ಭಾನುವಾರ, ನವೆಂಬರ್ 20, 2011

ಕನ್ನಡ ನಾಡಿನಲ್ಲಿ ಪಡಿತರ ಚೀಟಿ ಪಡೆಯಲು ಇಂಗ್ಲೀಶ್ ಗೊತ್ತಿರಬೇಕೆ?

ಆಡಳಿತದಲ್ಲಿ ತಂತ್ರಜ್ನಾನವನ್ನ ಹೆಚ್ಚು ಹೆಚ್ಚು ಬಳಸಿದಶ್ಟೂ ಆಡಳಿತದಲ್ಲಿ ಪಾರದರ್ಶಕತೆಯನ್ನ ತರಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರಕಾರದ ಅನೇಕ ಇಲಾಕೆಗಳು ತಂತ್ರಜ್ನಾನವನ್ನ ಬಳಸುತ್ತಿವೆಯಾದರೂ, ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯನ್ನ ಮಾಡದೇ, ಆಡಳಿತವನ್ನ ಜನರಿಂದ ದೂರವಾಗುವಂತೆ ಮಾಡುತ್ತಿರುವುದು ಮಾತ್ರ ಸರಿಯಲ್ಲದ್ದು.




ಇದೇ ನಿಟ್ಟಿನಲ್ಲಿ ಕಳೆದ ವಾರ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯವರು ಪಡಿತರ ಚೀಟಿಗಳನ್ನ ಹೊಂದಿರದ ಅಹ೯ರಿಗೆ ಪಡಿತರ ಚೀಟಿಯನ್ನ ಆದಶ್ಟು ಬೇಗನೆ ಸಿಗುವಂತೆ ಮಾಡಲು ಒಂದು ವಿಂಬಲೆಯನ್ನ (http://ahara.kar.nic.in/)ನಿರ್ಮಿಸಿದ್ದಾರೆ. ಜೊತೆಗೆ ಅರ್ಜಿಗಳನ್ನ ಈ ವೆಬ್ ಸೈಟ್ ಮೂಲಕವೇ ಸಲ್ಲಿಸಬೇಕು ಎಂಬ ಮಾಹಿತಿಯುಳ್ಳ ಜಾಹಿರಾತನ್ನ ಹಲವಾರು ಪತ್ರಿಕೆಗಳಲ್ಲಿ ನೀಡಿಲಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಈ ಮಿಂಬಲೆಯ ಬಳಕೆ ಅನಿವಾರ್ಯ!!!! ಆದರೆ.... ಈ ಮಿಂಬಲೆಯಲ್ಲೂ ಸಹ ಕನ್ನಡವನ್ನ ಬಳಕೆ ಮಾಡದೇ, ಆಡಳಿತ ಯಂತ್ರವನ್ನ ಸಾಮಾನ್ಯ ಜನರಿಂದ ದೂರವಾಗುವಂತೆ ಮಾಡಿದೆ. ಈ ಮಿಂಬಲೆಯ ಮೂಲಕ ಸರಕಾರ, ಸಾಮಾನ್ಯ ಜನರು ತಮ್ಮ ಪಡಿತರ ಚೀಟಿಯನ್ನ ಸುಲಬವಾಗಿ ಮತ್ತು ಆದಶ್ಟು ಬೇಗನೆ ಪಡೆಯಲು ಇಂಗ್ಲೀಶ್ ಕಲಿಯಬೇಕಾದ ಅನಿವಾರ್ಯತೆಯನ್ನ ನಿರ್ಮಿಸಲು ಹೊರಟಿದೆ.





