ಬುಧವಾರ, ಫೆಬ್ರವರಿ 29, 2012

ಸರಕಾರದ ಮಿಂಬಲೆಗಳ ಮೇಲೆ ಕನ್ನಡದ ತಂಗಾಳಿ ಬೀಸಲಿ

ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳು ವಾರ್ತಾ ಇಲಾಕೆಗೆ ಸೇರಿದ(http://karnatakavarthe.org/) ಮಿಂಬಲೆಯನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಎಲ್ಲಾ ಇಲಾಕೆಯ ಮಿಂಬಲೆಗಳನ್ನು ೧೫ ದಿನದೊಳಗೆ, ಎಲ್ಲಾ  ಮಾಹಿತಿಯೂ ಹಾಕಿ ಇವತ್ತಿನದಾಗಿಸಲು ಗಡುವು ನೀಡಿದ್ದಾರೆ. ಈ ಗಡುವಿನಿಂದ ಹಲವಾರು ಇಲಾಕೆಯ ಸತ್ತಂತಿರುವ ಮಿಂಬಲೆಗಳಿಗೆ ಜೀವ ಬಂದರೆ ನಿಜಕ್ಕು ನಾಗರೀಕರಿಗೆ ಸರಕಾರದ ಇಲಾಕೆಗಳ ಕೆಲಸಗಳ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತೆ.ಮುಕ್ಯ ಮಂತ್ರಿಗಳು ತಂತ್ರಗ್ನಾನದ ಬಳಕೆಯನ್ನು ಮುಕ್ಯವೆಂದು ಪರಿಗಣಿಸಿ ಈ ರೀತಿಯ ಗಡುವು ನೀಡಿರುವುದು ಮೆಚ್ಚುವಂತಹದ್ದ್ದು.


ಆದರೆ ಕರ್ನಾಟಕ ಸರಕಾರದ ಆಡಳಿತ ಬಾಶೆ ಕನ್ನಡವಾದರೂ ಮತ್ತು  ಮಿಂಬಲೆಯಲ್ಲಿ ಕನ್ನಡದ ಬಳಕೆ ಸುಲಬವಾಗುವಶ್ಟು  ತಂತ್ರಗ್ನಾನ ಬೆಳೆದಿದ್ದರೂ ಇಂದಿಗೂ ಸರಿ ಸುಮಾರು ಎಲ್ಲಾ ಸರಕಾರಿ ಇಲಾಕೆಯ ಮಿಂಬಲೆಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿ ಆಗಿಲ್ಲ. ಇದೇ ರೀತಿಯಲ್ಲಿ ಮತ್ತೆ ವಾರ್ತಾ ಇಲಾಕೆಯ ಮಿಂಬಲೆಯಲ್ಲೂ ಆಗಿದೆ. ಕೆಲವು ಇಲಾಕೆಗಳ ಮಿಂಬಲೆಯಂತೆಯೇ, ವಾರ್ತಾ ಇಲಾಕೆಯ ಹೊಸ ಮಿಂಬಲೆಯಲ್ಲಿ ಕನ್ನಡದ ಆಯ್ಕೆ ಇದ್ದರೂ  ಮುಕ್ಯವಾದ ಮಾಹಿತಿಯುಳ್ಳ ಪುಟಗಳಲ್ಲೇ ಕನ್ನಡ ಇಲ್ಲವಾಗಿದೆ. ಇದೆಲ್ಲಕ್ಕೂ ಮುಕ್ಯವಾಗಿ ಆಡಳಿತದಲ್ಲಿ ಕನ್ನಡ ನಿಯಮಮಾಡಿರುವ ಸರಕಾರದ ಮಿಂಬಲೆಯಲ್ಲಿ (http://www.karnataka.gov.in/)ಕನ್ನಡ ಮೊದಲಬಾಶೆಯಾಗಿಲ್ಲದಿರುವುದು ದುರದ್ರುಶ್ಟಕರ! ಇವೆಲ್ಲವನ್ನು ನೊಡಿದರೆ ಸರಕಾರ ಈ ನಾಡಿನ  ಜನರಿಗಾಗಿ ಮಿಂಬಲೆಗಳನ್ನು ನಿರ್ಮಿಸುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.


ತಂತ್ರಗ್ನಾನ ಮತ್ತು ತಂತ್ರಗ್ನಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಿದರೆ ಆಡಳಿತನ್ನು  ಪರಿಣಾಮಕಾರಿಯಾಗಿಸಬಹುದು. ಕರ್ನಾಟಕ ಸರಕಾರದ ಮಿಂಬಲೆಯ ಪಲಾನುಬಾವಿಗಳು ಹೆಚ್ಚು ಜನ ಕನ್ನಡಿಗರೇ ಹೊರೆತು ಬೇರೆಯವರಲ್ಲ.  ಸರಕಾರ ಇಲಾಕೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲು ಕನ್ನಡ ಬಾಶೆಯ ಬಳಕೆ ಅತ್ಯವಶ್ಯಕ ಎನ್ನುವುದನ್ನು ತಿಳಿಯಬೇಕು, ಅಲ್ಲೊಂದು ಇಲ್ಲೊಂದು ಪುಟಗಳಲ್ಲಿ  ಕನ್ನಡದ ಬಳಕೆ ಮಾಡುವುದರ ಬದಲು ಎಲ್ಲಾ ಮಾಹಿತಿಯೂ ಕನ್ನಡದಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಈಗಿನ ಮಿಂಬಲೆ ಗಳಲ್ಲಿ ಇಂಗ್ಲೀಶ್ ಮೊದಲ ಬಾಶೆಯಾಗಿದ್ದು, ಇದು ಬದಲಾಗಿ ರಾಜ್ಯ ಸರಕಾರದ ಎಲ್ಲಾ ಮಿಂಬಲೆ ಗಳಲ್ಲೂ ಕನ್ನಡವೇ ಮೊದಲ ಬಾಶೆಯನ್ನಾಗಿಸುವುದರ ಮೂಲಕ ಹೆಚ್ಚು ಜನರನ್ನು ತಲುಪಲು ಸಾದ್ಯ. ಮತ್ತು ಆಡಳಿತದಲ್ಲಿ ಪಾರಸರ್ಶಕತೆಯನ್ನು ತರಲು ಸಾದ್ಯ.

