ಬುಧವಾರ, ಅಕ್ಟೋಬರ್ 17, 2012

ರೆಡ್ FM 93.5 ನ ಕೇಳುಗರ ಸಂಕ್ಯೆ ಕಡಿಮೆ ಆದ್ರೆ ಆಶ್ಚರ್ಯಪಡಬೇಕಾಗಿಲ್ಲ.



ಇದು ಇತ್ತೀಚಿಗೆ ಬಿಡುಗಡೆಯಾಗಿರೋ ಬೆಂಗಳೂರಿನ FM ರೇಡಿಯೋ ಕೇಳುಗರ ಸರ್ವೇಯ ಮಾಹಿತಿ.  ಈ ಚಿತ್ರದಲ್ಲಿ ಇರುವಂತೆ ಕನ್ನಡ ಹಾಡು ಹಾಕೋ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ ಸರಿ ಸುಮಾರು 80 ಕಿಂತ ಹೆಚ್ಚು ಇನ್ನುಳಿದಂತೆ ಹಿಂದಿ /ಇಂಗ್ಲೀಶ್ ಹಾಡನ್ನು ಹಾಕುವ ಚಾನೆಲ್ ಗಳ ಒಟ್ಟು ಕೇಳುಗರ ಸಂಕ್ಯೆ 15 ನ್ನೂ ಸಹ ದಾಟುತ್ತಿಲ್ಲ. ಈಗ ಕೆಲವು ತಿಂಗಳ ಹಿಂದೆ fever 104 ನವರು ಕನ್ನಡ ಹಾಡು ಹಾಕುವ ಸಮಯದಲ್ಲಿ ಅವರ ಕೇಳುಗರ ಸಂಕ್ಯೆ 15 ರ ಆಸುಪಾಸಿಗೂ ಮುಟ್ಟಿತ್ತು. ಆದರೆ ಯಾವಾಗ ಹಿಂದಿ ಹಾಡುಗಳನ್ನು ಹಾಕಿದ್ರೊ ಆಗಲಿಂದ ಕೇಳುಗರ ಸಂಕ್ಯೆ 5-6 ರ ಆಸುಪಾಸಿಗೆ ಬಂದು ನಿಂತಿದೆ. ಇದೀಗ ರೆಡ್ FM 93.5 ನವರೂ ಹಿಂದಿ ಹಾಡುಗಳನ್ನು ಹಾಕಲು ಶುರುಮಾಡಿದ್ದಾರೆ. ಕಳೆದ ಕೆಲವು ವರ್ಶಗಳ ರೇಡಿಯೋ ಕೇಳುಗರ ಸಂಕ್ಯೆಯ Trend  ನೋಡಿದ್ರೆ ರೆಡ್ FM ನವರ ಕೇಳುಗರ ಸಂಕ್ಯೆ ಕಡಿಮೆ ಆದ್ರೆ ಆಶ್ಚರ್ಯ ಪಡಬೇಕಾಗಿಲ್ಲ. ...

ಬುಧವಾರ, ಆಗಸ್ಟ್ 22, 2012

ಬೆಂಗಳೂರು ಟ್ರಾಪಿಕ್ ಮೇಲೆ ಬೀಸುತ್ತಿರುವ ಕನ್ನಡದ ತಂಗಾಳಿ

ಕೆಲವು ದಿನಗಳ ಹಿಂದೆ ಬೆಂಗಳೂರು ಟ್ರಾಪಿಕ್ ಪೋಲೀಸ್ ಇಲಾಕೆಯಲ್ಲಿ ಆಗುತ್ತಿರುವ ಕನ್ನಡದ ಕಡೆಗಣನೆಯ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆನು. ಅವುಗಳಲ್ಲಿ  ಮುಕ್ಯವಾಗಿ-


  • ನಿಲ್ದಾಣವಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡವಿಲ್ಲದಿರುವುದು
  • ಸಾರ್ವಜನಿಕ ಜಾಗದಲ್ಲಿ ಜನರಲ್ಲಿ ಜಾಗ್ರುತಿ ಮೂಡಿಸಲೆಂದು ಮಾಡಿದ್ದ ವಿಡಿಯೋನಿಂದ ಕನ್ನಡವನ್ನು ಕೈಬಿಟ್ಟಿದ್ದು
  •  ಆಟೋ ಚಾಲಕರ ಮಾಹಿತಿಯುಳ್ಳ ಚೀಟಿಯಲ್ಲಿ ಕನ್ನಡವನ್ನು ಕೈಬಿಟ್ಟಿದ್ದು
  • ಪೇಸ್ ಬುಕ್ಕಿನ ಕಾತೆಯಲ್ಲಿ ಇಂಗ್ಲೀಶ್ ನಲ್ಲಿ ಮಾತ್ರ ಮಾಹಿತಿ ಹಾಕುತ್ತಿದ್ದುದ್ದು
  • ದಂಡ ಕಟ್ಟಿದ್ದಕ್ಕೆ ಕೊಡುವ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಇಲ್ಲದಿರುವುದು
ಹೀಗೆ ಹಲವಾರು ಕಡೆಗಳಲ್ಲಿ ಟ್ರಾಪಿಕ್ ಪೋಲೀಸ್ ಇಲಾಕೆಯು ಕನ್ನಡವನ್ನು ಕಡೆಗಣಿಸಿತ್ತು. ಕನ್ನಡದ ಕಡೆಗಣನೆಯ ಬಗ್ಗೆ ಹಲವಾರು ಜಾಗ್ರುತ ಕನ್ನಡಿಗರು ದನಿ ಎತ್ತಿದ್ದರು. ಜಾಗ್ರುತ ಕನ್ನಡಿಗರ ಒತ್ತಾಯದ ಮೇರೆಗೆ ಇದೀಗ ಇಲಾಕೆಯು  ಒಂದೊಂದಾಗಿ ಕನ್ನಡವಿಲ್ಲದ ಕಡೆಗಳೆಲ್ಲಾ ಕನ್ನಡವನ್ನು ಬಳಕೆ ಮಾಡಲು ಪ್ರಾರಂಬಿಸಿದೆ, ಇದು ನಿಜಕ್ಕೂ ಸಂತೋಶದ ಸುದ್ದಿ. 

