಡಬ್ಬಿಂಗ್ ಬೇಕೆ ಬೇಡವೇ ಅನ್ನೊದನ್ನ ಪ್ರೇಕ್ಷಕ(ಮಾರುಕಟ್ಟೆ) ನಿರ್ದರಿಸರಿ ಅನ್ನೋದು ಒಂದು. ಇದೇ ವಾದ ನನ್ನದೂ ಕೂಡ. ಇದೇ ವಿಶಯವಾಗಿ ನನ್ನ ಬ್ಲಾಗಿನಲ್ಲೂ ಸಹ ಒಂದು ಲೇಖನ ಬರೆದಿದ್ದೇನೆ. ಆದರೆ ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ದರಿಸೋದು ಸರಿ ಅಲ್ಲ ಅನ್ನೋ ಹಾಗೆ ಬಿ ಸುರೇಶ ರವರು ಹೇಳಿದ್ದಾರೆ. ಇದರ ಬಗ್ಗೆ ಅವರ ಉತ್ತರ ನೋಡಿ-

'ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ಧರಿಸಲಿ’ ಎಂದು ಹಲವರು ಹೇಳಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಆ ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು. ಆ ಮೂಲಕ ಪ್ರಯೋಗಗಳು ಆಗಬೇಕು. ಇಲ್ಲವಾದರೆ ಸರಿಯಾಗಿ ಕುಡಿಯುವ ನೀರೇ ಇಲ್ಲದ, ಫ್ಲೋರೈಡ್‌ ಯುಕ್ತ ನೀರು ಕುಡಿದು ನರಳುತ್ತಿರುವವರಿರುವ ಹಳ್ಳಿಗಳಲ್ಲಿ ಧಾರಾಳವಾಗಿ ಪೆಪ್ಸಿ, ಕೋಕಾಕೋಲ ಸಿಗುತ್ತಿರುವಂತೆ ಆಗುತ್ತದೆ. ಯಾವುದೇ ಸರಕಿನ ಲಾಬಾಲಾಭಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನು ಬಳಸಿ ಎಂದು ಹೇರುವುದು ಆ ಸಮಾಜಕ್ಕೆ ಮಾಡುವ ಅಪರಾಧ ಎಂದು ನೋಮ್‌ ಚಾಮ್‌ಸ್ಕಿ ಯಂತಹ ಹಿರಿಯ ಅರ್ಥಶಾಸ್ತ್ರಜ್ಞರು. ಸಮಾಜ ಚಿಂತಕರು ಮಾಡಿರುವ ಚರ್ಚೆಗಳನ್ನು ಇದಕ್ಕಾಗಿ ಗಮನಿಸಬಹುದು. ಆ ಪುಸ್ತಕಗಳನ್ನು ಓದಲಾಗದವರು ಆಫ್ರಿಕಾದ ಗಿರಿಜನರ ಕಾಡಿನೊಳಗೆ ಬಂದು ಬೀಳುವ ಕೋಕ್ ಬಾಟಲಿಯಿಂದ ಒಂದು ಸಮಾಜವೇ ತಲ್ಲಣಗೊಳ್ಳುವ ಕತೆಯನ್ನುಳ್ಳ ಮಾತಿಲ್ಲದ ಸಿನಿಮಾ ನೋಡಬಹುದು. ಅಂತಹ ಸ್ಥಿತಿ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬರಬಾರದು. ಹೀಗಾಗಿ ಡಬ್ಬಿಂಗ್ ಬೇಕೆ ಬೇಡವೇ ಎಂಬ ವಿಷಯವನ್ನು ಪ್ರೇಕ್ಷಕರು ಅಥವಾ ಮಾರುಕಟ್ಟೆ ನಿರ್ಧರಿಸಲಿ ಎಂಬ ಮಾತು ಸರಿಯಾಗುವುದಿಲ್ಲ.

