ಕೇಂದ್ರ ಸರಕಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೇಂದ್ರ ಸರಕಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮಾರ್ಚ್ 18, 2012

ಹಿಂದಿಯನ್ನು ಕನ್ನಡದಲ್ಲಿ ಬರೆದರೆ ಕನ್ನಡವಾಗುತ್ತದೆಯೇ?




ಮೇಲಿರುವ ಎರಡೂ ಚಿತ್ರಗಳು ಕನ್ನಡ ಪತ್ರಿಕೆಗಳಲ್ಲಿ ಸಾಗರೋತ್ತರ ಬಾರತೀಯ ವ್ಯವಹಾರಗಳ ಸಚಿವಾಲಯದವರು ನೀಡಿರುವ ಜಾಹಿರಾತುಗಳು ಈ ಎರಡೂ ಜಾಹಿರಾತುಗಳ ಮೂಲಕ ಸಚಿವಾಲಯವು ಜನರಿಗೆ  ಜಾಗ್ರುತಿ ಮೂಡಿಸುವುದರ ಜೊತೆಗೆ ಮುಕ್ಯವಾದ ಕೆಲವು ವಾಕ್ಯಗಳನ್ನು ಹಿಂದಿಯಲ್ಲಿ ಹೇಳಿ ಅದೇ ವಾಕ್ಯವನ್ನು ಕನ್ನಡದಲ್ಲಿ ಬರೆದಿದ್ದಾರೆ. ಹಿಂದಿಯನ್ನು ಕನ್ನಡದಲ್ಲಿ ಬರೆದಾಕ್ಷಣ ಅದು ಕನ್ನಡವಾಗುವುದೇ ಅತವಾ ಜನರಿಗೆ ಆ ವಾಕ್ಯದ ಅರ್ತ ಅರಿವಿಗೆ ಬರುವುದೇ? ಈ ರೀತಿ ಕನ್ನಡದಲ್ಲಿ ಹಿಂದಿಯ ವಾಕ್ಯವನ್ನು ಬರೆದು ಅತವಾ ಸಂಪೂರ್ಣವಾಗಿ ಹಿಂದಿಯಲ್ಲೇ ಬರೆದು ಕನ್ನಡ ಪತ್ರಿಕೆಗಳಲ್ಲ್ಲಿ ಪ್ರಕಟಿಸುತ್ತಿರುವುದು ಇದೇ ಮೊದಲೇನಲ್ಲ. ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಅತವಾ ಹಿಂದಿಯ ವಾಕ್ಯವನ್ನು ಕನ್ನಡದಲ್ಲಿ ಬರೆದ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ  ತಪ್ಪುಗಳಲ್ಲ,  ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೊದು ಗೊತ್ತಾಗದ ವಿಶಯವೇನಲ್ಲ,   ಈ ವ್ಯವಸ್ತಿತ ಸ೦ಚು ನಿದಾನವಾಗಿ ಹಿಂದಿಯನ್ನು ಕರ್ನಾಟಕದಲ್ಲಿ ನುಗ್ಗಿಸುವ ಪ್ರಯತ್ನ ಎಂದು ಹೇಳಬಹುದು. ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ಸಿಗುವಂತೆ ಮಾಡಲೆಂದೇ ಇಂದು ಕೆಲವು ಕಡೆಗಳಲ್ಲಿ ಹಿಂದಿ ಬಳಸಿ, ಮುಂದೊಂದು ದಿನ ಸಂಪೂರ್ಣವಾಗಿ ಹಿಂದಿ ಬಳಸುವ ಹುನ್ನಾರ ನಡೆಸುತ್ತಿರುವುದು. ಇಂದು ಕೆಲವು ಜಾಹಿರಾತುಗಳಲ್ಲಿ ಹಿಂದಿಯನ್ನು ಹಾಕುತ್ತಿರುವವರು ಮುಂದೊಂದು ದಿನ ಎಲ್ಲಾ ಜಾಹಿರಾತುಗಳಲ್ಲಿ ಸಂಪೂರ್ಣ ಹಿಂದಿಯನ್ನು ಬಳಸಿ ಅದರ ಮೂಲಕ ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ದೊರಕುವಂತೆ ಆದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. 

ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ ಹಿಂದಿಯೇತರ ನಾಡಿಗೆ ಅಕ್ರಮವಾಗಿ ಹಿಂದಿಯನ್ನು ನುಗ್ಗಿಸಿ ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಹಿಂದಿಯೇತರರೂ ಹಿಂದಿ ಬಾಶಿಕರಶ್ಟೆ ಹಕ್ಕನ್ನು ಹೊಂದಿಲ್ಲವೇ?