ಮಂಗಳವಾರ, ಫೆಬ್ರವರಿ 28, 2012

BMTCಯ ಅದಿಕಾರಿಗಳ ಕನ್ನಡದ ಬಗೆಗಿನ ಕೀಳರಿಮೆ ಕೊನೆಗಾಣಲಿ

ಕಳೆದ ವಾರ ನನ್ನ ಸ್ನೇಹಿತರೊಬ್ಬರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆಗೆ ಪತ್ರ ಬರೆದು ಬಸ್ಸಿನಲ್ಲಿ ಕನ್ನಡದಲ್ಲಿ  ದಾರಿಸೂಚಿಯನ್ನು ಬಳಸಲು ಆಗ್ರಹಿಸಿದ್ದರು ಅದಕ್ಕೆ ಪ್ರತಿಕ್ರಿಯೆಯಾಗಿ ಸಂಸ್ತೆಯವರು ಬರೆದಿರುವ ಉತ್ತರ ಕೆಳಗಿನಂತಿದೆ.
Manager (O) <ctmobmtc@gmail.com> wrote:

Dear Harsha
Your suggestion has been taken well. The information displayed in the signage board (except in BIAL services)  is in  Kannada and in English  language,  to facilitate the kanndigas and also non kannadiga commuters. If any left over will be corrected.

Looking forward for your continued patronage

With regards
CTM(O),
BMTC

ಈ ಪತ್ರದ ಸಾರಾಂಶ ಏನಂದ್ರೆ  ಬೆಂಗಳೂರಿನ ಒಳಗೆ ಸಂಚರಿಸುವ ಮಾರ್ಗದ ದಾರಿಸೂಚಿಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಳಸ್ತಾರಂತೆ ಆದ್ರೆ ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸಿನಲ್ಲಿ ಕನ್ನಡ ಬಳಸಲ್ವಂತೆ!



ಬೆಂಗಳೂರಿನಲ್ಲಿ ಹತ್ತಾರು ವರ್ಶಗಳಿಂದ ನೆಲೆಸಿರುವ ಕನ್ನಡಿಗರು ಕನ್ನಡ ಕಲಿತಿರ್ತಾರೆ ಅತವಾ ಕನ್ನಡ ಕಲಿತಾರೆ ಇದಕ್ಕಾಗಿ ಬೆಂಗಳೂರಿನ ಒಳಗೆ ಸಂಚರಿಸುವ ಬಸ್ಸುಗಳಲ್ಲಿ ಕನ್ನಡವೇ ಸಾಕಾಗುತ್ತಿತ್ತು ಇಲ್ಲಿ ಇಂಗ್ಲೀಶ್ ನ ಬಳಕೆ ಬೇಕಾಗೇ ಇರಲಿಲ್ಲ.ಇನ್ನು ವಿಮಾನ ನಿಲ್ದಾಣದ ವಿಶಯಕ್ಕೆ ಬಂದ್ರೆ ಪ್ರವಾಸಿಗರ ಅನುಕೂಲಕ್ಕೆ ಅಂತ  ಇಂಗ್ಲೀಶ್ ಅನ್ನು ಬಳಸಬಹುದಿತ್ತೇ ಹೊರೆತು ಕನ್ನಡ ಬಳಸೋದೇ ಇಲ್ಲ ಅನ್ನೊದು ಇವರಿಗೆ ಕನ್ನಡದ ಬಗೆಗಿನ ಕೀಳರಿಮೆಯನ್ನು ಎತ್ತಿ ತೋರಿಸುತ್ತಿದೆ. ಜಗತ್ತಿನಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ನಗರಗಳಾದ ಪ್ಯಾರಿಸ್ ನಿಂದ ಹಿಡಿದು ಟೋಕಿಯೋ ವರೆಗೆ ಅತವಾ ನಮ್ಮ ದೇಶದ ಚನೈ ಮುಂಬೈ ಎಲ್ಲೇ‌ಹೋದ್ರು ನಗರದ ವಿವಿದ ಬಡಾವಣೆಗೆ ಸಂಚರಿಸುವ ಬಸ್ಸುಗಳಲ್ಲಿ ಸ್ತಳೀಯ ಬಾಶೆಯಿರುತ್ತೆ ಹೊರೆತು ಇಂಗ್ಲೀಶ್ ಬಾಶೆಯ ಬಳಕೆ ಇರುವುದಿಲ್ಲ ಜೊತೆಗೆ ವಿಮಾನ ನಿಲ್ದಾಣ ಅತವಾ ಹೆಚ್ಚು ಪ್ರವಾಸಿಗರು ಓಡಾಡುವ   ಬಸ್ಸುಗಳಲ್ಲಿ ಪ್ರವಾಸಿಗರಿಗೆ ಸಹಾಯವಾಗಲಿ ಅಂತ ಇಂಗ್ಲೀಶ್ ಬಳಸಿರುತ್ತಾರೆ ಹೊರೆತು ತಮ್ಮ ಬಾಶೆಯನ್ನು ಬಿಟ್ಟು ಇಂಗ್ಲೀಶ್ ಬಳಕೆ ಮಾಡಿರಲ್ಲ.

