ಬುಧವಾರ, ಫೆಬ್ರವರಿ 29, 2012

ಸರಕಾರದ ಮಿಂಬಲೆಗಳ ಮೇಲೆ ಕನ್ನಡದ ತಂಗಾಳಿ ಬೀಸಲಿ

ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳು ವಾರ್ತಾ ಇಲಾಕೆಗೆ ಸೇರಿದ(http://karnatakavarthe.org/) ಮಿಂಬಲೆಯನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಎಲ್ಲಾ ಇಲಾಕೆಯ ಮಿಂಬಲೆಗಳನ್ನು ೧೫ ದಿನದೊಳಗೆ, ಎಲ್ಲಾ  ಮಾಹಿತಿಯೂ ಹಾಕಿ ಇವತ್ತಿನದಾಗಿಸಲು ಗಡುವು ನೀಡಿದ್ದಾರೆ. ಈ ಗಡುವಿನಿಂದ ಹಲವಾರು ಇಲಾಕೆಯ ಸತ್ತಂತಿರುವ ಮಿಂಬಲೆಗಳಿಗೆ ಜೀವ ಬಂದರೆ ನಿಜಕ್ಕು ನಾಗರೀಕರಿಗೆ ಸರಕಾರದ ಇಲಾಕೆಗಳ ಕೆಲಸಗಳ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತೆ.ಮುಕ್ಯ ಮಂತ್ರಿಗಳು ತಂತ್ರಗ್ನಾನದ ಬಳಕೆಯನ್ನು ಮುಕ್ಯವೆಂದು ಪರಿಗಣಿಸಿ ಈ ರೀತಿಯ ಗಡುವು ನೀಡಿರುವುದು ಮೆಚ್ಚುವಂತಹದ್ದ್ದು.


ಆದರೆ ಕರ್ನಾಟಕ ಸರಕಾರದ ಆಡಳಿತ ಬಾಶೆ ಕನ್ನಡವಾದರೂ ಮತ್ತು  ಮಿಂಬಲೆಯಲ್ಲಿ ಕನ್ನಡದ ಬಳಕೆ ಸುಲಬವಾಗುವಶ್ಟು  ತಂತ್ರಗ್ನಾನ ಬೆಳೆದಿದ್ದರೂ ಇಂದಿಗೂ ಸರಿ ಸುಮಾರು ಎಲ್ಲಾ ಸರಕಾರಿ ಇಲಾಕೆಯ ಮಿಂಬಲೆಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿ ಆಗಿಲ್ಲ. ಇದೇ ರೀತಿಯಲ್ಲಿ ಮತ್ತೆ ವಾರ್ತಾ ಇಲಾಕೆಯ ಮಿಂಬಲೆಯಲ್ಲೂ ಆಗಿದೆ. ಕೆಲವು ಇಲಾಕೆಗಳ ಮಿಂಬಲೆಯಂತೆಯೇ, ವಾರ್ತಾ ಇಲಾಕೆಯ ಹೊಸ ಮಿಂಬಲೆಯಲ್ಲಿ ಕನ್ನಡದ ಆಯ್ಕೆ ಇದ್ದರೂ  ಮುಕ್ಯವಾದ ಮಾಹಿತಿಯುಳ್ಳ ಪುಟಗಳಲ್ಲೇ ಕನ್ನಡ ಇಲ್ಲವಾಗಿದೆ. ಇದೆಲ್ಲಕ್ಕೂ ಮುಕ್ಯವಾಗಿ ಆಡಳಿತದಲ್ಲಿ ಕನ್ನಡ ನಿಯಮಮಾಡಿರುವ ಸರಕಾರದ ಮಿಂಬಲೆಯಲ್ಲಿ (http://www.karnataka.gov.in/)ಕನ್ನಡ ಮೊದಲಬಾಶೆಯಾಗಿಲ್ಲದಿರುವುದು ದುರದ್ರುಶ್ಟಕರ! ಇವೆಲ್ಲವನ್ನು ನೊಡಿದರೆ ಸರಕಾರ ಈ ನಾಡಿನ  ಜನರಿಗಾಗಿ ಮಿಂಬಲೆಗಳನ್ನು ನಿರ್ಮಿಸುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.


ತಂತ್ರಗ್ನಾನ ಮತ್ತು ತಂತ್ರಗ್ನಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಿದರೆ ಆಡಳಿತನ್ನು  ಪರಿಣಾಮಕಾರಿಯಾಗಿಸಬಹುದು. ಕರ್ನಾಟಕ ಸರಕಾರದ ಮಿಂಬಲೆಯ ಪಲಾನುಬಾವಿಗಳು ಹೆಚ್ಚು ಜನ ಕನ್ನಡಿಗರೇ ಹೊರೆತು ಬೇರೆಯವರಲ್ಲ.  ಸರಕಾರ ಇಲಾಕೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲು ಕನ್ನಡ ಬಾಶೆಯ ಬಳಕೆ ಅತ್ಯವಶ್ಯಕ ಎನ್ನುವುದನ್ನು ತಿಳಿಯಬೇಕು, ಅಲ್ಲೊಂದು ಇಲ್ಲೊಂದು ಪುಟಗಳಲ್ಲಿ  ಕನ್ನಡದ ಬಳಕೆ ಮಾಡುವುದರ ಬದಲು ಎಲ್ಲಾ ಮಾಹಿತಿಯೂ ಕನ್ನಡದಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಈಗಿನ ಮಿಂಬಲೆ ಗಳಲ್ಲಿ ಇಂಗ್ಲೀಶ್ ಮೊದಲ ಬಾಶೆಯಾಗಿದ್ದು, ಇದು ಬದಲಾಗಿ ರಾಜ್ಯ ಸರಕಾರದ ಎಲ್ಲಾ ಮಿಂಬಲೆ ಗಳಲ್ಲೂ ಕನ್ನಡವೇ ಮೊದಲ ಬಾಶೆಯನ್ನಾಗಿಸುವುದರ ಮೂಲಕ ಹೆಚ್ಚು ಜನರನ್ನು ತಲುಪಲು ಸಾದ್ಯ. ಮತ್ತು ಆಡಳಿತದಲ್ಲಿ ಪಾರಸರ್ಶಕತೆಯನ್ನು ತರಲು ಸಾದ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