ಗುರುವಾರ, ಡಿಸೆಂಬರ್ 15, 2011

ಕರವೇ ಹೋರಾಟಕ್ಕೆ ಮೆಟ್ರೋನಿಂದ ಉತ್ತರ

ದಿನಾಂಕ ೨.೧೨.೨೦೧೧ ರಂದು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಮೆಟ್ರೋನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮತ್ತು ಬಾಶಾ ನೀತಿಯಲ್ಲಿ ಆಗಿರುವ ಅನ್ಯಾಯ ನೀಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನ ನೀಡಿದ್ದರು. ಇದಕ್ಕೆ ಉತ್ತರವಾಗಿ ಮೇಟ್ರೋನಿಂದ ಕರವೇಗೆ ಬಂದಿರುವ ಉತ್ತ್ತರದ ಪ್ರತಿಯನ್ನ ಕರವೇ ವೆಬ್ ಸೈಟ್ (http://karave.blogspot.com/2011/12/krv-horatakke-metrodinda-uttara.html)ನಲ್ಲಿ ಹಾಕಲಾಗಿದೆ.

ಈ ಉತ್ತರದ ಪ್ರಕಾರ ಮೆಟ್ರೋ ನಲ್ಲಿ ಉದ್ಯೋಗಕ್ಕೆ ಕನ್ನಡ ಬಲ್ಲವರನ್ನ ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿರುವುದಾಗಿಯೂ ಮತ್ತು ಇದರ ಜೊತೆಗೆ  ಬದ್ರತಾ ಸೇವೆ ಮತ್ತು ಸ್ವಚ್ಚತಾ ಕೆಲಸಗಳನ್ನ ಹೊರಗುತ್ತಿಗೆ ನೀಡಲಾಗಿದ್ದು ಅಂತಹಾ ಹೊರಗುತ್ತಿಗೆದಾರ  ಏಜೆನ್ಸಿಗಳು ಕೂಡ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು
ಬಲ್ಲವರನ್ನ ಮಾತ್ರ ನೇಮಿಸಿಕೊಳ್ಳಬೇಕೆಂಬ ಶರತ್ತನ್ನ ವಿದಿಸಿ ಕರಾರನ್ನ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು ನಿಜವಾಗಿಯೂ ನಮ್ಮ ಮೆಟ್ರೋನ ಮತ್ತು ಹೊರಗುತ್ತಿಗೆ ಉದ್ಯೋಗಗಳು ಕನ್ನಡ ಬಲ್ಲವರಿಗೆ ಮಾತ್ರ  ಎಂಬ  ಆದೇಶ ಕಟ್ಟು ನಿಟ್ಟಾಗಿ ಜಾರಿಯಾಗುವಂತೆ ನೊಡಿಕೊಳ್ಳಬೇಕಾಗಿದೆ. ಇದೆಲ್ಲವುದರ ಜೊತೆಗೆ ಮುಕ್ಯವಾಗಿ  ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಬಾಶೆ ಮತ್ತು ತನ್ನ ಎಲ್ಲಾ ಕಚೇರಿ ವ್ಯವಹಾರಗಳನ್ನ ಕನ್ನಡ ಬಾಶೆಯಲ್ಲೆ ವ್ಯವಹರಿಸುವುದು ನಮ್ಮ ಮೆಟ್ರೋ ನ ಜವಾಬ್ದಾರಿಯೆಂದು ಮತ್ತು ಕರ್ನಾಟಕ ಸರಕಾರದ ನೀತಿ ನಿಯಮಗಳಿಗೆ ತಮ್ಮ ಸಂಸ್ತೆಯು ಶ್ರದ್ದೆಯ ಸಹಮತ ಸೂಚಿಸುತ್ತದೆ ಎಂದೂ ಸಹ ಹೇಳಿರುತ್ತಾರೆ. ಇದೇ ನಿಟ್ಟಿನಲ್ಲಿ ನಮ್ಮ ಮೆಟ್ರೋ ತನ್ನ ಅಂತರ್ಜಾಲದಲ್ಲಿ ಕನ್ನಡಕ್ಕೆ ಆದ್ಯತೆಯನ್ನ ನೀಡಿ ಸಾರ್ವಜನಿಕರಿಗೆ ಕನ್ನಡ  ಮಾಹಿತಿಯನ್ನ ತಿಳಿಸುವಂತೆ
ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದೂ ಸಹ ತಿಳಿಸಿದ್ದಾರೆ, ಈ ಸುತ್ತೋಲೆ ಜಾರಿರೂಪಕ್ಕೆ ಬಂದರೆ ಮಾತ್ರ ನಿಜಕ್ಕು ಕನ್ನಡಿಗರಿಗೆ ಉಪಯೋಗವಾಗುತ್ತದೆ.