ಇವರ ಉತ್ತರ ನೊಡಿದ್ರೆ ಇವರಿಗೆ ಕನ್ನಡ ಬಳಕೆ ಮಾಡಬಾರದು ಎನ್ನುವ ಮನಸ್ತಿತಿಗಿಂತ ಕನ್ನಡದ ಬಗ್ಗೆ  ಕೀಳರಿಮೆಯ ಮನಸ್ತಿತಿ ಎದ್ದು ಕಾಣಿಸುತ್ತೆ. ಇದೇ ಕೀಳರಿಮೆಯಿಂದಲೇ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸುಗಳಲ್ಲಿ ಕನ್ನಡದ ಹಾಡುಗಳನ್ನು ಹಾಕ್ತಿಲ್ಲ, ವಿಮಾನ ನಿಲ್ದಾಣದ ಬಸ್ಸಿನ ದಾರಿಸೂಚಿ ಕನ್ನಡ ಬಳಸುತ್ತಿಲ್ಲ. ಇವರು ಕನ್ನಡ ಯಾವುದುಕ್ಕು ಅಹ೯ವಲ್ಲದ್ದು ವಿಮಾನ ಏರೋಕ್ಕೆ ಇಂಗ್ಲೀಶ್ ಕಲಿತಿರಬೇಕು ಅಂತ ತಿಳಿದಿದ್ದಾರೆನೋ ಪಾಪ! ಇನ್ನು ೪ ರಿಂದ ೫% ಕನ್ನಡ ಬಾರದವರಿಗೆ ಅನುಕೂಲ ಮಾಡಿಕೊಡುವ ಬರದಲ್ಲಿ ೯೫% ಕನ್ನಡಿಗರಿಗೆ ಅನ್ಯಾಯ ಆಗ್ತಿದೆ ಅಂತನೂ ಗೊತ್ತುಮಾಡಿಕೊಳ್ಳೋಕ್ಕೆ ಆಗದ ಪರಿಸ್ತಿತಿಯಲ್ಲಿ ಅದಿಕಾರಿಗಳು ಇದ್ದಹಾಗಿದೆ. ಇವರ ಕನ್ನಡದ ಬಗೆಗಿನ ಕೀಳರಿಮೆಯನ್ನು ಹೋಗಲಾಡಿಸಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಮಾಡುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ.

ಮಂಗಳವಾರ, ಫೆಬ್ರವರಿ 21, 2012

ಈ ಬಸ್ಸು ಎಲ್ಲಿಗೆ ಹೋಗುತ್ತದೆ?

ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಸಂಸ್ತೆಯು ತನ್ನ ಸಂಸ್ತೆಯ ವೋಲ್ವೋ ಬಸ್ಸೇ ಅಲ್ಲದೇ ಎಲ್ಲಾ ತರದ  ಬಸ್ಸುಗಳಿಗೂ ಎಲೆಟ್ರಾನಿಕ್ ದಾರಿಸೂಚಿಗಳನ್ನು  ಹಾಕುತ್ತಿದೆ.   ಸಂಸ್ತೆಯು ಹಲವಾರು ರೀತಿಯಲ್ಲಿ ತಂತ್ರಗ್ನಾನವನ್ನು ಬಳಕೆ ಮಾಡುತ್ತಿರುವುದು ನಿಜಕ್ಕೂ ಸಂತೋಶದ ವಿಶಯವೇ.

ಆದರೆ ಈ ಸಂತೋಶದ ವಿಶಯ ಹಾಗಿರಲಿ,  ತಾವೋಂದು ವಿಶಯವನ್ನು ಗಮನಿಸಿ ನೋಡಿ. ಈ ದಾರಿಸೂಚಿಗಳಲ್ಲಿ, ಕೆಲವೇ ಕೆಲವೊಮ್ಮೆ ಕನ್ನಡದ ಮಾಹಿತಿ ನೆಪಮಾತ್ರಕ್ಕೆ ಬಂದು ಹೋಗುತ್ತದೆ.  ಕೆಲವು ಕಡೆಗಳಲ್ಲಿ ಕನ್ನಡ ಇಲ್ಲದಿರುವುದು ಸಹ ಕಾಣಸಿಗುತ್ತದೆ. ಈ ಎಲೆಟ್ರಾನಿಕ್ ದಾರಿ ಸೂಚಿಯಲ್ಲಿ ಕನ್ನಡವನ್ನು ಹೆಸರಿಗೆ ಮಾತ್ರ ಹಾಕಲಾಗಿದ್ದು ಇಂಗ್ಲೀಶ್ ಗೆ ಮೊದಲ ಸ್ತಾನ ನೀಡಲಾಗಿದೆ.

ಸಂಸ್ತೆಯು  ತಂತ್ರಗ್ನಾನದ ಬಳಕೆಯ ಹೆಸರಲ್ಲಿ ಕನ್ನಡದ ಬಳಕೆಯನ್ನು ಕಡಿಮೆ ಮಾಡುತ್ತಿರುವುದು ನಿಜಕ್ಕೂ ಆತಂಕ ಉಂಟುಮಾಡುವ ಹಾಗೆ ಮಾಡಿದೆ. ಬಿಎಂಟಿಸಿ ಸಂಸ್ತೆ ವಲಸಿಗರಿಗಾಗಿಯೇ ತನ್ನ ವ್ಯವಸ್ತೆಗಳನ್ನು ರೂಪಿಸಿ ಕನ್ನಡದ ಜಪ ಮಾಡುವಂತೆ ನಟಿಸುತ್ತಿದೆ.ಮುಂದಿನ ದಿನಗಳಲ್ಲಿ ಎಲ್ಲಾ ಬಸ್ಸುಗಳಿಗೂ ಈ ತಂತ್ರಗ್ನಾನವನ್ನು ಅಳವಡಿಕೆಯಾಗುವುದು ಕಂಡಿತ. ಎಲ್ಲೆಡೆ ಇಂಗ್ಲೀಶ್ ಗೆ ಪ್ರಾಮುಕ್ಯತೆ ನೀಡಿ ಕನ್ನಡವನ್ನು ಕಡೆಗಣಿಸಿದ್ದೇ ಆದಲ್ಲಿ ಕನ್ನಡಿಗರ ಕತೆ ಅದೋಗತಿಯೇ!