ಈಗ ನಿಲ್ದಾಣವಿಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಅಂಟಿಸುತ್ತಿದ್ದ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲಾಗಿದೆ. ಟ್ರಾಪಿಕ್ ಜಾಗ್ರುತಿ ವಿಡಿಯೋ ನಲ್ಲಿ ಕನ್ನಡವನ್ನು ಬಳಸಲಾಗಿದೆ. ಆಟೋ ಚಾಲಕರ ವಿವರವುಳ್ಳ ಚೀಟಿಯಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗಿದೆ. ಪೇಸ್ ಬುಕ್ಕಿನಲ್ಲಿ ಕನ್ನಡದಲ್ಲಿ ಮಾಹಿತಿ ಹಾಕಲಾಗುತ್ತಿದೆ ಜೊತೆಗೆ ದಂಡ ಕಟ್ಟಿದ್ದಕ್ಕೆ ಕೊಡುವ ರಶೀತಿಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಬ್ಲಾಕ್ ಬೆರಿ ರಶೀತಿಯಲ್ಲಿ ಕನ್ನಡ ಕಾಣುವುದೆಂಬ ಆಶ್ವಾಸನೆಯನ್ನು ನೀಡಿದ್ದಾರೆ. 

ಪೋಲೀಸ್ ಇಲಾಕೆಯನ್ನು ಜನರ ಬಳಿಗೆ ಕೊಂಡೊಯ್ಯಲು ಆಡಳಿತದಲ್ಲಿ ಕನ್ನಡದ ಬಳಕೆ ಅತ್ಯವಶ್ಯಕ. ಇದನ್ನು ಮನಗಂಡು  ಕನ್ನಡದ ಬಳಕೆಗೆ ಮುಂದಾಗಿರುವ ಟ್ರಾಪಿಕ್ ಪೋಲೀಸ್  ಕಮಿಶನರ್ ಸಲೀಂ ರವರಿಗೆ ಮತ್ತು ಇಲಾಕೆಯ ಇನ್ನಿತರ ಅದಿಕಾರಿಗಳಿಗೆ ಅಬಿನಂದನೆಗಳು. ಟ್ರಾಪಿಕ್ ಇಲಾಕೆಯ ಈ ನಡೆ ಕನ್ನಡವನ್ನು ಕಡೆಗಣಿಸುತ್ತಿರುವ ಇನ್ನಿತರ ಇಲಾಕೆಗಳಿಗೆ ಮಾದರಿಯಾಗಲಿ.

ಸೋಮವಾರ, ಜುಲೈ 30, 2012

ಕನ್ನಡದಲ್ಲಿ ರಶೀತಿ ಸಿಗುವಂತಾಗಲಿ

ಬೆಂಗಳೂರು ಟ್ರಾಪಿಕ್ ಪೋಲೀಸರು ಮೋಟಾರು ವಾಹನ ಕಾಯಿದೆಯನ್ನು ಉಲ್ಲಂಗಿಸಿದಕ್ಕೆ ದಂಡ ಕಟ್ಟಿದಾಗ ಕೊಡುವ ರಶೀತಿಯಲ್ಲಿ ಕನ್ನಡ ಇಲ್ಲದ ಬಗ್ಗೆ ಟ್ರಾಪಿಕ್ ಪೋಲೀಸರಿಗೆ ಹಲವಾರು ಬಾರಿ ಪತ್ರವನ್ನು ಬರೆದು  ಕನ್ನಡದಲ್ಲಿ ರಶೀತಿ ನೀಡದಿರುವುದು ಕರ್ನಾಟಕ ಸರಕಾರ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪರಿಣಾಮಕಾರಿಗಾಗಿ ರೂಪಿಸಿರುವ ಆಡಳಿತ ಬಾಶೆಯ ನಿಯಮದ ಉಲ್ಲಂಗನೆ ಎನ್ನುವುದನ್ನು ತಿಳಿಸಿ, ಕನ್ನಡದಲ್ಲಿ ರಶೀತಿಯನ್ನು ನೀಡುವಂತೆ ಕೆಲವು ಗೆಳೆಯರೆಲ್ಲರೂ ಒತ್ತಾಯಿಸಿದೆವು. ಆದರೆ ಅವರಿಂದ ಯಾವುದೇ ಸಮಂಜಸವಾದ ಉತ್ತರ ಸಿಗದಿದ್ದರಿಂದ, ಆಡಳಿತ ಬಾಶೆಯ ಉಲ್ಲಂಗನೆಯಾಗಿರುವುದರ ಆದಾರದ ಮೇಲೆ ಕನ್ನಡ ಅಬಿವ್ರುದ್ದಿ ಪ್ರಾದಿಕಾರಕ್ಕೆ ದೂರೊಂದನ್ನು ನೀಡಿದ್ದೆವು. ನಮ್ಮ ದೂರಗೆ ಪ್ರತಿಯಾಗಿ ಅಬಿವ್ರುದ್ದಿ ಪ್ರಾದಿಕಾರ ಸಾರಿಗೆ ಸಚಿವರಾದ ಅಶೋಕ್ ರವರಿಗೆ ಪತ್ರಬರೆದು ಆಡಳಿತ ಬಾಶೆಯ ನಿಯಮದ ಉಲ್ಲಂಗನೆ ಬಗ್ಗೆ ಗಮನಸೆಳೆದಿತ್ತು.  
ಇದೀಗ ಅಬಿವ್ರುದ್ದಿ ಪ್ರಾದಿಕಾರದ ಪತ್ರಕ್ಕೆ ಪ್ರತಿಯಾಗಿ ಸಾರಿಗೆ ಇಲಾಕೆಯು ಕೂಡ ಬೆಂಗಳೂರು ಟ್ರಾಪಿಕ್ ಕಮಿಶನರ್ ರವರಿಗೆ ಪತ್ರ ಬರೆದು ಕನ್ನಡದ ರಶೀತಿ ಸಿಗುವಂತೆ ಮಾಡಬೇಕೆಂದು ತಿಳಿಸಿದ್ದಾರೆ.
ತಂತ್ರಗ್ನಾನ ಇಶ್ಟು ಮುಂದುವರೆದರೂ ಸಹ ಅದಿಕಾರಿಗಳು ಕನ್ನಡದ ಅನುಶ್ಟಾನದ ವಿಶಯದಲ್ಲಿ ಗಮನಹರಿಸದಿರುವುದು ನಿಜಕ್ಕು ದುರದ್ರುಶ್ಟಕರ.  ಕನ್ನಡವನ್ನು ಬಿಟ್ಟು ಪರಿಣಾಮಕಾರಿ ಮತ್ತು ಪಾರದರ್ಶಕ ಆಡಳಿತ ಅಸಾದ್ಯ ಎನ್ನುವುದನ್ನು ಅದಿಕಾರಿಗಳು ಅರಿತುಕೊಳ್ಳಲಿ ಇನ್ನು ಮುಂದೆಯಾದಾರೂ ಕನ್ನಡದಲ್ಲಿ ರಶೀತಿ ಸಿಗುವಂತಾಗಲಿ.