ಇದರ ಜೊತೆಗೆ ಹಿಂದಿ ಬಾಶೆಯ ಬಳಕೆಯ ಬಗ್ಗೆ ನಮ್ಮ ಮೆಟ್ರೋನ ಉತ್ತರ ಮಾತ್ರ ಸಮಂಜಸವಾಗಿಲ್ಲವೆನ್ನಿಸುತ್ತದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದ ಸಂಸ್ತೆಯೆಂದ ಮಾತ್ರಕ್ಕೆ ಹಿಂದಿಯನ್ನ ಬಳಸಿದ್ದಿವಿ  ಎನ್ನೊವುದು ಸರಿಯಲ್ಲದ ಕ್ರಮವಾಗಿದೆ.

ಈ ಆದೇಶಗಳ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಮೆಟ್ರೋ ಹೇಳಿರುವುದನ್ನ ನಾನೆಂದೂ ಕಂಡಿಲ್ಲ ಮತ್ತು ಕರವೇ ಹೋರಾಟದ ಪಲವಾಗಿ ನೀಡಿರುವ ಉತ್ತರ ನಿಜಕ್ಕೂ ಕರವೇ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ಉತ್ತರದ ಆದಾರದ ಮೇಲೆ  ಉದ್ಯೋಗದ ವಿಶಯದಲ್ಲಿ ಮತ್ತು ತನ್ನ ಆಡಳಿತದ ವಿಶಯದಲ್ಲಿ ಹೊರಡಿಸಿರುವ ಆದೇಶಗಳ ಅನುಶ್ಟಾನ ಆಗುವ ವರೆಗೆ ಮೆಟ್ರೋ ಮೇಲೆ ಒತ್ತಡ ಹಾಕುವ ಕೆಲಸದಲ್ಲಿ ಕರವೇ ಜೊತೆಗೆ ಕೈಜೋಡಿಸಬೇಕಾದ್ದು ನಮ್ಮ ಕರ್ತವ್ಯವೆಂದು ಬಾವಿಸುತ್ತೇನೆ. ಇದೆಲ್ಲವುದರ ಜೊತೆಗೆ ಅನಗತ್ಯ ಹಿಂದಿ ಬಳಕೆಯನ್ನ ಸಹ ಕೈಬಿಡುವಂತೆ ಸಹಾ ಒತ್ತಡ
ಹಾಕಬೇಕಾಗಿದೆ.

ಸೋಮವಾರ, ಸೆಪ್ಟೆಂಬರ್ 5, 2011

ಹಿಂದಿ ಹೇರಿಕೆಗೆ ದಿಕ್ಕಾರ ಎನ್ನೋಣ


ಬಾರತ ಬಾಶಾ ವೈವಿದ್ಯತೆಗಳಿಂದ ಕೂಡಿದ ದೇಶ. ಇಲ್ಲಿ ಎಲ್ಲಾ ಬಾಶೆಗಳಿಗೂ ತನ್ನದೇ ಆದ ವೈಶಿಶ್ಟಗಳಿವೆ. ಆದರೆ ಈ ವೈವಿದ್ಯತೆಯನ್ನ ಅರಿಯದ ಕೆಲವರು ಹಿಂದಿಯನ್ನ ರಾಶ್ಟ್ರಬಾಶೆಯನ್ನಾಗಿಸಲು ಹಲವಾರು ಬಾರಿ ಪ್ರಯತ್ನ ನಡೆಸಿದ್ದರು, ಈ ಸಮಯದಲ್ಲಿ ಹಿಂದಿಯೇತರರಿಂದ ಬಂದ ವಿರೋದದಿಂದ ಅವರ ಪ್ರಯತ್ನ ವಿಪಲವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುವ ಉದ್ದೇಶದಿಂದ, ಸೆಪ್ಟೆಂಬರ್ ೧೪, ೧೯೪೯ರಂದು ಬಾರತದ ಸಂವಿದಾನದಲ್ಲಿ ಹಿಂದಿ ಬಾಶೆಗೆ ಆಡಳಿತ ಬಾಶೆ ಎನ್ನುವ ಸ್ತಾನ ನೀಡಿಲಾಗಿದ್ದು ,ಅಂದಿನಿಂದ ಇಂದಿನವರೆಗೂ ಆಡಳಿತ ಬಾಶೆಯ ಹೆಸರಿನಲ್ಲಿ ಹಿಂದಿಯೇತರರ ಮೇಲೆ ಹಿಂದಿ ಬಾಶೆಯ ಹೇರಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಹಿಂದಿ ಹೇರಿಕೆಯ ಪರಿಣಾಮವಾಗಿ ಸರಕಾರದ ಸವಲತ್ತುಗಳಿಂದ ಹಿಡಿದು ಉದ್ಯೋಗದ ವರೆಗೆ ಹಿಂದಿ ಬಾಶೆಯನ್ನಾಡುವ ಜನರು ಮಾತ್ರ ಉಪಯೋಗ ಪಡೆದುಕೊಂಡು, ಹಿಂದಿಯೇತರರು ವಂಚನೆಗೆ ಗುರಿಯಾಗುತ್ತಿದ್ದಾರೆ ಮತ್ತು ಸರಕಾರ ಹಿಂದಿ ಬಾಶೆಗೆ ಪ್ರಾಮುಕ್ಯತೆ ದೊರೆಕಿಸಿ ಕೊಡಲು ಟೊಂಕ ಕಟ್ಟಿ ನಿಂತಿರುವುದರಿಂದ. ಇತರೇ ಬಾಶೆಗೆ ಮತ್ತು ಆ ಬಾಶೆಯನ್ನಾಡುವ ಜನರಿಗೆ ಅನ್ಯಾಯದ ಸರಮಾಲೆಗಳೇ ಸಿಗುತ್ತಿದೆ.