ಈಗಲಾದರೂ ಕನ್ನಡಿಗರು ಎಚ್ಚೆತ್ತು ಪ್ರಶ್ನೆಸದಿದ್ದರೆ ಮುಂದೊಂದು ದಿನ ಈ ಬಸ್ಸು  ಯಾವ ಬಡಾವಣೆಗೆ ಹೋಗುತ್ತದೆ ಎನ್ನುವುದನ್ನು ವಲಸಿಗ ಸಹ ಪ್ರಯಾಣಿಕರಿಗೆ ಪ್ರಶ್ನೆ ಕೇಳಬೇಕಾದ ಪರಿಸ್ತಿತಿ ಬಂದರೆ ಕನ್ನಡಿಗರು ಆಶ್ಚರ್ಯ ಪಡಬೇಕಾಗಿಲ್ಲ. 

ಗುರುವಾರ, ಡಿಸೆಂಬರ್ 15, 2011

ಕರವೇ ಹೋರಾಟಕ್ಕೆ ಮೆಟ್ರೋನಿಂದ ಉತ್ತರ

ದಿನಾಂಕ ೨.೧೨.೨೦೧೧ ರಂದು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಮೆಟ್ರೋನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮತ್ತು ಬಾಶಾ ನೀತಿಯಲ್ಲಿ ಆಗಿರುವ ಅನ್ಯಾಯ ನೀಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನ ನೀಡಿದ್ದರು. ಇದಕ್ಕೆ ಉತ್ತರವಾಗಿ ಮೇಟ್ರೋನಿಂದ ಕರವೇಗೆ ಬಂದಿರುವ ಉತ್ತ್ತರದ ಪ್ರತಿಯನ್ನ ಕರವೇ ವೆಬ್ ಸೈಟ್ (http://karave.blogspot.com/2011/12/krv-horatakke-metrodinda-uttara.html)ನಲ್ಲಿ ಹಾಕಲಾಗಿದೆ.

ಈ ಉತ್ತರದ ಪ್ರಕಾರ ಮೆಟ್ರೋ ನಲ್ಲಿ ಉದ್ಯೋಗಕ್ಕೆ ಕನ್ನಡ ಬಲ್ಲವರನ್ನ ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿರುವುದಾಗಿಯೂ ಮತ್ತು ಇದರ ಜೊತೆಗೆ  ಬದ್ರತಾ ಸೇವೆ ಮತ್ತು ಸ್ವಚ್ಚತಾ ಕೆಲಸಗಳನ್ನ ಹೊರಗುತ್ತಿಗೆ ನೀಡಲಾಗಿದ್ದು ಅಂತಹಾ ಹೊರಗುತ್ತಿಗೆದಾರ  ಏಜೆನ್ಸಿಗಳು ಕೂಡ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು
ಬಲ್ಲವರನ್ನ ಮಾತ್ರ ನೇಮಿಸಿಕೊಳ್ಳಬೇಕೆಂಬ ಶರತ್ತನ್ನ ವಿದಿಸಿ ಕರಾರನ್ನ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು ನಿಜವಾಗಿಯೂ ನಮ್ಮ ಮೆಟ್ರೋನ ಮತ್ತು ಹೊರಗುತ್ತಿಗೆ ಉದ್ಯೋಗಗಳು ಕನ್ನಡ ಬಲ್ಲವರಿಗೆ ಮಾತ್ರ  ಎಂಬ  ಆದೇಶ ಕಟ್ಟು ನಿಟ್ಟಾಗಿ ಜಾರಿಯಾಗುವಂತೆ ನೊಡಿಕೊಳ್ಳಬೇಕಾಗಿದೆ. ಇದೆಲ್ಲವುದರ ಜೊತೆಗೆ ಮುಕ್ಯವಾಗಿ  ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಬಾಶೆ ಮತ್ತು ತನ್ನ ಎಲ್ಲಾ ಕಚೇರಿ ವ್ಯವಹಾರಗಳನ್ನ ಕನ್ನಡ ಬಾಶೆಯಲ್ಲೆ ವ್ಯವಹರಿಸುವುದು ನಮ್ಮ ಮೆಟ್ರೋ ನ ಜವಾಬ್ದಾರಿಯೆಂದು ಮತ್ತು ಕರ್ನಾಟಕ ಸರಕಾರದ ನೀತಿ ನಿಯಮಗಳಿಗೆ ತಮ್ಮ ಸಂಸ್ತೆಯು ಶ್ರದ್ದೆಯ ಸಹಮತ ಸೂಚಿಸುತ್ತದೆ ಎಂದೂ ಸಹ ಹೇಳಿರುತ್ತಾರೆ. ಇದೇ ನಿಟ್ಟಿನಲ್ಲಿ ನಮ್ಮ ಮೆಟ್ರೋ ತನ್ನ ಅಂತರ್ಜಾಲದಲ್ಲಿ ಕನ್ನಡಕ್ಕೆ ಆದ್ಯತೆಯನ್ನ ನೀಡಿ ಸಾರ್ವಜನಿಕರಿಗೆ ಕನ್ನಡ  ಮಾಹಿತಿಯನ್ನ ತಿಳಿಸುವಂತೆ
ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದೂ ಸಹ ತಿಳಿಸಿದ್ದಾರೆ, ಈ ಸುತ್ತೋಲೆ ಜಾರಿರೂಪಕ್ಕೆ ಬಂದರೆ ಮಾತ್ರ ನಿಜಕ್ಕು ಕನ್ನಡಿಗರಿಗೆ ಉಪಯೋಗವಾಗುತ್ತದೆ.

ಇದರ ಜೊತೆಗೆ ಹಿಂದಿ ಬಾಶೆಯ ಬಳಕೆಯ ಬಗ್ಗೆ ನಮ್ಮ ಮೆಟ್ರೋನ ಉತ್ತರ ಮಾತ್ರ ಸಮಂಜಸವಾಗಿಲ್ಲವೆನ್ನಿಸುತ್ತದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದ ಸಂಸ್ತೆಯೆಂದ ಮಾತ್ರಕ್ಕೆ ಹಿಂದಿಯನ್ನ ಬಳಸಿದ್ದಿವಿ  ಎನ್ನೊವುದು ಸರಿಯಲ್ಲದ ಕ್ರಮವಾಗಿದೆ.

