ಗುರುವಾರ, ಡಿಸೆಂಬರ್ 8, 2011

ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?


೭೮ನೇ ಕನ್ನಡ ನುಡಿಹಬ್ಬವು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇದೇ ತಿಂಗಳ ೯ನೇ ತಾರೀಕಿನಂದು ಶುರುವಾಗ್ತಿದೆ. ಪ್ರತಿಸರಿಯಂತೆ ಈ ಸರಿಯೂ ಅನೇಕ ಗೋಶ್ಟಿಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟಗಳನ್ನ ಏರ್ಪಡಿಸಿದ್ದಾರೆ ಇದೆಲ್ಲವುದರ ಜೊತೆಗೆ ಇಲ್ಲಿ  ನಾಡಿನ ಸಾಹಿತ್ಯ ರಂಗದ  ದಿಗ್ಗಜರು ಬಂದು ಸೇರುತ್ತಾರೆ.

ನುಡಿಹಬ್ಬದ ಕುಶಿಯಲ್ಲಿ  ಬಾಗಿಯಾಗೋಕ್ಕೆ ನಾನು ಸಹ ಇಂದು ಗಂಗಾವತಿಗೆ ಹೋಗುವವನಿದ್ದೇನೆ. ಇದಕ್ಕೆಂದು ನಮ್ಮ ಕ.ರಾ.ರ.ಸಾ.ಸಂ ಯ ಬಸ್ಸಿನಲ್ಲಿ ಒಂದು ಟಿಕೆಟ್ ಅನ್ನು ಕಾಯ್ದಿರಿಸಿದ್ದೇನೆ.  ಆದರೆ ಈ ಟಿಕೆಟ್ ನೋಡಿದ ತಕ್ಯಣ ನನ್ನ ಮನಸ್ಸಿನಲ್ಲಿ ಬಂದಿದ್ದು " ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?" ಎಂಬುದು, ಹೀಗೆ ನನ್ನ ಮನಸ್ಸಿನಲ್ಲಿ ಬರೋಕ್ಕೆ ಕಾರಣವಿದೆ. ಅದೇನಂದ್ರೆ ತಂತ್ರಜ್ನಾನ ಇಶ್ಟು ಮುಂದುವರೆದರೂ ಸಹ ಇಂದಿಗೂ ನಮ್ಮ  ಕ.ರ.ಸಾ.ಸಂ ಯವರು ಕನ್ನಡದಲ್ಲಿ ಟಿಕೆಟ್ ಮುದ್ರಿಸಿಕೊಡದಿರೋದು.  ಕ.ರಾ.ರ.ಸಾ.ಸಂ ಯ ಸೀಟು ಕಾಯ್ದಿರಿಸುವ ಟಿಕೆಟ್ ನಲ್ಲಿ ಕಾಯ್ದಿರಿಸುವಿಕೆಗೆ ಸಂಬಂದಿಸಿದ ಎಲ್ಲಾ ಮಾಹಿತಿಗಳು ಇಂಗ್ಲೀಶ್ ನಲ್ಲಿ ಇವೆ. ಇಂಗ್ಲೀಶ್ ಸರಿಯಾಗಿ ಬಲ್ಲವರು ತಮಗೆ ನೀಡಿದ ಟಿಕೆಟ್ ಸರಿಯಿದೆಯೇ ಇಲ್ಲವೇ ಎನ್ನೊದನ್ನ ತಿಳಿಯೋಕ್ಕೆ ಸಾದ್ಯ, ಇಂಗ್ಲೀಶ್ ಗೊತ್ತಿಲ್ಲದವರ ಕತೆ ದೇವರೇ ಬಲ್ಲ. ಗಂಗಾವತಿಯ ನುಡಿಹಬ್ಬಕ್ಕೆ ಬರಬೇಕಾದವರು ಅಕಸ್ಮಾತ್ ತಪ್ಪಾಗಿ ಬೇರೆಯಾವುದೋ ಟಿಕೆಟ್ ಪಡೆದು, ಸರಿಯಿದೆಯೇ ಎಂದು ನೋಡೊಕ್ಕೆ ತಿಳಿಯದೇ ಇನ್ನೆಲ್ಲೋ ಹೋಗುವ ಪರಿಸ್ತಿತಿ ಬಂದ್ರೆ ಅದಕ್ಕೆ ಆಶ್ಚರ್ಯಪಡಬೇಕಾದ್ದಿಲ್ಲ.