ಅವರ ಮಾತಿನ ಮೊದಲಿನಲ್ಲಿ ” ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು ಆ ಮೂಲಕ ಪ್ರಯೋಗಗಳು ಆಗಬೇಕು.” ಎಂದು ಹೇಳಿದ್ದಾರೆ ಇದು ಒಪ್ಪುವಂತಹ ಮಾತೆ, ಚರ್ಚೆ ಆಗಬೇಕೆ ಹೊರೆತು ಉದ್ಯಮದಲ್ಲಿ ಇರುವವರೇ ಬಳಸುವವರಿಗೆ ಏನು ಬೇಕು ಅಂತ ನಿರ್ದಾರ ಮಾಡೋದು ಎಶ್ಟು ಸರಿ? ಬಿ ಸುರೇಶರವರು ಹೇಳಿದ ಹಾಗೆ ಡಬ್ಬಿಂಗ್ ವಿಶಯವಾಗಿ ಯಾವುದಾದರೂ ಚರ್ಚೆ ನಡೆದಿದೆಯೇ ಅತವಾ ಡಬ್ಬಿಂಗ್ ಪ್ರಯೋಗಗಳು ನಡೆದಿದೆಯೇ? ಚರ್ಚೆ ನಡೆಯದೇ...... ಪ್ರಯೇಗ ನಡೆಸದೇ...... ಡಬ್ಬಿಂಗ್ ಬೇಡ ಅನ್ನೊದು ಎಶ್ಟು ಸರಿ?ಡಬ್ಬಿಂಗ್ ಪ್ರಯೋಗ ಆಗಲೇ ಬಾರದು ಅಂತ ಟೊಂಕ ಕಟ್ಟಿ ನಿಂತಿರೋ ಉದ್ಯಮದೊಳಗಿನ ಜನರನ್ನ ಏನನ್ನಬೇಕು

ಇದೇ ಉತ್ತರದ ಇನ್ನೊಂದೆಡೆ ಒಬ್ಬ ಹಿರಿಯ ಅರ್ತಶಾಸ್ತ್ರಜ್ನ ರ ಮಾತನ್ನ ಉಲ್ಲೆಕಿಸುತ್ತಾ ಲಾಬಾಲಾಬಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನ ಬಳಸಿ ಎಂದು ಹೇರುವುದ ಅಪರಾದ ಅಂತ ಹೇಳಿದ್ದಾರೆ. ಕನ್ನಡ ಪ್ರೇಕ್ಷಕ ಸಮಾಜ ಯಾವುದು ಸರಿ, ಯಾವುದು ತಪ್ಪು ಅನ್ನೊ ತಿಳುವಳಿಕೆ ಇಲ್ಲದ್ದೇ? ಅತವಾ ಕನ್ನಡದ ಪ್ರೇಕ್ಷಕರು ಲಾಬಲಾಬಗಳ ತಿಳುವಳಿಕೆ ಇಲ್ಲದವರೇ? ಪ್ರೇಕ್ಷಕರನ್ನ ತಿಳುವಳಿಕೆ ಇಲ್ಲದವರು ಅನ್ನೊದು ಮತ್ತು ಆ ರೀತಿಯ ವಾಕ್ಯಗಳ ಜೊತೆ ಉಲ್ಲೇಕಿಸಿ ಹೇಳೋದು ಸರಿಯೇ?


ಕನ್ನಡದ ಪ್ರೇಕ್ಷಕರಿಗೆ ಯಾವುದು ಸರಿ ಯಾವುದು ತಪ್ಪು ಅಂತ ನಿರ್ದಾರ ಮಾಡೋ ಸ್ವಾತಂತ್ರ ಮತ್ತು ತಿಳುವಳಿಕೆ ಇದೆ. ಡಬ್ಬಿಂಗ್ ಸಿನೆಮಾ ಬಿಡುವುದರಿಂದ ನಿಜವಾಗಿಯೂ ಪ್ರೇಕ್ಷಕರ ಸ್ವಾತಂತ್ರಕ್ಕೆ ಮತ್ತು ತಿಳುವಳಿಕೆಗೆ ಗೌರವ ನೀಡಿದಂತಾಗುತ್ತದೆ.

ಪ್ರೇಕ್ಷಕನಿಗೆ ಗೌರವ ಮತ್ತು ಸ್ವಾತಂತ್ರ ನೀಡೋ ಮನಸ್ಸು ಡಬ್ಬಿಂಗ್ ವಿರೋದಿಸೋ ಉದ್ಯಮದ ಜನರಿಗೆ ಇದೆಯೇ?