ಈ ಆದೇಶಗಳ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಮೆಟ್ರೋ ಹೇಳಿರುವುದನ್ನ ನಾನೆಂದೂ ಕಂಡಿಲ್ಲ ಮತ್ತು ಕರವೇ ಹೋರಾಟದ ಪಲವಾಗಿ ನೀಡಿರುವ ಉತ್ತರ ನಿಜಕ್ಕೂ ಕರವೇ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ಉತ್ತರದ ಆದಾರದ ಮೇಲೆ  ಉದ್ಯೋಗದ ವಿಶಯದಲ್ಲಿ ಮತ್ತು ತನ್ನ ಆಡಳಿತದ ವಿಶಯದಲ್ಲಿ ಹೊರಡಿಸಿರುವ ಆದೇಶಗಳ ಅನುಶ್ಟಾನ ಆಗುವ ವರೆಗೆ ಮೆಟ್ರೋ ಮೇಲೆ ಒತ್ತಡ ಹಾಕುವ ಕೆಲಸದಲ್ಲಿ ಕರವೇ ಜೊತೆಗೆ ಕೈಜೋಡಿಸಬೇಕಾದ್ದು ನಮ್ಮ ಕರ್ತವ್ಯವೆಂದು ಬಾವಿಸುತ್ತೇನೆ. ಇದೆಲ್ಲವುದರ ಜೊತೆಗೆ ಅನಗತ್ಯ ಹಿಂದಿ ಬಳಕೆಯನ್ನ ಸಹ ಕೈಬಿಡುವಂತೆ ಸಹಾ ಒತ್ತಡ
ಹಾಕಬೇಕಾಗಿದೆ.

ಗುರುವಾರ, ಡಿಸೆಂಬರ್ 8, 2011

ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?


೭೮ನೇ ಕನ್ನಡ ನುಡಿಹಬ್ಬವು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇದೇ ತಿಂಗಳ ೯ನೇ ತಾರೀಕಿನಂದು ಶುರುವಾಗ್ತಿದೆ. ಪ್ರತಿಸರಿಯಂತೆ ಈ ಸರಿಯೂ ಅನೇಕ ಗೋಶ್ಟಿಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟಗಳನ್ನ ಏರ್ಪಡಿಸಿದ್ದಾರೆ ಇದೆಲ್ಲವುದರ ಜೊತೆಗೆ ಇಲ್ಲಿ  ನಾಡಿನ ಸಾಹಿತ್ಯ ರಂಗದ  ದಿಗ್ಗಜರು ಬಂದು ಸೇರುತ್ತಾರೆ.

ನುಡಿಹಬ್ಬದ ಕುಶಿಯಲ್ಲಿ  ಬಾಗಿಯಾಗೋಕ್ಕೆ ನಾನು ಸಹ ಇಂದು ಗಂಗಾವತಿಗೆ ಹೋಗುವವನಿದ್ದೇನೆ. ಇದಕ್ಕೆಂದು ನಮ್ಮ ಕ.ರಾ.ರ.ಸಾ.ಸಂ ಯ ಬಸ್ಸಿನಲ್ಲಿ ಒಂದು ಟಿಕೆಟ್ ಅನ್ನು ಕಾಯ್ದಿರಿಸಿದ್ದೇನೆ.  ಆದರೆ ಈ ಟಿಕೆಟ್ ನೋಡಿದ ತಕ್ಯಣ ನನ್ನ ಮನಸ್ಸಿನಲ್ಲಿ ಬಂದಿದ್ದು " ಇದೇನಪ್ಪ !!!! ಇಂಗ್ಲೀಶ್ ಕಲಿತು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆ?" ಎಂಬುದು, ಹೀಗೆ ನನ್ನ ಮನಸ್ಸಿನಲ್ಲಿ ಬರೋಕ್ಕೆ ಕಾರಣವಿದೆ. ಅದೇನಂದ್ರೆ ತಂತ್ರಜ್ನಾನ ಇಶ್ಟು ಮುಂದುವರೆದರೂ ಸಹ ಇಂದಿಗೂ ನಮ್ಮ  ಕ.ರ.ಸಾ.ಸಂ ಯವರು ಕನ್ನಡದಲ್ಲಿ ಟಿಕೆಟ್ ಮುದ್ರಿಸಿಕೊಡದಿರೋದು.  ಕ.ರಾ.ರ.ಸಾ.ಸಂ ಯ ಸೀಟು ಕಾಯ್ದಿರಿಸುವ ಟಿಕೆಟ್ ನಲ್ಲಿ ಕಾಯ್ದಿರಿಸುವಿಕೆಗೆ ಸಂಬಂದಿಸಿದ ಎಲ್ಲಾ ಮಾಹಿತಿಗಳು ಇಂಗ್ಲೀಶ್ ನಲ್ಲಿ ಇವೆ. ಇಂಗ್ಲೀಶ್ ಸರಿಯಾಗಿ ಬಲ್ಲವರು ತಮಗೆ ನೀಡಿದ ಟಿಕೆಟ್ ಸರಿಯಿದೆಯೇ ಇಲ್ಲವೇ ಎನ್ನೊದನ್ನ ತಿಳಿಯೋಕ್ಕೆ ಸಾದ್ಯ, ಇಂಗ್ಲೀಶ್ ಗೊತ್ತಿಲ್ಲದವರ ಕತೆ ದೇವರೇ ಬಲ್ಲ. ಗಂಗಾವತಿಯ ನುಡಿಹಬ್ಬಕ್ಕೆ ಬರಬೇಕಾದವರು ಅಕಸ್ಮಾತ್ ತಪ್ಪಾಗಿ ಬೇರೆಯಾವುದೋ ಟಿಕೆಟ್ ಪಡೆದು, ಸರಿಯಿದೆಯೇ ಎಂದು ನೋಡೊಕ್ಕೆ ತಿಳಿಯದೇ ಇನ್ನೆಲ್ಲೋ ಹೋಗುವ ಪರಿಸ್ತಿತಿ ಬಂದ್ರೆ ಅದಕ್ಕೆ ಆಶ್ಚರ್ಯಪಡಬೇಕಾದ್ದಿಲ್ಲ.


