ತುಂಬ ದಿನದಿಂದ ವಂಡರ್ ಲಾ ಗೆ ಹೋಗ್ಬೇಕು ಅಂತ ಅಂದ್ಕೊಂಡಿದ್ದೆ ಅದು ನೆನ್ನೆ ನೆರವೇರ್ತು. ನಮ್ಮ ಮನೆಯವರು ಮತ್ತು ನನ್ನ ಸ್ನೇಹಿತರ ಮನೆಯವರು ಜೊತೆಗೆ ಹೋಗಿದ್ವಿ,
ಅಲ್ಲಿ ಸ್ಕೈ ವೀಲ್ ನಲ್ಲಿ ಹೋಗೋಕ್ಕೆ ಅಂತ ೧೩ ಅಂತಸ್ತಿನ ಮಹಡಿಗೆ ಲಿಫ಼್ಟ್ ನಲ್ಲಿ ಹೋದ್ವಿ. ಆಟವನ್ನ ಮುಗಿಸಿ ವಾಪಸ್ ಬರಲು ಮತ್ತೆ ಲಿಪ್ಟ್ ಬಳಿ ಬಂದಾಗ ನಾವು, ಮತ್ತೆ ನಮ್ ಜೊತೆ ಲಿಪ್ಟ್ ಗಾಗಿ ಕಾಯ್ತಿದ್ದ ಚಿಕ್ಕ ಮಕ್ಕಳ ಗುಂಪೊಂದಿತ್ತು. ಅಲ್ಲೊಬ್ಬ ಸೆಕ್ಯುರಿಟಿ ನವನು ನಿಂತಿದ್ದ, ಲಿಪ್ಟ್ ಎಶ್ಟು ಹೊತ್ತಾದ ಮೇಲೂ ಕೆಳಗಿನಿಂದ ೧೩ ನೆ ಅಂತಸ್ತಿಗೆ ಬರಲೇ ಇಲ್ಲ, ಯಾಕಪ್ಪ ಲಿಪ್ಟ್ ಮೇಲಕ್ಕೆ ಬರ್ತಾನೇ ಇಲ್ಲ, ಏನಾದ್ರು ತೊಂದರೆಯಾಗಿದಿಯ ಅಂತ ಆ ಸೆಕ್ಯುರಿಟಿನವನನ್ನ ಕೇಳಿದಕ್ಕೆ, ಅವನು ಹಿಂದಿ.... ಹಿಂದಿ ಅಂದ, ಸರಿ ನಾವು ಏನಪ್ಪ ನಿಮ್ಮ ವಂಡರ್ ಲಾ ಗೆ ಬಂದು ಏನು ತೊಂದರೆ ಇಲ್ದೇ ವಾಪಸ್ ಹೋಗ್ಬೇಕಾದ್ರೆ ಹಿಂದಿ ಕಲಿತು ಬರ್ಬೇಕಾ ಅಂದ್ವಿ. ಅದುಕ್ಕೆ ಅವನು ಹಿಂದಿ ರಾಶ್ಟ್ರಬಾಶೆ , ಬಾರತದಲ್ಲಿ ಇರ್ಬೇಕು ಅಂದ್ರೆ ಹಿಂದಿ ಗೊತ್ತಿರಬೇಕು, ಇದು ಬಾರತ... ಇದು ಬಾರತ.... ಅಂತ ಹೇಳ್ತಿರ್ಬೇಕಾದ್ರೆ, ನಮ್ ಜೊತೆ ಇದ್ದ ಮಕ್ಕಳ ಗುಂಪಿಂದ ಒಂದು ಚಿಕ್ಕ ಹುಡುಗಿ(ಸುಮಾರು ೫ ನೆ ತರಗತಿ ಓಡ್ತಿರಬೇಕು) ಮುಂದೆ ಬಂದು"ಬಾರತದಲ್ಲಿ ಕನ್ನಡನೂ ಇದೆ ಹಿಂದಿ ಮಾತ್ರ ಅಲ್ಲ! "ಅಂತ ಹೇಳಿದ್ಲು. ಬಾರತದಲ್ಲಿ ಕನ್ನಡನೂ ಇದೆ ಅನ್ನೊದು ಆ ಪುಟ್ಟ ಹುಡುಗಿಗೆ ಕೂಡ ಗೊತ್ತಿದೆ, ಆದ್ರೆ ಇದು ನಮ್ಮ ದೇಶದ ಕೇಂದ್ರ ಸರಕಾರಕ್ಕೆ ಮತ್ತು ಹಿಂದಿನ ರಾಶ್ಟ್ರಬಾಶೆ ಅಂತ ಹೇಳೊ ಹಿಂದಿಯನ್ಸ್ ಗಳಿಗೆ ಗೊತ್ತಿಲ್ವಲ್ಲ.
ನಿಜವಾಗಿಯೂ ಹಿಂದಿಯೇತರರ ಮೇಲೆ ಹಿಂದಿಹೇರಿಕೆ ಮಾಡೋ ಕೇಂದ್ರ ಸರಕಾರ ಮತ್ತು ಒಂದಿಶ್ಟು ಜನ ಹಿಂದಿಯನ್ಸ್ ಗಳು ಹಿಂದಿನ ಸುಳ್ಳ್ ಸುಳ್ಳಾಗಿ ರಾಶ್ಟ್ರಬಾಶೆ ಅಂತ ಹೇಳ್ಕೊಡು ತಿರುಗ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಮತ್ತು ಹಿಂದಿ ರಾಶ್ಟ್ರಬಾಶೆ ಅನ್ನೊರಿಗೆಲ್ಲಾ ನಾವು ಕೊಡಬೇಕಾದ ಒಂದೇ ಒಂದು ಉತ್ತರ... ಬಾರತದಲ್ಲಿ ಕನ್ನಡನೂ ಇದೆ. ಹಿಂದಿ ಮಾತ್ರ ಅಲ್ಲ.