ಭಾನುವಾರ, ಮೇ 29, 2011

ಇದು ಹಿಂದಿ ಹೇರಿಕೆ ಬೂತದ ಕೈಚಳಕ

ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).

ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು.

ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-

೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.



೨. ಸ್ವಲ್ಪ ದಿನಗಳ ಹಿಂದೆ ವಿಕ ನಲ್ಲಿ, ರೈಲ್ವೆಯಲ್ಲಿ ಪ್ರಯಣಿಕರ ಸುರಕ್ಷತೆಯ ಅರಿವಿಗಾಗಿ ನೀಡೋ ಜಾಹಿರಾತು ಹಿಂದಿಯಲ್ಲಿ ಇತ್ತು. ಏನಪ್ಪ ಕನ್ನಡಿಗರ ಸುರಕ್ಷತೆ ಸರಕಾರಕ್ಕೆ ಬೇಡ್ವ?





೩. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿಂದಿ ಬಾಶೆಯ ವಾಕ್ಯವನ್ನ ಕನ್ನಡ ಲಿಪಿನಲ್ಲಿ ಬರೆದು ಜಾಹಿರಾತು ಹಾಕಿದೆ. ಇದು ಕಾಟಾಚಾರಕ್ಕೆ ಹಾಕಿರೋದೇ ಅಲ್ವ? ಜಾಹಿರಾತು ಕೊಟ್ಟಂಗು ಇರ್ಬೇಕು, ಕೊಡದೇ ಇರೋ ಹಾಗೂ ಇರಬೇಕು. ನಮ್ ದುಡ್ಡು , ಹಿಂದಿ ಜಾತ್ರೆ.







೪. ಮೊನ್ನೆ ಮತ್ತೆ ರೈಲ್ವೆ , ವಿಕ ನಲ್ಲಿ ಜಾಹಿರಾತು ನೀಡಿದೆ. ದೇವರಾಣೆ ಯಾಕೆ ಅಂತ ನನಗಂತೂ ಗೊತ್ತಾಗ್ಲಿಲ್ಲ.





ಇವು ಬರಿ ಸ್ಯಾಂಪಲ್ ಗಳು ಅಶ್ಟೆ! ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ

ಈ ಮೇಲಿನವು ಕನ್ನಡಿಗರ ಅತವಾ ಹಿಂದಿಯೇತರರ ಮೇಲೆ ನಡೆಯುತ್ತಿರೋ ಹಿಂದಿ ಹೇರಿಕೆ ಬೂತದ ಕೈಚಳಕ. ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ ತಪ್ಪ್ಪು ಅಂತ ಅನ್ನಿಸಲ್ಲ, ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೋದಂತು ಡೆಪೆನೆಟ್ ಆಗಿ ಹೇಳ್ಬಹುದು. ಮತ್ತ್ತೆ.. ಈ ಜಾಹಿರಾತುಗಳನ್ನ ನೋಡಿದ್ರೆ, ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ. ಅನ್ನೊ ಸಂದೇಶ ಎದ್ದು ಕಾಣಿಸ್ತಿದೆ, ಈ ಸಂದೇಶ ನಿಜಕ್ಕೂ ಆತಂಕ ಹುಟ್ಟಿಸ್ತಿದೆ.

ಹಿಂದಿಯೇತರರೂ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು
ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ, ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಕನ್ನಡಿಗರೂ, ಸರಕಾರದ ಕಾರ್ಯ/ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು ಅಲ್ವ?

ಈ ಹಿಂದಿ ಹೇರಿಕೆ ಬೂತದಿಂದ ಮುಕ್ತಿ ಯಾವಗ?

ಸೋಮವಾರ, ಮೇ 2, 2011

ಜಾತ್ರೆ,ಉತ್ಸವ, ಸಮ್ಮೇಳನಗಳ ಆಯೋಜಕರಿಗೆ ಕನ್ನಡದ ಬಗ್ಗೆ ಬದ್ದತೆಯಿದೆಯೇ?