ಸರಕಾರ ಪ್ರತಿವರ್ಶ ಕೋಟ್ಯಂತರ ರೂಪಾಯಿ ಕರ್ಚು ಮಾಡಿ ಸಾಹಿತ್ಯ ಸಮ್ಮೇಳನದ ಜೊತೆಗೆ ಹಲವಾರು ತರದ ಕನ್ನಡ ಹಬ್ಬಗಳನ್ನ ಆಚರಿಸುತ್ತದೆ. ಆದರೆ ಅದೇ ಸರಕಾರದ  ಕ.ರಾ.ರ.ಸಾ.ಸಂ ಸೇರಿದಂತೆ ಹಲವಾರು ಸಂಸ್ತೆಗಳು ಕನ್ನಡದಲ್ಲಿ ಆಡಳಿತವನ್ನ ನಡೆಸದೇ ತಮ್ಮ ಸೇವೆಗಳನ್ನ ಕನ್ನಡಿಗರಿಂದ ದೂರಕ್ಕೆ ಕೊಂಡೊಯ್ಯುತ್ತಿರುವುದು ವಿಪರ್ಯಾಸವೇ ಸರಿ!  ಕ.ರಾ.ರ.ಸಾ.ಸಂ ಯವರಿಗೆ ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಕರ್ನಾಟಕದ ಬಗ್ಗೆ ಕಳಕಳಿಯಿದ್ದಿದ್ದೇ ಆಗಿದ್ದಲ್ಲಿ ತಮ್ಮ ಗ್ರಾಹಕ ಸೇವೆಯಲ್ಲಿ ಬಳಕೆಯಾಗಿರುವ ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ಕನ್ನಡಿಗರಿಗೆ ತಮ್ಮ ಸೇವೆಯನ್ನ ಪರಿಣಾಮಕಾರಿಯಾಗಿ ತಲುಪಿಸಲು ಪ್ರಯತ್ನ ನಡೆಸುತ್ತಿದ್ದರು. ಆದರೆ ಕ.ರಾ.ರ.ಸಾ.ಸಂ ವರ್ಶಕ್ಕೊಮ್ಮೆ ಒಬ್ಬ ಕನ್ನಡದ ಸಾದಕರಿಗೆ ನ್ರುಪತುಂಗ ಪ್ರಶಸ್ತಿ ನೀಡುವುದೇ ಕನ್ನಡ ಕೆಲಸವೆಂದು ತಿಳಿದಿದಿಯೇನೋ(?). ವರ್ಶಕ್ಕೊಮ್ಮೆ ಪ್ರಶಸ್ತಿ ನೀಡಿ ಪ್ರತಿದಿನ ಕನ್ನಡಿಗರಿಂದ ತನ್ನ ಸೇವೆಗಳನ್ನ ದೂರಕ್ಕೆ ಕೊಂಡೊಯ್ಯುತ್ತಿರೋದು ನೋಡಿದ್ರೆ ಆ ಪ್ರಶಸ್ತಿ ನೀಡೋದಕ್ಕೆ ಯಾವುದೇ ಅರ್ತ ಇರೋಲ್ಲ ಅನ್ನಿಸುತ್ತೆ.

ತಂತ್ರಜ್ನಾನ ಬಳಕೆಯಿಂದ ನಿಜಕ್ಕು ಕನ್ನಡದಲ್ಲಿ ಸೇವೆಯನ್ನ ಸುಲಬವಾಗಿ ನೀಡಬಹುದು ಇದರಿಂದ ಜನರಿಗೆ ತಮ್ಮ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾದ್ಯ ಅನ್ನೊದನ್ನ  ಕ.ರಾ.ರ.ಸಾ.ಸಂ ಯಂತಹ ಸರಕಾರಿ ಸಂಸ್ತೆಗಳು ತಿಳಿದುಕೊಳ್ಳೋದು ಯಾವಾಗ?

ಕೊನೆಯದಾಗಿ: “ಪರಿಣಾಮಕಾರಿ ಆಡಳಿತಕ್ಕಾಗಿ ಕನ್ನಡದಲ್ಲಿ ತಂತ್ರಜ್ಞಾನ” ಎಂಬ ವಿಶಯವಾಗಿ ನನ್ನ ಸ್ನೇಹಿತ ಚೇತನ್ ಇದೇ ನುಡಿಹಬ್ಬದಲ್ಲಿ “ಆಧುನಿಕ ಜಗತ್ತು ಮತ್ತು ಕನ್ನಡ”( ೧೦ನೇ ಡಿಸೆಂಬರ್ ಸಂಜೆ ೪.೩೦ ಕ್ಕೆ)  ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ. ಇದರಲ್ಲಿ  ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ತಂತ್ರಜ್ಞಾನ ಪಾತ್ರವೇನು? ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಭಾಷೆಯ ಪ್ರಾಮುಖ್ಯತೆ ಹಾಗೂ ಇದರಿಂದ ನಮ್ಮ ಸಮಾಜದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಮಾತನಾಡಲಿದ್ದಾರೆ. ಇದೇ ವಿಚಾರ ಸಂಕಿರಣದಲ್ಲಿ ಗೆಳೆಯರಾದ ಓಂಶಿವಪ್ರಕಾಶ್ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಇಂದು - ಮುಂದು ಅನ್ನೋ ವಿಷಯದ ಕುರಿತು ಮಾತನಾಡಲಿದ್ದಾರೆ.

ಭಾನುವಾರ, ನವೆಂಬರ್ 20, 2011

ಕನ್ನಡ ನಾಡಿನಲ್ಲಿ ಪಡಿತರ ಚೀಟಿ ಪಡೆಯಲು ಇಂಗ್ಲೀಶ್ ಗೊತ್ತಿರಬೇಕೆ?