ಕೇಂದ್ರಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಪ್ರತಿವರ್ಶ ಹಿಂದಿಯನ್ನ ಆಡಳಿತ ಬಾಶೆಯನ್ನಾಗಿ ಮಾಡಿದ ದಿನವನ್ನ(ಸೆಪ್ಟೆಂಬರ್ ೧೪) ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ಹಿಂದಿಯೇತರರಿಗೆ ಆಮಿಶಗಳನ್ನ ಒಡ್ಡಿ ಹಿಂದಿ ಹೇರಿಕೆಗೆ ತಲೆಬಾಗುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದು ಮಾರಕವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುತ್ತಿರುವ ಹೀನ ಕ್ರುತ್ಯವನ್ನ ಒಟ್ಟಾಗಿ ಕಂಡಿಸೋಣ. ಬಾರತದ ಬಾಶಾ ವೈವಿದ್ಯತೆಯನ್ನ ಕಾಪಾಡೋಣ. ಸೆಪ್ಟೆಂಬರ್ ೧೪ ರಂದು ನಡೆಸುವ ಹಿಂದಿ ಹೇರಿಕೆ/ಹಿಂದಿ ದಿವಸ್ ಗೆ ದಿಕ್ಕಾರ ಎನ್ನೊಣ!!

ಕೊನೆಯದಾಗಿ: ಹಿಂದಿ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ರವರು ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಸೆಪ್ಟೆಂಬರ್ ೧೦ ೨೦೧೧ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಬೆಂಗಳೂರಿನ ನಯನ ಸಬಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಹಿಂದಿ ಹೇರಿಕೆಯ ಬಗ್ಗೆ ಹೆಚ್ಚಿನ ವಿಶಯಗಳನ್ನ ತಿಳಿಯಬಹುದು.

ಸೋಮವಾರ, ಆಗಸ್ಟ್ 8, 2011

ಆದಾಯ ತೆರಿಗೆ ನಿಯಮಗಳನ್ನ ತಿಳಿಬೇಕಾದ್ರೆ ಹಿಂದಿ/ಇಂಗ್ಲೀಶ್ ಗೊತ್ತಿರಬೇಕಾ?

ಆದಾಯ ತೆರಿಗೆ ಇಲಾಕೆಯವರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ರಿಟರ್ನ್ ಪೈಲ್ ಮಾಡೊಕ್ಕೆ ಅವಕಾಶ ಆಗ್ಲಿ ಅಂತ ವ್ಯವಸ್ತೆ ಮಾಡಿದ್ದರು, ಅಶ್ಟು ಕರ್ಚು ಮಾಡಿದ್ರು ಅದು ಬರೆ ಕೆಲವೇ ಕೆಲವು ಮಂದಿಗೆ ಉಪಯೋಗವಾಗುವಂತಿದ್ದುದ್ದು ಮಾತ್ರ ದುರದ್ರುಶ್ಟಕರ. ಹೇಗೆ ಅಂತಿರ? ಮುಂದೆ ಓದಿ......