ಸರಕಾರ ಜನರ ಸುಂಕದ ಹಣದಲ್ಲಿ ಕನ್ನಡ ಸಮ್ಮೇಳನಗಳು, ಉತ್ಸವಗಳನ್ನ ನಡೆಸುತ್ತಿದೆ. ಆ ಸಮ್ಮೇಳನಗಳ, ಉತ್ಸವಗಳ ಉದ್ದೇಶ ಸರಿಯಾಗಿಯೇ ಇರಬಹುದು, ಆದ್ರೆ ಆ ಕಾರ್ಯಕ್ರಮಗಳು ನಡೆಯುವಾಗ ನಮ್ಮ ನಾಡಿಗೆ ಸಿಗಬೇಕಾದ ಮನ್ನಣೆ ಮತ್ತು ನಂತರದ ದಿನದಲ್ಲಿ ಕಾರ್ಯಕ್ರಮಗಳಿಂದ ಆಗಬೇಕಾದ ಬದಲಾವಣೆಗಳು ಆಗದಿರುವುದರಿಂದ ನಿಜವಾಗಿಯೂ ಈ ಸಭೆ ಸಮ್ಮೇಳನ, ಉತ್ಸವಗಳಿಗೆ ಕೋಟಿ ಕೋಟಿ ಹಣ ಸುರಿಯುವ ಅವಶ್ಯಕತೆ ಇದಯೇ



ಕೋಟಿ ಕೋಟಿ ಸುರಿದು ನಡೆಸುವ ಸಭೆ ಸಮಾರಂಬಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ನಾಡಿನ ಏಳಿಗೆಗೆ/ ನಾಡಿನ ಸಮಸ್ಯೆಯ ಪರಿಹಾರಕ್ಕೆ ಬೇಕಾದ ನಿರ್ಣಯಗಳನ್ನು ತೆಗೆದುಕೊಂಡು, ಆ ನಿರ್ಣಯಗಳ ಜಾರಿಗೊಳಿಸಿದಾಗಲೇ ಆ ಸಮ್ಮೇಳನಗಳು ಯಶಸ್ವಿಯಾದಂತೆ. ಸಮ್ಮೇಳನಗಳ ವೇದಿಕೆಯಲ್ಲಿ ಕನ್ನಡ.. ಕನ್ನಡ ಅನ್ನೊ ಸರಕಾರ, ಕಾರ್ಯಕ್ರಮ ಮುಗಿದ ನಂತರ ಕನ್ನಡವನ್ನೇ ಮರೆಯುತ್ತಿರುವುದು ಸರಿಯೇ? ನಿರ್ಣಯಗಳನ್ನು ತೆಗೆದುಕೊಡು, ನಿರ್ಣಯವನ್ನ ಜಾರಿಗೊಳಿಸದೇ, ಜನ ಸೇರಿದ್ದೇ ಯಶಸ್ವಿಯೆನ್ನುವುದು ಎಶ್ಟು ಸರಿ?

ಇದೀಗ ನಮ್ಮ ಮುಕ್ಯ ಮಂತ್ರಿಗಳ ಪೋಟೋ ಜೊತೆಗೆ, ಕಳೆದ ತಿಂಗ್ಳು ನಡೆದ ವಿಶ್ವ ಕನ್ನಡಿಗರ ಸಮ್ಮೇಳನ ಯಶಸ್ವಿ ಅಂತ ಎಲ್ಲಾ ಕಡೆ ಜಾಹಿರಾತು ನೀಡ್ತಿದ್ದಾರೆ. ನಿಜವಾಗಿಯೂ ವಿಶ್ವ ಕನ್ನಡಿಗರ ಸಮಾವೇಶ ಯಶಸ್ವಿ ಯಾಗಿದಿಯೇ?ಸಮ್ಮೇಳನ ನಡೆದ ಕೆಲವೇ ದಿನದಲ್ಲಿ ನಾಡ ವಿರೋದಿಗಳು ಬೆಳಗಾವಿ ನಗರ ಪಾಲಿಕೆಯಲ್ಲೇ ಮೇಲುಗೈ ಸಾದಿಸಲು ಸಹಾಯ ಮಾಡಿದವರು ಸಮ್ಮೇಳನ ಯಶಸ್ವಿ ಅನ್ನೋದು ಸರಿಯೇ? ೨೦ ಲಕ್ಷ ಜನ ಬಂದಿದಾರೆ ಅಂದ್ರೆ ಅದು ಯಶಸ್ವಿಯೇ? ಗಡಿನಾಡಿನಲ್ಲಿ ನಡೆದ ಸಮ್ಮೇಳನದಿಂದ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು, ವಿಬಜನೆಯ ಕೂಗು ನಿಲ್ಲಬೇಕು ಎನ್ನೋ ಆಶಯ ಏನಾಯಿತು?