ಆಡಳಿತದಲ್ಲಿ ತಂತ್ರಜ್ನಾನವನ್ನ ಹೆಚ್ಚು ಹೆಚ್ಚು ಬಳಸಿದಶ್ಟೂ ಆಡಳಿತದಲ್ಲಿ ಪಾರದರ್ಶಕತೆಯನ್ನ ತರಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರಕಾರದ ಅನೇಕ ಇಲಾಕೆಗಳು ತಂತ್ರಜ್ನಾನವನ್ನ ಬಳಸುತ್ತಿವೆಯಾದರೂ, ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯನ್ನ ಮಾಡದೇ, ಆಡಳಿತವನ್ನ ಜನರಿಂದ ದೂರವಾಗುವಂತೆ ಮಾಡುತ್ತಿರುವುದು ಮಾತ್ರ ಸರಿಯಲ್ಲದ್ದು.




ಇದೇ ನಿಟ್ಟಿನಲ್ಲಿ ಕಳೆದ ವಾರ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯವರು ಪಡಿತರ ಚೀಟಿಗಳನ್ನ ಹೊಂದಿರದ ಅಹ೯ರಿಗೆ ಪಡಿತರ ಚೀಟಿಯನ್ನ ಆದಶ್ಟು ಬೇಗನೆ ಸಿಗುವಂತೆ ಮಾಡಲು ಒಂದು ವಿಂಬಲೆಯನ್ನ (http://ahara.kar.nic.in/)ನಿರ್ಮಿಸಿದ್ದಾರೆ. ಜೊತೆಗೆ ಅರ್ಜಿಗಳನ್ನ ಈ ವೆಬ್ ಸೈಟ್ ಮೂಲಕವೇ ಸಲ್ಲಿಸಬೇಕು ಎಂಬ ಮಾಹಿತಿಯುಳ್ಳ ಜಾಹಿರಾತನ್ನ ಹಲವಾರು ಪತ್ರಿಕೆಗಳಲ್ಲಿ ನೀಡಿಲಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಈ ಮಿಂಬಲೆಯ ಬಳಕೆ ಅನಿವಾರ್ಯ!!!! ಆದರೆ.... ಈ ಮಿಂಬಲೆಯಲ್ಲೂ ಸಹ ಕನ್ನಡವನ್ನ ಬಳಕೆ ಮಾಡದೇ, ಆಡಳಿತ ಯಂತ್ರವನ್ನ ಸಾಮಾನ್ಯ ಜನರಿಂದ ದೂರವಾಗುವಂತೆ ಮಾಡಿದೆ. ಈ ಮಿಂಬಲೆಯ ಮೂಲಕ ಸರಕಾರ, ಸಾಮಾನ್ಯ ಜನರು ತಮ್ಮ ಪಡಿತರ ಚೀಟಿಯನ್ನ ಸುಲಬವಾಗಿ ಮತ್ತು ಆದಶ್ಟು ಬೇಗನೆ ಪಡೆಯಲು ಇಂಗ್ಲೀಶ್ ಕಲಿಯಬೇಕಾದ ಅನಿವಾರ್ಯತೆಯನ್ನ ನಿರ್ಮಿಸಲು ಹೊರಟಿದೆ.





ಇಂದು ತಂತ್ರಜ್ನಾನ ಮುಂದುವರೆದಿದ್ದು, ಕನ್ನಡವನ್ನ ಇಂಗ್ಲೀಶ್ ನಶ್ಟೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುವಶ್ಟು ಬೆಳೆದಿದೆ ಮತ್ತು ಬೆಳೆಯುತ್ತಿದೆ. ತಂತ್ರಜ್ನಾನದ ಬಳಕೆಯಶ್ಟೇ, ಆ ತಂತ್ರಜ್ನಾನದಲ್ಲಿ ಬಳಕೆಯಾಗಿರುವ ಬಾಶೆಯೂ ಮುಕ್ಯ. ಜನರ ಬಾಶೆಯಲ್ಲಿ ತಂತ್ರಜ್ನಾನವಿದ್ದಲ್ಲಿ ಮಾತ್ರ ಜನರನ್ನ ತಲುಪಲು ಸಾದ್ಯ. ಇದರಿಂದಲೇ ಇಂದು ಗೂಗಲ್, ಪೇಸ್ ಬುಕ್, ಯಾಹೂ ಸೇರಿದಂತೆ ಅನೇಕ ಕಂಪನಿಗಳೂ ಕನ್ನಡ ಬಳಕೆಗೆ ಪ್ರಾಮುಕ್ಯತೆ ನೀಡುತ್ತಿದೆ, ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ತಮ್ಮ ಸೇವೆಯನ್ನ ಸಾಮಾನ್ಯ ಕನ್ನಡಗರಿಗೆ ತಲುಪುವಂತೆ ಮಾಡುತ್ತಿವೆ.

ಒಂದು ವರ್ಗಕ್ಕೆ ಮಾತ್ರ ಅರ್ತವಾಗೋ ಬಾಶೆಯನ್ನ ತಂತ್ರಜ್ನಾನದಲ್ಲಿ ಬಳಸಿ, ಆಡಳಿತ ಯಂತ್ರವನ್ನ ಬಹುಸಂಕ್ಯಾತ ಜನರಿಂದ ದೂರಮಾಡಲು ಹೊರಟಿರುವುದು ಎಶ್ಟು ಸರಿ? ದೂರದ ದೇಶದ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳಗೆ ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯ ಪ್ರಾಮುಕ್ಯತೆ ಅರ್ತವಾದದ್ದು ನಮ್ಮ ಸರಕಾರಕ್ಕೆ ಏಕೆ ಅರ್ತವಾಗುತ್ತಿಲ್ಲ?

ಶುಕ್ರವಾರ, ನವೆಂಬರ್ 4, 2011

ನಮ್ಮ ತ್ಯಾಗದಿಂದಲೇ ಅಲ್ಲವೇ ನಮ್ಮ ಮೆಟ್ರೋ ಓಡುತ್ತಿರುವುದು?

