ಸೋಮವಾರ, ಜುಲೈ 4, 2011

ಪೆದ್ದುತನದ ಪರಮಾವದಿ?

ಸುವರ್ಣ ಕನ್ನಡ ಪಿಲಂ ಅವಾರ್ಡ್ ಕಾರ್ಯಕ್ರಮ ಕಳೆದ ವಾರ ಟಿವಿಯಲ್ಲಿ ನೋಡಿದೆ. ನಿಜಕ್ಕು ಅದ್ಬುತವಾದ ಕಾರ್ಯಕ್ರಮ, ಪರಬಾಶೆಗಳಲ್ಲಿ ಮಾತ್ರ ನಡೆಯುತ್ತಿದ್ದ ಅದ್ದೂರಿ ಕಾರ್ಯಕ್ರಮಗಳು, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲು ನಡೆಯಲು ಪ್ರಾರಂಬವಾಗಿರೋದು ನಿಜಕ್ಕೂ ಸಂತೋಶಕರ. ಈ ರೀತಿಯ ಕಾರ್ಯಕ್ರಮಗಳು, ಕನ್ನಡ ಚಿತ್ರರಂಗ, ತಾವೇನು ಯಾರಿಗೂ ಕಡಿಮೆಯಿಲ್ಲ ಅನ್ನೊದನ್ನ ಎತ್ತಿಹಿಡಿದಿದೆ....


ಈ ರೀತಿಯ ಕಾರ್ಯಕ್ರಮಗಳನ್ನ ಬಳಸಿಕೊಂಡು ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳಬಹುದು. ಈ ಕೆಲಸವನ್ನು ಬೇರೆ ಬಾಶೆಯ ಚಿತ್ರರಂಗದರು ತುಂಬ ಚೆನ್ನಾಗಿಯೇ ಮಾಡಿಕೊಂಡು ಬಂದಿದ್ದಾರೆ, ಆದರೆ ದುರದ್ರುಶ್ಟ ಅಂದ್ರೆ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಪರಬಾಶೆಯ ಹಾಡು/ಕುಣಿತದೊಂದಿಗೆ ಪರಬಾಶೆಯ ಚಿತ್ರಗಳಿಗೆ ನಮ್ಮ ರಾಜ್ಯದಲ್ಲಿ ಮಾರುಕಟ್ಟೆ ನಿರ್ಮಿಸೋಕ್ಕೆ ಹೊರಟಿರೋದು ಯಾಕೆ ಅನ್ನೊದು ಗೊತ್ತಾಗುತ್ತಿಲ್ಲ.



ಕಾರ್ಯಕ್ರಮಗಳಲ್ಲಿ- ಕನ್ನಡಿಗರು ಕನ್ನಡ ಸಿನೆಮಾಗಳನ್ನ ನೋಡಿ ಉತ್ತೇಜನ ಕೊಡಬೇಕು....., ಸಿನೆಮಾ ನೋಡೊ ಹವ್ಯಾಸ ಹೊರ ರಾಜ್ಯದಲ್ಲಿರುವಶ್ಟು ನಮ್ಮಲ್ಲಿಲ್ಲ....., ಕನ್ನಡ ಸಿನೆಮಾ ನೋಡೊಕ್ಕೆ ಜನರೇ ಇಲ್ಲ...ಸಿನೆಮಾವನ್ನ ತಿಯೇಟರಿನಲ್ಲೇ ನೋಡಿ....ಹೀಗೆ ಬಾಶಣಗಳನ್ನ ಮಾಡಿ.. ಅದೇ ಕಾರ್ಯಕ್ರಮದಲ್ಲಿ ಪರಬಾಶೆಯ ಹಾಡು/ಕುಣಿತ ನಡೆಸಿದರೆ ಕನ್ನಡಿಗರ ಪಾಡು ಏನಾಗಬಾರದು. ಗಂಟೆಗಟ್ಟಳೆ ಬಾಶಣ ಮಾಡಿ ಚಿತ್ರರಂಗದ ಎಲ್ಲಾ ತೊಡುಕು/ತೊಂದರೆಗಳಿಗೆ ಕನ್ನಡ ಚಿತ್ರ ನೋಡುಗರನ್ನೇ ಹೆಚ್ಚು ಗುರಿಯನ್ನಾಗಿಸಿ, ಪರಬಾಶೆಯ ಚಿತ್ರಗಳಿಗೆ ಕೈಮುಗಿಯುವ ಜನರಿಗೆ ನೈತಿಕತೆಯ ಬಗ್ಗೆ ಅರಿವಿದೆಯೇ?

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದವರೆ ಪರಬಾಶೆಯ ಸಿನೆಮಾಗಳಿಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಇವರಿಗೆ ಕನ್ನಡದ ಬಗ್ಗೆ ಕಳಕಳಿ ಇದೆಯೇ ಎಂಬ ಪ್ರಶ್ನೆ ಹುಟ್ಟೊ ಹಾಗೆ ಮಾಡಿದೆ. ಮತ್ತು ಇದರ ಬಗ್ಗೆ ಚಿತ್ರರಂಗದಲ್ಲಿ ಎಲ್ಲೂ ವಿರೋದ ಕಂಡುಬರದಿರುವುದು ಏಕೆ ಎನ್ನುವುದು ತಿಳಿಯುತ್ತಿಲ್ಲ.


ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ, ಇಲ್ಲ ಅಂದಿದ್ರೆ, ವರ್ಶಕ್ಕೆ ೧೫೦ ಕ್ಕು ಹೆಚ್ಚು ಸಿನೆಮಾಗಳು ಬಿಡುಗಡೆ ಆಗ್ತಾ ಇರಲಿಲ್ಲ, ಮತ್ತು ಮೊನ್ನೆ ನಡೆದಂತಹ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತಲೂ ಇರುತ್ತಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ ಮತ್ತು ಈ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳೊ ಅವಶ್ಯಕತೆ ಕೂಡ ಇದೆ. ಇದನ್ನ ಬಿಟ್ಟು ಹಿಂದಿ ಅತವಾ ಇನ್ಯಾವುದೋ ಹಾಡಿಗೆ ಕುಣಿಯೋದರ ಮೂಲಕ ಕನ್ನಡದ ಚಿತ್ರರಂಗದ ಮಾರುಕಟ್ಟೆಯನ್ನ ಕಡಿಮೆ ಮಾಡಿಕೊಳ್ತಿರೋದು ಪೆದ್ದುತನದ ಪರಮಾವದಿ ಅಲ್ವ?

ನಿಮಗೂ ಕನ್ನಡ ಕಾರ್ಯಕ್ರಮದಲ್ಲಿ ಪರಬಾಶೆಯ ಕುಣಿತ ಏಕೆ ಅನ್ನೊ ಪ್ರಶ್ನೆ ಇದ್ರೆ,
ಚಿತ್ರರಂಗದ ಅನೇಕರು ಪೇಸ್ ಬುಕ್ ಸೇರಿದಂತೆ ಅನೇಕ ಸಾಮಾಜಿಕ ತಾಣಗಳಲ್ಲಿ ಸುಲಬವಾಗಿ ಸಿಗ್ತಿದ್ದಾರೆ ಅವರಿಗೆ ಈ ವಿಶಯವನ್ನು ತಿಳಿಸಿ, ಮುಂದಿನ ಕಾರ್ಯಕ್ರಮದಲ್ಲಾದ್ರು ಸರಿ ಮಾಡಿಕೊಳ್ತಾರಾ ನೋಡೋಣ.