ಮೇಲಿರುವ ಎರಡೂ ಚಿತ್ರಗಳು ಕನ್ನಡ ಪತ್ರಿಕೆಗಳಲ್ಲಿ ಸಾಗರೋತ್ತರ ಬಾರತೀಯ ವ್ಯವಹಾರಗಳ ಸಚಿವಾಲಯದವರು ನೀಡಿರುವ ಜಾಹಿರಾತುಗಳು ಈ ಎರಡೂ ಜಾಹಿರಾತುಗಳ ಮೂಲಕ ಸಚಿವಾಲಯವು ಜನರಿಗೆ ಜಾಗ್ರುತಿ ಮೂಡಿಸುವುದರ ಜೊತೆಗೆ ಮುಕ್ಯವಾದ ಕೆಲವು ವಾಕ್ಯಗಳನ್ನು ಹಿಂದಿಯಲ್ಲಿ ಹೇಳಿ ಅದೇ ವಾಕ್ಯವನ್ನು ಕನ್ನಡದಲ್ಲಿ ಬರೆದಿದ್ದಾರೆ. ಹಿಂದಿಯನ್ನು ಕನ್ನಡದಲ್ಲಿ ಬರೆದಾಕ್ಷಣ ಅದು ಕನ್ನಡವಾಗುವುದೇ ಅತವಾ ಜನರಿಗೆ ಆ ವಾಕ್ಯದ ಅರ್ತ ಅರಿವಿಗೆ ಬರುವುದೇ? ಈ ರೀತಿ ಕನ್ನಡದಲ್ಲಿ ಹಿಂದಿಯ ವಾಕ್ಯವನ್ನು ಬರೆದು ಅತವಾ ಸಂಪೂರ್ಣವಾಗಿ ಹಿಂದಿಯಲ್ಲೇ ಬರೆದು ಕನ್ನಡ ಪತ್ರಿಕೆಗಳಲ್ಲ್ಲಿ ಪ್ರಕಟಿಸುತ್ತಿರುವುದು ಇದೇ ಮೊದಲೇನಲ್ಲ. ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಅತವಾ ಹಿಂದಿಯ ವಾಕ್ಯವನ್ನು ಕನ್ನಡದಲ್ಲಿ ಬರೆದ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.
ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ ತಪ್ಪುಗಳಲ್ಲ, ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೊದು ಗೊತ್ತಾಗದ ವಿಶಯವೇನಲ್ಲ, ಈ ವ್ಯವಸ್ತಿತ ಸ೦ಚು ನಿದಾನವಾಗಿ ಹಿಂದಿಯನ್ನು ಕರ್ನಾಟಕದಲ್ಲಿ ನುಗ್ಗಿಸುವ ಪ್ರಯತ್ನ ಎಂದು ಹೇಳಬಹುದು. ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ಸಿಗುವಂತೆ ಮಾಡಲೆಂದೇ ಇಂದು ಕೆಲವು ಕಡೆಗಳಲ್ಲಿ ಹಿಂದಿ ಬಳಸಿ, ಮುಂದೊಂದು ದಿನ ಸಂಪೂರ್ಣವಾಗಿ ಹಿಂದಿ ಬಳಸುವ ಹುನ್ನಾರ ನಡೆಸುತ್ತಿರುವುದು. ಇಂದು ಕೆಲವು ಜಾಹಿರಾತುಗಳಲ್ಲಿ ಹಿಂದಿಯನ್ನು ಹಾಕುತ್ತಿರುವವರು ಮುಂದೊಂದು ದಿನ ಎಲ್ಲಾ ಜಾಹಿರಾತುಗಳಲ್ಲಿ ಸಂಪೂರ್ಣ ಹಿಂದಿಯನ್ನು ಬಳಸಿ ಅದರ ಮೂಲಕ ಹಿಂದಿ ಬಲ್ಲವರಿಗೆ ಮಾತ್ರ ಸೌಲಬ್ಯಗಳು ದೊರಕುವಂತೆ ಆದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ.
ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ ಹಿಂದಿಯೇತರ ನಾಡಿಗೆ ಅಕ್ರಮವಾಗಿ ಹಿಂದಿಯನ್ನು ನುಗ್ಗಿಸಿ ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಹಿಂದಿಯೇತರರೂ ಹಿಂದಿ ಬಾಶಿಕರಶ್ಟೆ ಹಕ್ಕನ್ನು ಹೊಂದಿಲ್ಲವೇ?