ನಮ್ಮ ಮೆಟ್ರೋನ ಬಗ್ಗೆ ನವಂಬರ್ 3 ರಂದು ಡೆಕನ್ ಹೆರಾರ್ಡ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿದೆ, ಈ ವರದಿಯ ಪ್ರಕಾರ, ನಮ್ಮ ಮೆಟ್ರೊ, ಬೆಂಗಳೂರು ನಗರ ಪಾಲಿಕೆಯ ಹಲವಾರು ಜಾಗಗಳನ್ನ ಬಿಟ್ಟಿಯಾಗಿ ವಶಪಡಿಸಿಕೊಂಡು ಅಲ್ಲಿ ಕಾಮಗಾರಿಯನ್ನ ನಡೆಸುತ್ತಿದೆ, ಪಾಲಿಕೆಯ ಸುಮಾರು 65 ರಿಂದ 70 ಸಾವಿರ ಅಡಿಗಳಶ್ಟು ಜಾಗ ಮತ್ತು ಅಲ್ಲಿ ಇರುವ ಕಟ್ಟಡ ನಮ್ಮ ಮೆಟ್ರೋ ಪಾಲಾಗಿದೆ. ಈ ಆಸ್ತಿ ನೂರಾರು ಕೋಟಿ ಬೆಲೆಬಾಳುತ್ತದೆ.

ಇವಿಶ್ಟೇ ಅಲ್ಲದೇ ನಮ್ಮ ಮೆಟ್ರೊಗೆಂದು ನಗರದ ಹಲವಾರು ಕಡೆಗಳಲ್ಲಿ ನಮ್ಮ ನಾಡಿನ ಜನರು ಮಾರುಕಟ್ಟೆಯ ದರಕ್ಕಿಂತ ಕಡಿಮೆ ಹಣಕ್ಕೆ ತಮ್ಮ ಜಾಗವನ್ನ ಕೊಟ್ಟಿದ್ದಾರೆ, ಹಲವಾರು ಅಂಗಡಿ ಮುಂಗಟ್ಟುಗಳನ್ನ ನಮ್ಮ ಮೆಟ್ರೋಗೆಂದು ಮುಚ್ಚಿಸಲಾಗಿದೆ. ಬೆಂಗಳೂರಿನಾದ್ಯಂತ ನಡೆಯುತ್ತಿರುವ ಮೇಟ್ರೋ ಕಾಮಗಾರಿಯಿಂದ ಉಂಟಾಗಿರುವ ಟ್ರಾಪಿಕ್ ವೈಪರಿತ್ಯವನ್ನು ದಿನ ನಿತ್ಯ ನಮ್ಮ ಜನ ಅನುಬವಿಸುತ್ತಿದ್ದಾರೆ.. ಇಂತಹ ನಮ್ಮ ನಾಡಿನ ಜನರ ತ್ಯಾಗದಿಂದಲೇ ನಮ್ಮ ಮೆಟ್ರೊ ಬಿಡುಗಡೆಯಾಗಿ ಓಡಾಡಲು ಸಾದ್ಯವಾಗಿರುವುದು ಅಲ್ಲವೇ? ಆದರೆ ಇವ್ಯಾವು ಲೆಕ್ಕಕ್ಕೆ ಇಲ್ಲವೆಂಬಂತೆ ನಮ್ಮ ಮೆಟ್ರೊ ಬೆಂಗಳೂರಿಗರನ್ನ ನಡೆಸಿಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ..

ನಮ್ಮ ನಾಡಿನ ಜನರ ತ್ಯಾಗವಿದ್ದರೂ ಸಹ ನಮ್ಮ ನಾಡಿನ ಬಾಶೆಗೆ ಮನ್ನಣೆ ಸಿಗಬೇಕು, ನಮ್ಮ ನಾಡಿನ ಜನರಿಗೆ ಉದ್ಯೋಗ ಸಿಗಬೇಕು ಎನ್ನುವುದನ್ನ ಬೇಡಿಕೊಳ್ಳುವ ಪರಿಸ್ತಿತಿಯನ್ನ ನಮ್ಮ ಮೆಟ್ರೋ ನ ಅದಿಕಾರಿಗಳು ನಿರ್ಮಿಸಿದ್ದಾರೆ. ನಮ್ಮ ನಾಡಿನ ಜನರ ಬಾಶಾ ಮತ್ತು ಉದ್ಯೋಗದ ಕಳಕಳಿಗೆ, ಮೆಟ್ರೊ ಅದಿಕಾರಿಗಳು ಉದ್ದಟ ತನ ತೋರುತ್ತಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಪರರಾಜ್ಯದಿಂದ ಬಂದು ನಮ್ಮ ಮೆಟ್ರೊನಲ್ಲಿ ಕೆಲಸ ಮಾಡುತ್ತಿರುವರುಗಳು ನಮ್ಮ ನಾಡು ನುಡಿ ವಿರುದ್ದವಾಗಿ ಮಾತನಾಡಿ ನಮ್ಮ ಸ್ವಾಬಿಮಾನವನ್ನ ಕೆರಳಿಸುವಂತೆ ಮಾಡುತ್ತಿದ್ದಾರೆ. ಕನ್ನಡ ವಿರೋದಿ ಮೆಟ್ರೊ ಅದಿಕಾರಿಗಳು ಮತ್ತು ಪರರಾಜ್ಯದಿಂದ ಬಂದು ಕನ್ನಡ ವಿರೋದಿತನ ತೋರುತ್ತಿರುವ ಮೆಟ್ರೊ ಕೆಲಸಗಾರರಿಗೆ ದಿಕ್ಕಾರವಿರಲಿ... ನಮ್ಮ ನಾಡಿನ ಜನರ ತ್ಯಾಗಕ್ಕೆ ತಕ್ಕ ಮಾನ್ಯತೆ ಸಿಗಲಿ