ಮಂಗಳವಾರ, ಜೂನ್ 19, 2012

ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗ ಎರಡನೇ ದರ್ಜೆ ಪ್ರಯಾಣಿಕ

ನಮ್ಮ ನಾಡಿಗೆ ಉಪಯೋಗವಾಗಲೆಂದು  ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲು ಕನ್ನಡದ ಸಾವಿರಾರು ರೈತರು ತಮ್ಮ ಬೂಮಿಯನ್ನು ನೀಡಿದ್ದಾರೆ ಜೊತೆಗೆ ಕರ್ನಾಟಕ ಸರಕಾರವೂ ಸಹ ಹಣಕಾಸಿನ ನೆರವನ್ನು ನೀಡಿದೆ. ಆದರೆ ಕನ್ನಡದ ರೈತರ ಬೂಮಿಯನ್ನು, ಕರ್ನಾಟಕ ಸರಕಾರದ ಹಣವನ್ನು ಪಡೆದ ವಿಮಾನ ನಿಲ್ದಾಣ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಎಶ್ಟರ ಮಟ್ಟಿಗೆ ಮನ್ನಣೆ ನೀಡಿದೆ?

ಬೆಂಗಳೂರು ವಿಮಾನ ನಿಲ್ದಾಣದ ಕನ್ನಡ-ಕನ್ನಡಿಗ-ಕರ್ನಾಟಕ ವಿರೋದಿ ದೋರಣೆಯ ಕೆಲವು ಸ್ಯಾಂಪಲ್ ಗಳನ್ನು ಒಮ್ಮೆ ಗಮನಿಸಿ-

೧. ವಿಮಾನ ನಿಲ್ದಾಣದಲ್ಲಿನ ಪಾರ್ಕಿಂಗ್ ಸ್ಟಿಕರ್ ಗಳು ಕೇವಲ ಇಂಗ್ಲೀಶ್ ನಲ್ಲಿದೆ.

೨. ಸೂಚನಾ ಪಲಕಗಳಲ್ಲಿ ಕನ್ನಡವನ್ನು ಬಳಸಿದ್ದರೂ, ಕನ್ನಡಕ್ಕೆ ಕೊನೆಯ ಸ್ತಾನ ನೀಡಲಾಗಿದ್ದು ಎಶ್ಟಾಗುತ್ತೋ ಅಶ್ಟು ಸಣ್ಣಕ್ಷರದಲ್ಲಿ 'ಕಾಟಾಚಾರ'ಕ್ಕೆ ಬರೆಸಿದ್ದಾರೆ

೩. ವಿಮಾನ ನಿಲ್ದಾಣದಲ್ಲಿರುವ ಕಾವಲುಗಾರರೊಡನೆ ಕನ್ನಡದಲ್ಲಿ ಮಾತನಾಡಿ ಅವರಿಂದ ಬೈಯಿಸಿಕೊಂಡ ಉದಾಹರಣೆಗಳಿವೆ
೪. ಹೊರಡುವ ಮತ್ತು ಬರುವ ವಿಮಾನಗಳ ಬಗ್ಗೆ ಟಿವಿಗಳಲ್ಲಿ ತೋರಿಸುವ ಮಾಹಿತಿ ಬರಿಯ ಇಂಗ್ಲೀಶ್ /ಹಿಂದಿಯಲ್ಲಿದೆ
೫. ವಿಮಾನ ನಿಲ್ದಾಣದ ಒಳಗೆ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಸೂಚನೆಗಳನ್ನು ನೀಡಲಾಗುತ್ತಿದೆ.
೬. ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಗೆ ಇರುವ ಸ್ತಾನದ ಬಗ್ಗೆ ಹೇಳಬೇಕಾಗಿಯೇನು ಇಲ್ಲ.

ಹೀಗೆ ಇನ್ನೂ ಹಲವೆಡೆಗಳಲ್ಲಿ ಇಂಗ್ಲೀಶ್ ಮತ್ತು ಹಿಂದಿಗೆ ಮನ್ನಣೆ ನೀಡಿ ಕನ್ನಡವನ್ನು ಹಿಂದಕ್ಕೆ ತಳ್ಳಲಾಗಿದೆ.

ಒಟ್ಟಾರೆಯಾಗಿ ಗಮನಿಸಿದರೆ ಕನ್ನಡ-ಕನ್ನಡಿಗ-ಕರ್ನಾಟಕರನ್ನು ವಿಮಾನ ನಿಲ್ದಾಣದಲ್ಲಿ ಎರಡೆನೇ ದರ್ಜೆಯಂತೆ ನೋಡಲಾಗುತ್ತಿದೆ. ನಮ್ಮ ರಾಜ್ಯ ಸರಕಾರದ ಹಣದಿಂದ ಮತ್ತು ನಮ್ಮ ರೈತರ ಬೂಮಿಯಲ್ಲಿ ನಮಗೆ ಬರೆ ಹಾಕಿ ಪರರಿಗೆ ಮನ್ನಣೆ ನೀಡಲಾಗಿರುವುದು ನಿಜಕ್ಕೂ ದುರಂತವೇ ಸರಿ. ಜಗತ್ತಿನ ಹಲವಾರು ದೇಶಗಳಲಿನ ಅಂತರಾಶ್ಟ್ರೀಯ ವಿಮಾನ ನಿಲ್ದಾಣಗಳನ್ನು ನೋಡಿದಾಗ ಅಲ್ಲೆಲ್ಲೂ ಅಂತರಾಶ್ಟ್ರೀಯ ಎಂದ ಮಾತ್ರಕ್ಕೆ ತಮ್ಮ ತನವನ್ನು ಮರೆತಿರುವುದು ಕಾಣುವುದಿಲ್ಲ.. ತಮ್ಮ ತನಕ್ಕೆ ಮೊದಲನೇ ಮನ್ನಣೆ ನೀಡುವುದರ ಮೂಲಕ ತಮ್ಮ ನಾಡಿನ ಜನರಿಗೆ ಉಪಯೋಗವಾಗುವಂತೆ ವ್ಯವಸ್ತೆಯನ್ನು ರೂಪಿಸಿದ್ದಾರೆ. ಆದರೆ, ನಮ್ಮ ನಾಡಿನ ವಿಮಾನ ನಿಲ್ದಾಣಕ್ಕೆ ನಮ್ಮ ನಾಡಿನ ಜನರು ಹೋಗಬೇಕೆಂದರೆ ಇಂಗ್ಲೀಶ್ ಅತವಾ ಹಿಂದಿಯನ್ನು ಕಲಿತು ಹೋಗಬೇಕೆನ್ನುವ ಅನಿವಾರ್ಯತೆಯನ್ನು ನಿರ್ಮಿಸಿದ್ದಾರೆ. ಇದು ಏಕೆ ಎಂದು ಪ್ರಶ್ನಿಸುವ ಕನ್ನಡದ ಪ್ರಯಾಣಿಕರಿಗೆ ನಿಲ್ದಾಣದ ಅದಿಕಾರಿಗಳು ಉದ್ದಟತನದ ಉತ್ತರಗಳನ್ನೂ ನೀಡಿರುವ ಉದಾಹರಣೆಗಳಿವೆ,