ಇಂದು ತಂತ್ರಜ್ನಾನ ಮುಂದುವರೆದಿದ್ದು, ಕನ್ನಡವನ್ನ ಇಂಗ್ಲೀಶ್ ನಶ್ಟೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುವಶ್ಟು ಬೆಳೆದಿದೆ ಮತ್ತು ಬೆಳೆಯುತ್ತಿದೆ. ತಂತ್ರಜ್ನಾನದ ಬಳಕೆಯಶ್ಟೇ, ಆ ತಂತ್ರಜ್ನಾನದಲ್ಲಿ ಬಳಕೆಯಾಗಿರುವ ಬಾಶೆಯೂ ಮುಕ್ಯ. ಜನರ ಬಾಶೆಯಲ್ಲಿ ತಂತ್ರಜ್ನಾನವಿದ್ದಲ್ಲಿ ಮಾತ್ರ ಜನರನ್ನ ತಲುಪಲು ಸಾದ್ಯ. ಇದರಿಂದಲೇ ಇಂದು ಗೂಗಲ್, ಪೇಸ್ ಬುಕ್, ಯಾಹೂ ಸೇರಿದಂತೆ ಅನೇಕ ಕಂಪನಿಗಳೂ ಕನ್ನಡ ಬಳಕೆಗೆ ಪ್ರಾಮುಕ್ಯತೆ ನೀಡುತ್ತಿದೆ, ತಂತ್ರಜ್ನಾನದಲ್ಲಿ ಕನ್ನಡವನ್ನ ಬಳಸಿ ತಮ್ಮ ಸೇವೆಯನ್ನ ಸಾಮಾನ್ಯ ಕನ್ನಡಗರಿಗೆ ತಲುಪುವಂತೆ ಮಾಡುತ್ತಿವೆ.

ಒಂದು ವರ್ಗಕ್ಕೆ ಮಾತ್ರ ಅರ್ತವಾಗೋ ಬಾಶೆಯನ್ನ ತಂತ್ರಜ್ನಾನದಲ್ಲಿ ಬಳಸಿ, ಆಡಳಿತ ಯಂತ್ರವನ್ನ ಬಹುಸಂಕ್ಯಾತ ಜನರಿಂದ ದೂರಮಾಡಲು ಹೊರಟಿರುವುದು ಎಶ್ಟು ಸರಿ? ದೂರದ ದೇಶದ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳಗೆ ತಂತ್ರಜ್ನಾನದಲ್ಲಿ ಕನ್ನಡದ ಬಳಕೆಯ ಪ್ರಾಮುಕ್ಯತೆ ಅರ್ತವಾದದ್ದು ನಮ್ಮ ಸರಕಾರಕ್ಕೆ ಏಕೆ ಅರ್ತವಾಗುತ್ತಿಲ್ಲ?

ಶುಕ್ರವಾರ, ನವೆಂಬರ್ 4, 2011

ನಮ್ಮ ತ್ಯಾಗದಿಂದಲೇ ಅಲ್ಲವೇ ನಮ್ಮ ಮೆಟ್ರೋ ಓಡುತ್ತಿರುವುದು?

ನಮ್ಮ ಮೆಟ್ರೋನ ಬಗ್ಗೆ ನವಂಬರ್ 3 ರಂದು ಡೆಕನ್ ಹೆರಾರ್ಡ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿದೆ, ಈ ವರದಿಯ ಪ್ರಕಾರ, ನಮ್ಮ ಮೆಟ್ರೊ, ಬೆಂಗಳೂರು ನಗರ ಪಾಲಿಕೆಯ ಹಲವಾರು ಜಾಗಗಳನ್ನ ಬಿಟ್ಟಿಯಾಗಿ ವಶಪಡಿಸಿಕೊಂಡು ಅಲ್ಲಿ ಕಾಮಗಾರಿಯನ್ನ ನಡೆಸುತ್ತಿದೆ, ಪಾಲಿಕೆಯ ಸುಮಾರು 65 ರಿಂದ 70 ಸಾವಿರ ಅಡಿಗಳಶ್ಟು ಜಾಗ ಮತ್ತು ಅಲ್ಲಿ ಇರುವ ಕಟ್ಟಡ ನಮ್ಮ ಮೆಟ್ರೋ ಪಾಲಾಗಿದೆ. ಈ ಆಸ್ತಿ ನೂರಾರು ಕೋಟಿ ಬೆಲೆಬಾಳುತ್ತದೆ.