ಕಳೆದ ವಾರ ನನಗೆ ತಿಳಿದವರೊಬ್ಬರು ಐಟಿ ರಿಟರ್ನ್ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದವರು ದಂಗಾಗಿ ಮನೆಗೆ ವಾಪಸ್ ಬಂದು, ಯಾರಾದ್ರು ಸಿಎ ಗೊತ್ತಿದ್ದ್ರೆ ಹೇಳಪ್ಪ ಅಂತ ನನ್ನ ಕೇಳಿದ್ರು, ಅದಕ್ಕೆ ನಾನು ಸಿಎ ಹತ್ತಿರ ಯಾಕೆ ಹೋಗ್ತಿರಾ, ಸುಮ್ನೆ ಅರಮನೆ ಮೈದಾನಕ್ಕೆ ಹೋಗಿ ಅಲ್ಲಿ ಎಲ್ಲಾ ಆರಾಮಗಿ ಆಗುತ್ತೆ ಅಂದೆ. ಅದಕ್ಕೆ ಅವರು, ತಾವು ಅರಮನೆ ಮೈದಾನಕ್ಕೆ ಹೋಗಿದ್ದಾಗಿ ಮತ್ತು ಅಲ್ಲಿ ಪೈಲ್ ಮಾಡೊದು ಅಶ್ಟು ಸುಲಬ ಅಲ್ಲ ಅಂತ ಹೇಳಿದ್ರು. ಆಮೆಲೆ, ಅವರು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಸಿಎ ಕಡೆಯಿಂದ ಐಟಿ ರಿಟರ್ನ್ಸ್ ಪೈಲ್ ಮಾಡಿಸಿದ್ರು.

ಯಾಕೆ ಅರಮನೆ ಮೈದಾನದಲ್ಲಿ ಲಕ್ಯಾಂತರ ರೂಪಾಯಿ ಕರ್ಚು ಮಾಡಿ ಅಬಿಯಾನ ಮಾಡ್ತಿರಬೇಕಾದ್ರೆ ಅಲ್ಲಿ ಕೆಲ್ಸ ಸುಲಬವಾಗಿರ್ಬೇಕಾಲ್ವ ಅಂತ ನಾನು ನನ್ನ ತೆರಿಗೆ ಪೈಲ್ ಮಾಡೊಕ್ಕೆ ಅಂತ ಅರಮನೆ ಮೈದಾನಕ್ಕೆ ಹೋದಾಗ ತಿಳಿತು, ಇಲ್ಲಿ ತೆರಿಗೆ ಪೈಲ್ ಮಾಡೊದು ಅಶ್ಟು ಸುಲಬವಲ್ಲ. ಇದು ಬಲೇ ಕಶ್ಟದ ಕೆಲ್ಸ. ಒಳಗೆ ಹೋಗ್ತಿದ್ದಂಗೆ ನನಗೆ ಅಯ್ಯೋ ಮತ್ತೇನಾದ್ರು ಇಂಗ್ಲೀಶ್ ನವರು ಇಲ್ಲಿ ಆಡಳಿತ ಶುರು ಮಾಡಿದ್ರ ಅನ್ನೊ ಆತಂಕ ಆಯ್ತು. ಯಾಕಂದ್ರೆ ಇಲ್ಲಿನ ವ್ಯವಸ್ತೆಗಳು ಇಂಗ್ಲೀಶ್ ಗೊತ್ತಿರುವವರಿಗೆ ಮಾತ್ರ! ಸರಿ ಇಲ್ಲಿ ಕೆಲವು ಪುಸ್ತಕಗಳನ್ನ ಮಾರ್ತಿದ್ರು ಅಲ್ಲಿ ಹೋಗಿ ನೊಡೋಣ ಕನ್ನಡದ ತೆರಿಗೆ ಗೆ ಬಗೆಗಿನ ಪುಸ್ತಕ ಇದ್ಯ ನೊಡಿದ್ರೆ ಅಲ್ಲಿದಿದ್ದು ಬರಿ ಇಂಗ್ಲೀಶ್ ಮತ್ತು ಹಿಂದಿ ಪುಸ್ತಕಗಳು.