ಅಂತರಾಶ್ಟ್ರೀಯ ಅಂತ ಹೆಸರನ್ನು ಇಟ್ಟುಕೊಂಡ ಮಾತ್ರಕ್ಕೆ ನಮ್ಮ ತನವನ್ನು ಬಿಟ್ಟುಕೊಡುವುದು ಯಾತಕ್ಕಾಗಿ? ಅಂತರಾಶ್ಟ್ರೀಯವಾಗಲಿ ಮತ್ತೊಂದಾಗಲಿ ಕೊನೆಗೆ ವಿಮಾನ ನಿಲ್ದಾಣವಿರುವುದು ಕನ್ನಡದ ನೆಲದಲ್ಲೆ ಎನ್ನುವುದನ್ನು ಮರೆಯಬಾರದು, ಇದನ್ನು ಮರೆತಿರುವ ವಿಮಾನ ನಿಲ್ದಾಣಕ್ಕೆ  ಮತ್ತು ಸರಕಾರದವರಿಗೆ ಪತ್ರಬರೆದು ಕನ್ನಡದ ನೆಲದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಮೊದಲ ಸ್ತಾನ ಸಿಕ್ಕೇ ಸಿಗಬೇಕು ಎನ್ನುವುದನ್ನು ತಿಳಿಸೋಣ..
ವಿಮಾನ ನಿಲ್ದಾಣದ ಮತ್ತು ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳ ಮಿಂಚೆ- feedback@bialairport.com, cm@kar.nic.in

ಭಾನುವಾರ, ಮಾರ್ಚ್ 18, 2012

ಹಿಂದಿಯನ್ನು ಕನ್ನಡದಲ್ಲಿ ಬರೆದರೆ ಕನ್ನಡವಾಗುತ್ತದೆಯೇ?




ಮೇಲಿರುವ ಎರಡೂ ಚಿತ್ರಗಳು ಕನ್ನಡ ಪತ್ರಿಕೆಗಳಲ್ಲಿ ಸಾಗರೋತ್ತರ ಬಾರತೀಯ ವ್ಯವಹಾರಗಳ ಸಚಿವಾಲಯದವರು ನೀಡಿರುವ ಜಾಹಿರಾತುಗಳು ಈ ಎರಡೂ ಜಾಹಿರಾತುಗಳ ಮೂಲಕ ಸಚಿವಾಲಯವು ಜನರಿಗೆ  ಜಾಗ್ರುತಿ ಮೂಡಿಸುವುದರ ಜೊತೆಗೆ ಮುಕ್ಯವಾದ ಕೆಲವು ವಾಕ್ಯಗಳನ್ನು ಹಿಂದಿಯಲ್ಲಿ ಹೇಳಿ ಅದೇ ವಾಕ್ಯವನ್ನು ಕನ್ನಡದಲ್ಲಿ ಬರೆದಿದ್ದಾರೆ. ಹಿಂದಿಯನ್ನು ಕನ್ನಡದಲ್ಲಿ ಬರೆದಾಕ್ಷಣ ಅದು ಕನ್ನಡವಾಗುವುದೇ ಅತವಾ ಜನರಿಗೆ ಆ ವಾಕ್ಯದ ಅರ್ತ ಅರಿವಿಗೆ ಬರುವುದೇ? ಈ ರೀತಿ ಕನ್ನಡದಲ್ಲಿ ಹಿಂದಿಯ ವಾಕ್ಯವನ್ನು ಬರೆದು ಅತವಾ ಸಂಪೂರ್ಣವಾಗಿ ಹಿಂದಿಯಲ್ಲೇ ಬರೆದು ಕನ್ನಡ ಪತ್ರಿಕೆಗಳಲ್ಲ್ಲಿ ಪ್ರಕಟಿಸುತ್ತಿರುವುದು ಇದೇ ಮೊದಲೇನಲ್ಲ. ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಅತವಾ ಹಿಂದಿಯ ವಾಕ್ಯವನ್ನು ಕನ್ನಡದಲ್ಲಿ ಬರೆದ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ  ತಪ್ಪುಗಳಲ್ಲ,  ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೊದು ಗೊತ್ತಾಗದ ವಿಶಯವೇನಲ್ಲ,   ಈ ವ್ಯವಸ್ತಿತ ಸ೦ಚು ನಿದಾನವಾಗಿ ಹಿಂದಿಯನ್ನು ಕರ್ನಾಟಕದಲ್ಲಿ ನುಗ್ಗಿಸುವ ಪ್ರಯತ್ನ ಎಂದು ಹೇಳಬಹುದು. ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ಸಿಗುವಂತೆ ಮಾಡಲೆಂದೇ ಇಂದು ಕೆಲವು ಕಡೆಗಳಲ್ಲಿ ಹಿಂದಿ ಬಳಸಿ, ಮುಂದೊಂದು ದಿನ ಸಂಪೂರ್ಣವಾಗಿ ಹಿಂದಿ ಬಳಸುವ ಹುನ್ನಾರ ನಡೆಸುತ್ತಿರುವುದು. ಇಂದು ಕೆಲವು ಜಾಹಿರಾತುಗಳಲ್ಲಿ ಹಿಂದಿಯನ್ನು ಹಾಕುತ್ತಿರುವವರು ಮುಂದೊಂದು ದಿನ ಎಲ್ಲಾ ಜಾಹಿರಾತುಗಳಲ್ಲಿ ಸಂಪೂರ್ಣ ಹಿಂದಿಯನ್ನು ಬಳಸಿ ಅದರ ಮೂಲಕ ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ದೊರಕುವಂತೆ ಆದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. 

ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ ಹಿಂದಿಯೇತರ ನಾಡಿಗೆ ಅಕ್ರಮವಾಗಿ ಹಿಂದಿಯನ್ನು ನುಗ್ಗಿಸಿ ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಹಿಂದಿಯೇತರರೂ ಹಿಂದಿ ಬಾಶಿಕರಶ್ಟೆ ಹಕ್ಕನ್ನು ಹೊಂದಿಲ್ಲವೇ?