ಸರಕಾರ ಪ್ರತಿವರ್ಶ ಕೋಟ್ಯಂತರ ರೂಪಾಯಿ ಕರ್ಚು ಮಾಡಿ ಸಾಹಿತ್ಯ ಸಮ್ಮೇಳನದ ಜೊತೆಗೆ ಹಲವಾರು ತರದ ಕನ್ನಡ ಹಬ್ಬಗಳನ್ನ ಆಚರಿಸುತ್ತದೆ. ಆದರೆ ಅದೇ ಸರಕಾರದ  ಕ.ರಾ.ರ.ಸಾ.ಸಂ ಸೇರಿದಂತೆ ಹಲವಾರು ಸಂಸ್ತೆಗಳು ಕನ್ನಡದಲ್ಲಿ ಆಡಳಿತವನ್ನ ನಡೆಸದೇ ತಮ್ಮ ಸೇವೆಗಳನ್ನ ಕನ್ನಡಿಗರಿಂದ ದೂರಕ್ಕೆ ಕೊಂಡೊಯ್ಯುತ್ತಿರುವುದು ವಿಪರ್ಯಾಸವೇ ಸರಿ!  ಕ.ರಾ.ರ.ಸಾ.ಸಂ ಯವರಿಗೆ ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಕರ್ನಾಟಕದ ಬಗ್ಗೆ ಕಳಕಳಿಯಿದ್ದಿದ್ದೇ ಆಗಿದ್ದಲ್ಲಿ ತಮ್ಮ ಗ್ರಾಹಕ ಸೇವೆಯಲ್ಲಿ ಬಳಕೆಯಾಗಿರುವ ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ಕನ್ನಡಿಗರಿಗೆ ತಮ್ಮ ಸೇವೆಯನ್ನ ಪರಿಣಾಮಕಾರಿಯಾಗಿ ತಲುಪಿಸಲು ಪ್ರಯತ್ನ ನಡೆಸುತ್ತಿದ್ದರು. ಆದರೆ ಕ.ರಾ.ರ.ಸಾ.ಸಂ ವರ್ಶಕ್ಕೊಮ್ಮೆ ಒಬ್ಬ ಕನ್ನಡದ ಸಾದಕರಿಗೆ ನ್ರುಪತುಂಗ ಪ್ರಶಸ್ತಿ ನೀಡುವುದೇ ಕನ್ನಡ ಕೆಲಸವೆಂದು ತಿಳಿದಿದಿಯೇನೋ(?). ವರ್ಶಕ್ಕೊಮ್ಮೆ ಪ್ರಶಸ್ತಿ ನೀಡಿ ಪ್ರತಿದಿನ ಕನ್ನಡಿಗರಿಂದ ತನ್ನ ಸೇವೆಗಳನ್ನ ದೂರಕ್ಕೆ ಕೊಂಡೊಯ್ಯುತ್ತಿರೋದು ನೋಡಿದ್ರೆ ಆ ಪ್ರಶಸ್ತಿ ನೀಡೋದಕ್ಕೆ ಯಾವುದೇ ಅರ್ತ ಇರೋಲ್ಲ ಅನ್ನಿಸುತ್ತೆ.

ತಂತ್ರಜ್ನಾನ ಬಳಕೆಯಿಂದ ನಿಜಕ್ಕು ಕನ್ನಡದಲ್ಲಿ ಸೇವೆಯನ್ನ ಸುಲಬವಾಗಿ ನೀಡಬಹುದು ಇದರಿಂದ ಜನರಿಗೆ ತಮ್ಮ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾದ್ಯ ಅನ್ನೊದನ್ನ  ಕ.ರಾ.ರ.ಸಾ.ಸಂ ಯಂತಹ ಸರಕಾರಿ ಸಂಸ್ತೆಗಳು ತಿಳಿದುಕೊಳ್ಳೋದು ಯಾವಾಗ?

ಕೊನೆಯದಾಗಿ: “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ” ಎಂಬ ವಿಶಯವಾಗಿ ನನ್ನ ಸ್ನೇಹಿತ ಚೇತನ್ ಇದೇ ನುಡಿಹಬ್ಬದಲ್ಲಿ “ಆಧುನಿಕ ಜಗತ್ತು ಮತ್ತು ಕನ್ನಡ”( ೧೦ನೇ ಡಿಸೆಂಬರ್ ಸಂಜೆ ೪.೩೦ ಕ್ಕೆ)  ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ. ಇದರಲ್ಲಿ  ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ತಂತ್ರಜ್ಞಾನ ಪಾತ್ರವೇನು? ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಇದರಿಂದ ನಮ್ಮ ಸಮಾಜದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಮಾತನಾಡಲಿದ್ದಾರೆ. ಇದೇ ವಿಚಾರ ಸಂಕಿರಣದಲ್ಲಿ ಗೆಳೆಯರಾದ ಓಂಶಿವಪ್ರಕಾಶ್ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಇಂದು - ಮುಂದು ಅನ್ನೋ ವಿಷಯದ ಕುರಿತು ಮಾತನಾಡಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