ಇದನ್ನೆಲ್ಲಾ ನೋಡಿದ್ರೆ, ಪ್ರತಿ ವರ್ಶ ಕನ್ನಡಿಗರಿಂದ ಲಕ್ಯಾಂತರ ಕೊಟಿ ಹಣ ಆದಾಯ ತೆರಿಗೆ ಇಲಾಕೆಗೆ ಹೋಗುತ್ತೆ. ಆದ್ರೆ ತೆರಿಗೆ ಬಗ್ಗೆ ತಿಳಿಯೋಕ್ಕೆ ಒಂದೇ ಒಂದು ಪುಸ್ತಕ ಕೂಡ ಕನ್ನಡದಲ್ಲಿ ಇಲ್ಲ, ಅಪ್ಲಿಕೇಶನ್, ಸೂಚನೆಗಳಿರೋ ನಾಮಪಲಕಗಳಲ್ಲಿ ಎಲ್ಲೂ ಕರ್ನಾಟಕದ ಜನ ಬಳಸೋ ಬಾಶೆ ಕನ್ನಡಕ್ಕೆ ಒಂದೇ ಒಂದು ಚಿಕ್ಕ ಸ್ತಾನ ಕೂಡ ಇಲ್ಲ. ತೆರಿಗೆ ರಿಟರ್ನ್ ಪೈಲ್ ಮಾಡಬೇಕು ಅಂದ್ರೆ ಇಂಗ್ಲಿಶ್ ಅತವಾ ಹಿಂದಿ ಗೊತ್ತಿರಬೇಕು ಅನ್ನೊ ತರ ವಾತಾವರಣ ನಿರ್ಮಾಣ ಮಾಡೊಕ್ಕೆ ಹೊರಟಿದೆಯೇ ನಮ್ಮ ಆದಾಯ ತೆರಿಗೆ ಇಲಾಕೆ? ಬಾರತ ಒಕ್ಕೂಟ ವ್ಯವಸ್ತೆಯಲ್ಲಿ ಕನ್ನಡಿಗನಿಗೆ ತನ್ನ ದೇಶದ ಆದಾಯ ತೆರಿಗೆ ನಿಯಮಗಳನ್ನ ತಿಳಿಯಲು ಬೇರೊಂದು ಬಾಶೆ ಕಲಿಯಬೇಕಾದ ವ್ಯವಸ್ತೆ ನಿರ್ಮಿಸಿರುವುದು ಸರಿಯೇ? ಜನರಿಂದ ತೆರಿಗೆ ಒಟ್ಟುಹಾಕೊ ಆದಾಯ ಇಲಾಕೆಯೇ ಕನ್ನಡವನ್ನ ಮರೆತರೇ, ತೆರಿಗೆಯನ್ನ ಬಳೋಸೋ ಇತರೇ ಇಲಾಕೆಗಳಲ್ಲಿ ಕನ್ನಡದ ಕತೇ ಹೇಗೆ ಅನ್ನೊದನ್ನ ಊಹಿಸಿಕೊಳ್ಳಬಹುದು.

ಒಬ್ಬ ಸಾಮಾನ್ಯ ಕನ್ನಡಿಗ ತಾನು ಸುಲಬವಾಗಿ ತೆರಿಗೆ ಬಗ್ಗೆ ಅರ್ತ ಮಾಡಿಕೊಳ್ಳೊಕ್ಕೆ ಮತ್ತು ಸುಲಬವಾಗಿ ತನ್ನ ತೆರಿಗೆ ರಿಟರ್ನ ಪೈಲ್ ಮಾಡೊತರ ವ್ಯವಸ್ತೆಯನ್ನ ಮಾಡೊದ್ರಲ್ಲಿ ನಮ್ಮ ಆದಾಯ ತೆರಿಗೆ ಇಲಾಕೆ ಸಂಪೂರ್ಣವಾಗಿ ವಿಪಲವಾಗಿದೆ. ಇದರಿಂದ ಕನ್ನಡಿಗರು ಬೇರೊಬ್ಬ ವ್ಯಕ್ತಿಯನ್ನ ಅವಲಂಬಿಸುವಂತೆ ಆಗಿರೋದು ನಿಜಕ್ಕೂ ದುರಂತ!

ಮುಂದಿನ ಬಾರಿಯಾದರೂ ಆದಾಯ ತೆರಿಗೆ ಇಲಾಕೆ ತನ್ನ ತಪ್ಪನ್ನ ತಿದ್ದಿಕೊಂಡು ಕನ್ನಡಿಗರ ಸ್ವಾವಲಂಬಿಗಳಾಗಿ ತಮ್ಮ ಆದಾಯ ತೆರಿಗೆ ವಿಶಯವನ್ನ ತಾವೇ ಅರಿತುಕೊಳ್ಳಲು ಅವಕಾಶವಾಗುವಂತೆ ವ್ಯವಸ್ತೆ ಕಲ್ಪಿಸವೇಕೆಂದು ಆಶಿಸುತ್ತೇನೆ.