ಗುರುವಾರ, ಮಾರ್ಚ್ 15, 2012

ಕನ್ನಡದಲ್ಲಿ ಗ್ರಾಹಕಸೇವೆ ಕನ್ನಡಿಗನ ಹಕ್ಕು




ಮಾರ್ಚ್ ೧೫ ವಿಶ್ವ ಗ್ರಾಹಕ ದಿನ, ಗ್ರಾಹಕ ನೀಡುವ ಹಣಕ್ಕೆ ತಕ್ಕ ಸರಕನ್ನು ಪಡೆಯುವ ಹಕ್ಕು ಗ್ರಾಹಕನಿಗಿದೆ. ಅದು ಬರಿ ಅಳತೆ ಗುಣಮಟ್ಟ ತೂಕ ಕ್ಕೆ ಮಾತ್ರ ಸೀಮಿತವಾಗಿಲ್ಲ. ಕನ್ನಡದಲ್ಲಿ ಗ್ರಾಹಕಸೇವೆ ಪಡೆಯುವುದು ಕನ್ನಡಿಗರ ಹಕ್ಕು ಕೂಡ. ಇದನ್ನು ಪ್ರತಿಯೊಬ್ಬ ಕನ್ನಡಿಗರು  ಅರಿಯಬೇಕಿದೆ.

ಇಂದಿರುವ ಕೆಲವು ಬಗೆಯ ಕಾನೂನಿನಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆಯನ್ನು ನೀಡಲೇಬೇಕೆಂದು ಹೇಳುತ್ತವೆ ಉದಾಹರಣೆಗೆ
೧. ಕರ್ನಾಟಕದಲ್ಲಿ ವ್ಯವಹರಿಸುವ ಎಲ್ಲಾ  ಬ್ಯಾಂಕ್ ಗಳೂ ಕನ್ನಡದಲ್ಲಿ ಗ್ರಾಹಕ ಸೇವೆ ನೀಡಬೇಕೆಂಬ ಕಾನೂನನ್ನು RBI ರೂಪಿಸಿದೆ. ಈ ಕಾನೂನಿನ ಆದಾರದ ಮೇಲೆ ಕನ್ನಡಿಗರು ಕನ್ನಡದಲ್ಲೆ ಎಲ್ಲಾ ತರದ ಬ್ಯಾಂಕ್ ವ್ಯವಹಾರಗಳನ್ನು ನಡೆಸಬಹುದು. ಅಂದರೆ ಕಾತೆ ತೆರೆಯುವ ಅರ್ಜಿಯಿಂದ ಹಿಡಿದು ಚೆಕ್ ನಲ್ಲಿ ಕನ್ನಡದಲ್ಲಿ ಬರೆಯುವ ವರೆಗೆ ಎಲ್ಲೆಡೆ ಕನ್ನಡವನ್ನು ಬಳಸಬಹುದು.
೨.  ಕರ್ನಾಟಕ ಸರಕಾರ ಆಡಳಿತದಲ್ಲಿ ಕನ್ನಡವನ್ನು ಬಳಸಬೇಕೆಂಬ ನಿಯಮವನ್ನು ಜಾರಿಗೊಳಿಸುವುದರ ಮೂಲಕ ಸರಕಾರಿವಲಯದಲ್ಲಿ ಜನರಿಗೆ ಎಲ್ಲಾ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗುವಂತೆ ಮಾಡಿದೆ.
೩. ಇನ್ನು "Consumer Protection Act" ನ ಮೂಲಕ ಕೂಡ ಕನ್ನಡಿಗನು ಕನ್ನಡದಲ್ಲಿ ಗ್ರಾಹಕಸೇವೆ ಪಡೆಯಲು ಅನುವಾಗುವ ಅಂಶಗಳಿವೆ -
  • (a) the right to be protected against the marketing of goods and services which are hazardous to life and property- ಅಂದರೆ ಈ ಕಾನೂನಿನ ಆದಾರದ ಮೇಲೆ ಒಬ್ಬ ಗ್ರಾಹಕನಿಗೆ ತನ್ನ ಜೀವಕ್ಕೆ ಅಥವಾ ತನ್ನ ಆಸ್ತಿಗೆ ಹಾನಿ ತರಬಹುದಾದ ಸಾಮಗ್ರಿಗಳ ಮಾರಾಟದಿಂದ ರಕ್ಷಣೆ ಪಡೆಯುವ ಹಕ್ಕು ಇದೆ. ಅಂದರೆ ನಾವು ದಿನ ನಿತ್ಯ ಬಳಸುವ ಅಡುಗೆ cylinder ಗಳ ಮೇಲೆ ಅಪಾಯದ ಸೂಚನೆ, ದೀಪಾವಳಿಯಲ್ಲಿ ಸುಡುವ ಪಟಾಕಿಗಳ ಸೂಚನೆಗಳು , ಔಷಧಿಗಳ ಬಳಕೆಯ ಬಗ್ಗೆ ಮಾಹಿತಿ, ವಿಮಾನಗಳಲ್ಲಿ , ರೈಲುಗಳಲ್ಲಿ ,ಸುರಕ್ಷತಾ ಸೂಚನೆಗಳು ಜೊತೆಗೆ ಇನ್ನೂ ಅನೇಕ ವಿಶಯಗಳಲ್ಲಿ ಕನ್ನಡಿಗರು ಕನ್ನಡದಲ್ಲೆ ಗ್ರಾಹಕ ಸೇವೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ
  • (b )the right to be informed about the quality, quantity, potency, purity, standard and price of goods or services, as the case may be so as to protect the consumer against unfair trade practices-ಕನ್ನಡಿಗನಿಗೆ ತಾನು ಕೊಳ್ಳುತ್ತಿರುವ ಸಾಮಗ್ರಿಯ ಬಗೆಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ಇದೆ. ಅದು ಒಂದು ಶಾಂಪೂ ಆಗಿರಬಹುದು, ಟೀವಿ, ವಾಶಿಂಗ್ ಮಶಿನ್, ಮೊಬೈಲ್, ಕಾರು, ಬೈಕು ಆಗಿರಬಹುದು , ready to eat ಪ್ಯಾಕೆಟ್ ಗಳು ಆಗಿರಬಹುದು, ಅಕ್ಕಿ, ಬೇಳೆ ಕಾಳುಗಳು ಆಗಿರಬಹುದು ಕೊಳ್ಳುವ ಸಾಮಗ್ತಿಯ ಬಗೆಗಿನ ಎಲ್ಲಾ ಮಾಹಿತಿ ಕನ್ನಡದಲ್ಲಿರಬೇಕು.
ಹೀಗೆ ಹಲವಾರು ರೀತಿಯ ಕಾನೂನುಗಳು ಗ್ರಾಹಕ ಸೇವೆಯಲ್ಲಿ ಕನ್ನಡ ಸಿಗಬೇಕೆನ್ನುವುದನ್ನ ಹೇಳಿದರೂ ಇಂದಿಗೂ ಕಾನೂನಿನ ಅನುಶ್ಟಾನವಾಗಿಲ್ಲದಿರುವುದನ್ನು ನೋಡಿದ್ದೇವೆ. ಕನ್ನಡಿಗರು ತಮ್ಮ ಹಣ ತಮ್ಮ ಹಕ್ಕು ಎನ್ನುವುದನ್ನ ಅರಿತು ಕನ್ನಡದಲ್ಲಿ ಗ್ರಾಹಕಸೇವೆಗೆ ಒತ್ತಾಯ ಮಾಡಿದಲ್ಲಿ, ಗ್ರಾಹಕಸೇವೆಯಲ್ಲಿ ಕನ್ನಡ ಸಿಗುವುದರಲ್ಲಿ ಅನುಮಾನವಿಲ್ಲ.