ಇದರ ಜೊತೆಗೆ ಸರಕಾರ ಗಡಿ ನಾಡಿನ ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಇಲ್ಲಿ ಆಯಾ ಜಿಲ್ಲೆಯ ಕಲಾವಿದರಿಗೆ ಅವಕಾಶ ಸಿಗಬೇಕು ಅಲ್ವ? ಜೊತೆಗೆ ಆಯಾ ಜಿಲ್ಲೆಯ ಕಲೆ ಸಂಸ್ಕೃತಿ ಗೆ ಮನ್ನಣೆ ಸಿಗ್ಬೇಕು ಅಲ್ವ?ಈ ಉತ್ಸವಗಳ ಮೂಲಕ ಸರಕಾರ ಗಡಿ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಉಪಯೋಗಿಸಿಕೊಳ್ಳಬಹುದಿತ್ತು. ಆದ್ರೆ ಇಲ್ಲಿ ನಡಿತಿರೋದೇ ಬೇರೆ, ಬೀದರ್, ಗುಲ್ಬರ್ಗ ಉತ್ಸವದಲ್ಲಿ ಕಾಟಾಚಾರಕ್ಕೆ ಕನ್ನಡ ಕಾರ್ಯಕ್ರಮ ನಡೆಸಿ, ಹೆಚ್ಚು ಹೆಚ್ಚು ಹಿಂದಿ ಕಾರ್ಯಕ್ರಮ ನ ಆಯೋಜಿಸ್ತಿರೋದು ನೋಡಿದ್ರೆ ಸರಕಾರನೇ ಈ ಉತ್ಸವಗಳ ಮೂಲಕ ಹಿಂದಿ ಬಾಶೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ಒಂದು ದುರಂತ.

ಇನ್ನು ನಾಡ ಹಬ್ಬ ಮೈಸೂರು ದಸರ, ಹಂಪಿ ಉತ್ಸವಕ್ಕೆ ಬಂದರೆ, ನಮ್ಮ ನಾಡ ಹಬ್ಬದಲ್ಲಿ ನಮ್ಮ ನಾಡಿನ ವಿಶಯಗಳಿಗೆ ಮನ್ನಣೆ ದೊರೆಯಬೇಕಾದುದ್ದು ನ್ಯಾಯಯುತವಾದುದು, ಇಲ್ಲೇನಾಗ್ತಿದೆ? ಯುವ ದಸರ ಹೆಸರಲ್ಲಿ ಹಿಂದಿ ಕಾರ್ಯಕ್ರಮ ನಡ್ತೆಸಿದ್ದಾರೆ, ಹಂಪಿ ಉತ್ಸವಕ್ಕೆ ಲಕ್ಷಾಂತರ ರೂಪಾಯಿ ಕೊಟ್ಟು ನಮ್ಮ ನಾಡಿಗೆ ಸಂಬಂದವಿಲ್ಲದ ಪರಬಾಶೆಯ ಕಲಾವಿದರಿಂದ ಪರಬಾಶೆಯ ಕಾರ್ಯಕ್ರಮ ನಡೆಸ್ತಿದ್ದಾರೆ.

ಇದನ್ನೆಲ್ಲಾ ನೋಡಿದ್ರೆ ನಿಜವಾಗಿಯೂ ಸಮ್ಮೇಳನ, ಉತ್ಸವ, ಜಾತ್ರೆ, ಹಬ್ಬಗಳನ್ನ ನಡೆಸೋ ಸರಕಾರ ಮತ್ತು ಕಾರ್ಯಕ್ರಮಗಳ ಆಯೋಜಕರಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ನಿಜವಾಗಿಯೂ ಬದ್ದತೆಯಿದೆಯೇ ಎನ್ನೊ ಪ್ರಶ್ನೆ ಹುಟ್ಟುತ್ತೆ.