ಬುಧವಾರ, ಆಗಸ್ಟ್ 3, 2011

ಸಂಸತ್ತಿನಲ್ಲಿ ಕನ್ನಡದ ಕಂಪು ಸದಾ ಮೊಳಗಲಿ

ನೆನ್ನೆ ನಡೆದ ಸಂಸತ್ ಕಲಾಪದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾದ ಲೋಕಸಬಾ ಸದಸ್ಯರಾದ ಚಲುವರಾಯಸ್ವಾಮಿಯವರು ಕನ್ನಡದಲ್ಲಿ ಬಾಶಣ ಮಾಡಿ ಗಮನ ಸೆಳೆದಿದ್ದಾರೆ. ಬಹಳ ದಿನಗಳ ಮೇಲೆ ಸಂಸತ್ತಿನಲ್ಲಿ ಕನ್ನಡದ ಕಂಪು ಮೊಳಗಿದೆ.


೧೯೬೭ ರಲ್ಲಿ ಲೋಕಸಬೆಯ ಕಲಾಪಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ ಹೆಚ್ ಪಟೇಲ್ ರವರು ಬಾಶಣ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲಬೇಕು.

ಲೋಕಸಬೆ ಕಲಾಪಗಳಿಗೆ ಹಿಂದಿ/ಇಂಗ್ಲೀಶ್ ಬರಲ್ಲ ಅಂತ ಹಲವಾರು ಜನ ಹಿಂದಿಯೇತರ ಲೋಕಸಬಾ ಸದಸ್ಯರು ಕಲಾಪಗಳಿಗೆ ಹೋಗದೆ ಅತವಾ ಹೋದರು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳದ ಬಗ್ಗೆ ಕೇಳಿದ್ದಿವಿ. ಆದರೆ ತಮ್ಮ ಬಾಶೆಯಲ್ಲು ಬಾಶಣ ಮಾಡಲು ಪ್ರಜಾಪ್ರಬುತ್ವದಲ್ಲಿ ಅವಕಾಶವಿದ್ದರು ಹಲವಾರು ಜನ ಸದಸ್ಯರು ತಮ್ಮ ಬಾಶೆಯನ್ನ ಬಳಸದಿರುವುದು ದುರಂತವೇ! ನಿಜಕ್ಕು ಅವರು ತಮ್ಮ ಬಾಶೆಯನ್ನ ಬಳಸಿದ್ದೇ ಆದಲ್ಲಿ ವಿಶಯವನ್ನ ಅತ್ಯಂತ ನೇರ ಮತ್ತು ನಿಕರವಾಗಿ ಹೇಳಬಹುದಲ್ಲದೇ ಲೋಕಸಬಾ ಟಿವಿ ಅತವಾ ಇನ್ಯಾವುದೋ ಟಿವಿಯಲ್ಲಿ ಅವರವರ ಕ್ಷೇತ್ರದ ಜನರಿಗೂ ತಾವು ಆಯ್ಕೆ ಮಾಡಿ ಕಳಿಸಿದ ಸದಸ್ಯ ಏನ್ ಮಾತಾಡ್ತಿದ್ದಾರೆ, ಯಾವ ವಿಶಯ ಪ್ರಸ್ತಾಪಿಸುತ್ತಿದ್ದಾರೆ ಅನ್ನೊದು ತಿಳಿಯೋ ಹಾಗೆ ಆಗುತ್ತೆ.

ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವಾರು ಜನರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ, ನಾಡಿನ ಬಗೆಗಿನ ಪ್ರೀತಿಯನ್ನ ತೋರಿಸಿದ್ದಾರೆ. ಕನ್ನಡ ಬಾಶೆಯನ್ನ ಬರಿ ಪ್ರಮಾಣವಚನಕ್ಕೆ ಮಾತ್ರ ಮೀಸಲಿಡದೇ ಎಲ್ಲಾ ರೀತಿಯ ಚರ್ಚೆಯಲ್ಲಿ ಕನ್ನಡ ಬಾಶೆಯನ್ನು ಬಳಸುವಂತಾಗಬೇಕು.ನೆನ್ನೆಯ ಕನ್ನಡ ಬಾಶಣ ಎಲ್ಲಾ ಲೋಕ ಸಭಾ ಸದಸ್ಯರಿಗೂ ಮಾದರಿಯಾಗಲಿ, ಮುಂದಿನ ದಿನಗಳಲ್ಲಿ ಲೋಕಸಬೆಯಲ್ಲಿ ನಮ್ಮ ನಾಡಿನ ಬಗೆಗಿನ ವಿಶಯಗಳ ಚರ್ಚೆ ನಮ್ಮ ಬಾಶೆಯಲ್ಲೇ ನಡೆಯಲಿ.