ಜೊತೆಗೆ ಸರಕಾರ ಕೂಡ ಗ್ರಾಹಕ ಸೇವೆಯ ಕಾನೂನಿನಲ್ಲಿ ಅಳತೆ, ಗುಣಮಟ್ಟಯ ಜೊತೆಯಲ್ಲಿ ಕನ್ನಡವೂ ಮುಕ್ಯವಾದುದು ಎನ್ನುವುದನ್ನು ಮನಗಂಡು, ಗ್ರಾಹಕ ಸೇವೆಯಲ್ಲಿ ಕನ್ನಡ ಸಿಗುವಂತೆ ಇನ್ನೂ ಪರಿಣಾಮಕಾರಿಯಾದ ಕಾನೂನನ್ನು ರೂಪಿಸಲಿ.

ಬುಧವಾರ, ಫೆಬ್ರವರಿ 29, 2012

ಸರಕಾರದ ಮಿಂಬಲೆಗಳ ಮೇಲೆ ಕನ್ನಡದ ತಂಗಾಳಿ ಬೀಸಲಿ

ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳು ವಾರ್ತಾ ಇಲಾಕೆಗೆ ಸೇರಿದ(http://karnatakavarthe.org/) ಮಿಂಬಲೆಯನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಎಲ್ಲಾ ಇಲಾಕೆಯ ಮಿಂಬಲೆಗಳನ್ನು ೧೫ ದಿನದೊಳಗೆ, ಎಲ್ಲಾ  ಮಾಹಿತಿಯೂ ಹಾಕಿ ಇವತ್ತಿನದಾಗಿಸಲು ಗಡುವು ನೀಡಿದ್ದಾರೆ. ಈ ಗಡುವಿನಿಂದ ಹಲವಾರು ಇಲಾಕೆಯ ಸತ್ತಂತಿರುವ ಮಿಂಬಲೆಗಳಿಗೆ ಜೀವ ಬಂದರೆ ನಿಜಕ್ಕು ನಾಗರೀಕರಿಗೆ ಸರಕಾರದ ಇಲಾಕೆಗಳ ಕೆಲಸಗಳ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತೆ.ಮುಕ್ಯ ಮಂತ್ರಿಗಳು ತಂತ್ರಗ್ನಾನದ ಬಳಕೆಯನ್ನು ಮುಕ್ಯವೆಂದು ಪರಿಗಣಿಸಿ ಈ ರೀತಿಯ ಗಡುವು ನೀಡಿರುವುದು ಮೆಚ್ಚುವಂತಹದ್ದ್ದು.


ಆದರೆ ಕರ್ನಾಟಕ ಸರಕಾರದ ಆಡಳಿತ ಬಾಶೆ ಕನ್ನಡವಾದರೂ ಮತ್ತು  ಮಿಂಬಲೆಯಲ್ಲಿ ಕನ್ನಡದ ಬಳಕೆ ಸುಲಬವಾಗುವಶ್ಟು  ತಂತ್ರಗ್ನಾನ ಬೆಳೆದಿದ್ದರೂ ಇಂದಿಗೂ ಸರಿ ಸುಮಾರು ಎಲ್ಲಾ ಸರಕಾರಿ ಇಲಾಕೆಯ ಮಿಂಬಲೆಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿ ಆಗಿಲ್ಲ. ಇದೇ ರೀತಿಯಲ್ಲಿ ಮತ್ತೆ ವಾರ್ತಾ ಇಲಾಕೆಯ ಮಿಂಬಲೆಯಲ್ಲೂ ಆಗಿದೆ. ಕೆಲವು ಇಲಾಕೆಗಳ ಮಿಂಬಲೆಯಂತೆಯೇ, ವಾರ್ತಾ ಇಲಾಕೆಯ ಹೊಸ ಮಿಂಬಲೆಯಲ್ಲಿ ಕನ್ನಡದ ಆಯ್ಕೆ ಇದ್ದರೂ  ಮುಕ್ಯವಾದ ಮಾಹಿತಿಯುಳ್ಳ ಪುಟಗಳಲ್ಲೇ ಕನ್ನಡ ಇಲ್ಲವಾಗಿದೆ. ಇದೆಲ್ಲಕ್ಕೂ ಮುಕ್ಯವಾಗಿ ಆಡಳಿತದಲ್ಲಿ ಕನ್ನಡ ನಿಯಮಮಾಡಿರುವ ಸರಕಾರದ ಮಿಂಬಲೆಯಲ್ಲಿ (http://www.karnataka.gov.in/)ಕನ್ನಡ ಮೊದಲಬಾಶೆಯಾಗಿಲ್ಲದಿರುವುದು ದುರದ್ರುಶ್ಟಕರ! ಇವೆಲ್ಲವನ್ನು ನೊಡಿದರೆ ಸರಕಾರ ಈ ನಾಡಿನ  ಜನರಿಗಾಗಿ ಮಿಂಬಲೆಗಳನ್ನು ನಿರ್ಮಿಸುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.