ಇವಿಶ್ಟೇ ಅಲ್ಲದೇ ನಮ್ಮ ಮೆಟ್ರೊಗೆಂದು ನಗರದ ಹಲವಾರು ಕಡೆಗಳಲ್ಲಿ ನಮ್ಮ ನಾಡಿನ ಜನರು ಮಾರುಕಟ್ಟೆಯ ದರಕ್ಕಿಂತ ಕಡಿಮೆ ಹಣಕ್ಕೆ ತಮ್ಮ ಜಾಗವನ್ನ ಕೊಟ್ಟಿದ್ದಾರೆ, ಹಲವಾರು ಅಂಗಡಿ ಮುಂಗಟ್ಟುಗಳನ್ನ ನಮ್ಮ ಮೆಟ್ರೋಗೆಂದು ಮುಚ್ಚಿಸಲಾಗಿದೆ. ಬೆಂಗಳೂರಿನಾದ್ಯಂತ ನಡೆಯುತ್ತಿರುವ ಮೇಟ್ರೋ ಕಾಮಗಾರಿಯಿಂದ ಉಂಟಾಗಿರುವ ಟ್ರಾಪಿಕ್ ವೈಪರಿತ್ಯವನ್ನು ದಿನ ನಿತ್ಯ ನಮ್ಮ ಜನ ಅನುಬವಿಸುತ್ತಿದ್ದಾರೆ.. ಇಂತಹ ನಮ್ಮ ನಾಡಿನ ಜನರ ತ್ಯಾಗದಿಂದಲೇ ನಮ್ಮ ಮೆಟ್ರೊ ಬಿಡುಗಡೆಯಾಗಿ ಓಡಾಡಲು ಸಾದ್ಯವಾಗಿರುವುದು ಅಲ್ಲವೇ? ಆದರೆ ಇವ್ಯಾವು ಲೆಕ್ಕಕ್ಕೆ ಇಲ್ಲವೆಂಬಂತೆ ನಮ್ಮ ಮೆಟ್ರೊ ಬೆಂಗಳೂರಿಗರನ್ನ ನಡೆಸಿಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ..

ನಮ್ಮ ನಾಡಿನ ಜನರ ತ್ಯಾಗವಿದ್ದರೂ ಸಹ ನಮ್ಮ ನಾಡಿನ ಬಾಶೆಗೆ ಮನ್ನಣೆ ಸಿಗಬೇಕು, ನಮ್ಮ ನಾಡಿನ ಜನರಿಗೆ ಉದ್ಯೋಗ ಸಿಗಬೇಕು ಎನ್ನುವುದನ್ನ ಬೇಡಿಕೊಳ್ಳುವ ಪರಿಸ್ತಿತಿಯನ್ನ ನಮ್ಮ ಮೆಟ್ರೋ ನ ಅದಿಕಾರಿಗಳು ನಿರ್ಮಿಸಿದ್ದಾರೆ. ನಮ್ಮ ನಾಡಿನ ಜನರ ಬಾಶಾ ಮತ್ತು ಉದ್ಯೋಗದ ಕಳಕಳಿಗೆ, ಮೆಟ್ರೊ ಅದಿಕಾರಿಗಳು ಉದ್ದಟ ತನ ತೋರುತ್ತಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಪರರಾಜ್ಯದಿಂದ ಬಂದು ನಮ್ಮ ಮೆಟ್ರೊನಲ್ಲಿ ಕೆಲಸ ಮಾಡುತ್ತಿರುವರುಗಳು ನಮ್ಮ ನಾಡು ನುಡಿ ವಿರುದ್ದವಾಗಿ ಮಾತನಾಡಿ ನಮ್ಮ ಸ್ವಾಬಿಮಾನವನ್ನ ಕೆರಳಿಸುವಂತೆ ಮಾಡುತ್ತಿದ್ದಾರೆ. ಕನ್ನಡ ವಿರೋದಿ ಮೆಟ್ರೊ ಅದಿಕಾರಿಗಳು ಮತ್ತು ಪರರಾಜ್ಯದಿಂದ ಬಂದು ಕನ್ನಡ ವಿರೋದಿತನ ತೋರುತ್ತಿರುವ ಮೆಟ್ರೊ ಕೆಲಸಗಾರರಿಗೆ ದಿಕ್ಕಾರವಿರಲಿ... ನಮ್ಮ ನಾಡಿನ ಜನರ ತ್ಯಾಗಕ್ಕೆ ತಕ್ಕ ಮಾನ್ಯತೆ ಸಿಗಲಿ