ಮುಕ್ಯವಾಗಿ- ಇದೆಲ್ಲಾ ನಡೆಯುತ್ತಿರುವುದು ಕನ್ನಡಿಗರಲ್ಲಿ ಆಗುತ್ತಿರೋ ಜಾಗ್ರುತಿಯಿಂದಲೇ. ಕನ್ನಡಿಗ ತನ್ನ ಬಾಶೆಯ ಬಗ್ಗೆ ಜಾಗ್ರುತಿ ಹೊಂದಿದಲ್ಲಿ ಎಲ್ಲಾ ಸದಸ್ಯರು ಕನ್ನಡದಲ್ಲೇ ಬಾಶಣ ಮಾಡುವಂತಾಗುತ್ತಾರೆ.

ಭಾನುವಾರ, ಮೇ 29, 2011

ಇದು ಹಿಂದಿ ಹೇರಿಕೆ ಬೂತದ ಕೈಚಳಕ

ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).

ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು.

ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-

೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.



೨. ಸ್ವಲ್ಪ ದಿನಗಳ ಹಿಂದೆ ವಿಕ ನಲ್ಲಿ, ರೈಲ್ವೆಯಲ್ಲಿ ಪ್ರಯಣಿಕರ ಸುರಕ್ಷತೆಯ ಅರಿವಿಗಾಗಿ ನೀಡೋ ಜಾಹಿರಾತು ಹಿಂದಿಯಲ್ಲಿ ಇತ್ತು. ಏನಪ್ಪ ಕನ್ನಡಿಗರ ಸುರಕ್ಷತೆ ಸರಕಾರಕ್ಕೆ ಬೇಡ್ವ?





೩. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿಂದಿ ಬಾಶೆಯ ವಾಕ್ಯವನ್ನ ಕನ್ನಡ ಲಿಪಿನಲ್ಲಿ ಬರೆದು ಜಾಹಿರಾತು ಹಾಕಿದೆ. ಇದು ಕಾಟಾಚಾರಕ್ಕೆ ಹಾಕಿರೋದೇ ಅಲ್ವ? ಜಾಹಿರಾತು ಕೊಟ್ಟಂಗು ಇರ್ಬೇಕು, ಕೊಡದೇ ಇರೋ ಹಾಗೂ ಇರಬೇಕು. ನಮ್ ದುಡ್ಡು , ಹಿಂದಿ ಜಾತ್ರೆ.







೪. ಮೊನ್ನೆ ಮತ್ತೆ ರೈಲ್ವೆ , ವಿಕ ನಲ್ಲಿ ಜಾಹಿರಾತು ನೀಡಿದೆ. ದೇವರಾಣೆ ಯಾಕೆ ಅಂತ ನನಗಂತೂ ಗೊತ್ತಾಗ್ಲಿಲ್ಲ.





ಇವು ಬರಿ ಸ್ಯಾಂಪಲ್ ಗಳು ಅಶ್ಟೆ! ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.

ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ

ಈ ಮೇಲಿನವು ಕನ್ನಡಿಗರ ಅತವಾ ಹಿಂದಿಯೇತರರ ಮೇಲೆ ನಡೆಯುತ್ತಿರೋ ಹಿಂದಿ ಹೇರಿಕೆ ಬೂತದ ಕೈಚಳಕ. ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ ತಪ್ಪ್ಪು ಅಂತ ಅನ್ನಿಸಲ್ಲ, ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೋದಂತು ಡೆಪೆನೆಟ್ ಆಗಿ ಹೇಳ್ಬಹುದು. ಮತ್ತ್ತೆ.. ಈ ಜಾಹಿರಾತುಗಳನ್ನ ನೋಡಿದ್ರೆ, ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ. ಅನ್ನೊ ಸಂದೇಶ ಎದ್ದು ಕಾಣಿಸ್ತಿದೆ, ಈ ಸಂದೇಶ ನಿಜಕ್ಕೂ ಆತಂಕ ಹುಟ್ಟಿಸ್ತಿದೆ.

ಹಿಂದಿಯೇತರರೂ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು
ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ, ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಕನ್ನಡಿಗರೂ, ಸರಕಾರದ ಕಾರ್ಯ/ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು ಅಲ್ವ?

ಈ ಹಿಂದಿ ಹೇರಿಕೆ ಬೂತದಿಂದ ಮುಕ್ತಿ ಯಾವಗ?