ತಂತ್ರಗ್ನಾನ ಮತ್ತು ತಂತ್ರಗ್ನಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಿದರೆ ಆಡಳಿತನ್ನು  ಪರಿಣಾಮಕಾರಿಯಾಗಿಸಬಹುದು. ಕರ್ನಾಟಕ ಸರಕಾರದ ಮಿಂಬಲೆಯ ಪಲಾನುಬಾವಿಗಳು ಹೆಚ್ಚು ಜನ ಕನ್ನಡಿಗರೇ ಹೊರೆತು ಬೇರೆಯವರಲ್ಲ.  ಸರಕಾರ ಇಲಾಕೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲು ಕನ್ನಡ ಬಾಶೆಯ ಬಳಕೆ ಅತ್ಯವಶ್ಯಕ ಎನ್ನುವುದನ್ನು ತಿಳಿಯಬೇಕು, ಅಲ್ಲೊಂದು ಇಲ್ಲೊಂದು ಪುಟಗಳಲ್ಲಿ  ಕನ್ನಡದ ಬಳಕೆ ಮಾಡುವುದರ ಬದಲು ಎಲ್ಲಾ ಮಾಹಿತಿಯೂ ಕನ್ನಡದಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಈಗಿನ ಮಿಂಬಲೆ ಗಳಲ್ಲಿ ಇಂಗ್ಲೀಶ್ ಮೊದಲ ಬಾಶೆಯಾಗಿದ್ದು, ಇದು ಬದಲಾಗಿ ರಾಜ್ಯ ಸರಕಾರದ ಎಲ್ಲಾ ಮಿಂಬಲೆ ಗಳಲ್ಲೂ ಕನ್ನಡವೇ ಮೊದಲ ಬಾಶೆಯನ್ನಾಗಿಸುವುದರ ಮೂಲಕ ಹೆಚ್ಚು ಜನರನ್ನು ತಲುಪಲು ಸಾದ್ಯ. ಮತ್ತು ಆಡಳಿತದಲ್ಲಿ ಪಾರಸರ್ಶಕತೆಯನ್ನು ತರಲು ಸಾದ್ಯ.

ಮಂಗಳವಾರ, ಫೆಬ್ರವರಿ 28, 2012

BMTCಯ ಅದಿಕಾರಿಗಳ ಕನ್ನಡದ ಬಗೆಗಿನ ಕೀಳರಿಮೆ ಕೊನೆಗಾಣಲಿ

ಕಳೆದ ವಾರ ನನ್ನ ಸ್ನೇಹಿತರೊಬ್ಬರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆಗೆ ಪತ್ರ ಬರೆದು ಬಸ್ಸಿನಲ್ಲಿ ಕನ್ನಡದಲ್ಲಿ  ದಾರಿಸೂಚಿಯನ್ನು ಬಳಸಲು ಆಗ್ರಹಿಸಿದ್ದರು ಅದಕ್ಕೆ ಪ್ರತಿಕ್ರಿಯೆಯಾಗಿ ಸಂಸ್ತೆಯವರು ಬರೆದಿರುವ ಉತ್ತರ ಕೆಳಗಿನಂತಿದೆ.
Manager (O) <ctmobmtc@gmail.com> wrote:

Dear Harsha
Your suggestion has been taken well. The information displayed in the signage board (except in BIAL services)  is in  Kannada and in English  language,  to facilitate the kanndigas and also non kannadiga commuters. If any left over will be corrected.

Looking forward for your continued patronage

With regards
CTM(O),
BMTC

ಈ ಪತ್ರದ ಸಾರಾಂಶ ಏನಂದ್ರೆ  ಬೆಂಗಳೂರಿನ ಒಳಗೆ ಸಂಚರಿಸುವ ಮಾರ್ಗದ ದಾರಿಸೂಚಿಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಳಸ್ತಾರಂತೆ ಆದ್ರೆ ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸಿನಲ್ಲಿ ಕನ್ನಡ ಬಳಸಲ್ವಂತೆ!



ಬೆಂಗಳೂರಿನಲ್ಲಿ ಹತ್ತಾರು ವರ್ಶಗಳಿಂದ ನೆಲೆಸಿರುವ ಕನ್ನಡಿಗರು ಕನ್ನಡ ಕಲಿತಿರ್ತಾರೆ ಅತವಾ ಕನ್ನಡ ಕಲಿತಾರೆ ಇದಕ್ಕಾಗಿ ಬೆಂಗಳೂರಿನ ಒಳಗೆ ಸಂಚರಿಸುವ ಬಸ್ಸುಗಳಲ್ಲಿ ಕನ್ನಡವೇ ಸಾಕಾಗುತ್ತಿತ್ತು ಇಲ್ಲಿ ಇಂಗ್ಲೀಶ್ ನ ಬಳಕೆ ಬೇಕಾಗೇ ಇರಲಿಲ್ಲ.ಇನ್ನು ವಿಮಾನ ನಿಲ್ದಾಣದ ವಿಶಯಕ್ಕೆ ಬಂದ್ರೆ ಪ್ರವಾಸಿಗರ ಅನುಕೂಲಕ್ಕೆ ಅಂತ  ಇಂಗ್ಲೀಶ್ ಅನ್ನು ಬಳಸಬಹುದಿತ್ತೇ ಹೊರೆತು ಕನ್ನಡ ಬಳಸೋದೇ ಇಲ್ಲ ಅನ್ನೊದು ಇವರಿಗೆ ಕನ್ನಡದ ಬಗೆಗಿನ ಕೀಳರಿಮೆಯನ್ನು ಎತ್ತಿ ತೋರಿಸುತ್ತಿದೆ. ಜಗತ್ತಿನಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ನಗರಗಳಾದ ಪ್ಯಾರಿಸ್ ನಿಂದ ಹಿಡಿದು ಟೋಕಿಯೋ ವರೆಗೆ ಅತವಾ ನಮ್ಮ ದೇಶದ ಚನೈ ಮುಂಬೈ ಎಲ್ಲೇ‌ಹೋದ್ರು ನಗರದ ವಿವಿದ ಬಡಾವಣೆಗೆ ಸಂಚರಿಸುವ ಬಸ್ಸುಗಳಲ್ಲಿ ಸ್ತಳೀಯ ಬಾಶೆಯಿರುತ್ತೆ ಹೊರೆತು ಇಂಗ್ಲೀಶ್ ಬಾಶೆಯ ಬಳಕೆ ಇರುವುದಿಲ್ಲ ಜೊತೆಗೆ ವಿಮಾನ ನಿಲ್ದಾಣ ಅತವಾ ಹೆಚ್ಚು ಪ್ರವಾಸಿಗರು ಓಡಾಡುವ   ಬಸ್ಸುಗಳಲ್ಲಿ ಪ್ರವಾಸಿಗರಿಗೆ ಸಹಾಯವಾಗಲಿ ಅಂತ ಇಂಗ್ಲೀಶ್ ಬಳಸಿರುತ್ತಾರೆ ಹೊರೆತು ತಮ್ಮ ಬಾಶೆಯನ್ನು ಬಿಟ್ಟು ಇಂಗ್ಲೀಶ್ ಬಳಕೆ ಮಾಡಿರಲ್ಲ.

ಇವರ ಉತ್ತರ ನೊಡಿದ್ರೆ ಇವರಿಗೆ ಕನ್ನಡ ಬಳಕೆ ಮಾಡಬಾರದು ಎನ್ನುವ ಮನಸ್ತಿತಿಗಿಂತ ಕನ್ನಡದ ಬಗ್ಗೆ  ಕೀಳರಿಮೆಯ ಮನಸ್ತಿತಿ ಎದ್ದು ಕಾಣಿಸುತ್ತೆ. ಇದೇ ಕೀಳರಿಮೆಯಿಂದಲೇ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ಸುಗಳಲ್ಲಿ ಕನ್ನಡದ ಹಾಡುಗಳನ್ನು ಹಾಕ್ತಿಲ್ಲ, ವಿಮಾನ ನಿಲ್ದಾಣದ ಬಸ್ಸಿನ ದಾರಿಸೂಚಿ ಕನ್ನಡ ಬಳಸುತ್ತಿಲ್ಲ. ಇವರು ಕನ್ನಡ ಯಾವುದುಕ್ಕು ಅಹ೯ವಲ್ಲದ್ದು ವಿಮಾನ ಏರೋಕ್ಕೆ ಇಂಗ್ಲೀಶ್ ಕಲಿತಿರಬೇಕು ಅಂತ ತಿಳಿದಿದ್ದಾರೆನೋ ಪಾಪ! ಇನ್ನು ೪ ರಿಂದ ೫% ಕನ್ನಡ ಬಾರದವರಿಗೆ ಅನುಕೂಲ ಮಾಡಿಕೊಡುವ ಬರದಲ್ಲಿ ೯೫% ಕನ್ನಡಿಗರಿಗೆ ಅನ್ಯಾಯ ಆಗ್ತಿದೆ ಅಂತನೂ ಗೊತ್ತುಮಾಡಿಕೊಳ್ಳೋಕ್ಕೆ ಆಗದ ಪರಿಸ್ತಿತಿಯಲ್ಲಿ ಅದಿಕಾರಿಗಳು ಇದ್ದಹಾಗಿದೆ. ಇವರ ಕನ್ನಡದ ಬಗೆಗಿನ ಕೀಳರಿಮೆಯನ್ನು ಹೋಗಲಾಡಿಸಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಮಾಡುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ.

ಮಂಗಳವಾರ, ಫೆಬ್ರವರಿ 21, 2012

ಈ ಬಸ್ಸು ಎಲ್ಲಿಗೆ ಹೋಗುತ್ತದೆ?

ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಸಂಸ್ತೆಯು ತನ್ನ ಸಂಸ್ತೆಯ ವೋಲ್ವೋ ಬಸ್ಸೇ ಅಲ್ಲದೇ ಎಲ್ಲಾ ತರದ  ಬಸ್ಸುಗಳಿಗೂ ಎಲೆಟ್ರಾನಿಕ್ ದಾರಿಸೂಚಿಗಳನ್ನು  ಹಾಕುತ್ತಿದೆ.   ಸಂಸ್ತೆಯು ಹಲವಾರು ರೀತಿಯಲ್ಲಿ ತಂತ್ರಗ್ನಾನವನ್ನು ಬಳಕೆ ಮಾಡುತ್ತಿರುವುದು ನಿಜಕ್ಕೂ ಸಂತೋಶದ ವಿಶಯವೇ.

ಆದರೆ ಈ ಸಂತೋಶದ ವಿಶಯ ಹಾಗಿರಲಿ,  ತಾವೋಂದು ವಿಶಯವನ್ನು ಗಮನಿಸಿ ನೋಡಿ. ಈ ದಾರಿಸೂಚಿಗಳಲ್ಲಿ, ಕೆಲವೇ ಕೆಲವೊಮ್ಮೆ ಕನ್ನಡದ ಮಾಹಿತಿ ನೆಪಮಾತ್ರಕ್ಕೆ ಬಂದು ಹೋಗುತ್ತದೆ.  ಕೆಲವು ಕಡೆಗಳಲ್ಲಿ ಕನ್ನಡ ಇಲ್ಲದಿರುವುದು ಸಹ ಕಾಣಸಿಗುತ್ತದೆ. ಈ ಎಲೆಟ್ರಾನಿಕ್ ದಾರಿ ಸೂಚಿಯಲ್ಲಿ ಕನ್ನಡವನ್ನು ಹೆಸರಿಗೆ ಮಾತ್ರ ಹಾಕಲಾಗಿದ್ದು ಇಂಗ್ಲೀಶ್ ಗೆ ಮೊದಲ ಸ್ತಾನ ನೀಡಲಾಗಿದೆ.

ಸಂಸ್ತೆಯು  ತಂತ್ರಗ್ನಾನದ ಬಳಕೆಯ ಹೆಸರಲ್ಲಿ ಕನ್ನಡದ ಬಳಕೆಯನ್ನು ಕಡಿಮೆ ಮಾಡುತ್ತಿರುವುದು ನಿಜಕ್ಕೂ ಆತಂಕ ಉಂಟುಮಾಡುವ ಹಾಗೆ ಮಾಡಿದೆ. ಬಿಎಂಟಿಸಿ ಸಂಸ್ತೆ ವಲಸಿಗರಿಗಾಗಿಯೇ ತನ್ನ ವ್ಯವಸ್ತೆಗಳನ್ನು ರೂಪಿಸಿ ಕನ್ನಡದ ಜಪ ಮಾಡುವಂತೆ ನಟಿಸುತ್ತಿದೆ.ಮುಂದಿನ ದಿನಗಳಲ್ಲಿ ಎಲ್ಲಾ ಬಸ್ಸುಗಳಿಗೂ ಈ ತಂತ್ರಗ್ನಾನವನ್ನು ಅಳವಡಿಕೆಯಾಗುವುದು ಕಂಡಿತ. ಎಲ್ಲೆಡೆ ಇಂಗ್ಲೀಶ್ ಗೆ ಪ್ರಾಮುಕ್ಯತೆ ನೀಡಿ ಕನ್ನಡವನ್ನು ಕಡೆಗಣಿಸಿದ್ದೇ ಆದಲ್ಲಿ ಕನ್ನಡಿಗರ ಕತೆ ಅದೋಗತಿಯೇ!

ಈಗಲಾದರೂ ಕನ್ನಡಿಗರು ಎಚ್ಚೆತ್ತು ಪ್ರಶ್ನೆಸದಿದ್ದರೆ ಮುಂದೊಂದು ದಿನ ಈ ಬಸ್ಸು  ಯಾವ ಬಡಾವಣೆಗೆ ಹೋಗುತ್ತದೆ ಎನ್ನುವುದನ್ನು ವಲಸಿಗ ಸಹ ಪ್ರಯಾಣಿಕರಿಗೆ ಪ್ರಶ್ನೆ ಕೇಳಬೇಕಾದ ಪರಿಸ್ತಿತಿ ಬಂದರೆ ಕನ್ನಡಿಗರು ಆಶ್ಚರ್ಯ ಪಡಬೇಕಾಗಿಲ್ಲ.