ಶುಕ್ರವಾರ, ಏಪ್ರಿಲ್ 15, 2011

ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?


ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ. ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ ಸಂಭಂದವಿಲ್ಲದವರು. ಇದೀಗ ಇದೇ ಏಪ್ರಿಲ್ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ. ಯಾವೂದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಗ್ ಹೇಳಲಾಗಿದೆ.

ಗುಲ್ಬರ್ಗ ಉತ್ಸವದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಗುಲ್ಬರ್ಗ ಜಿಲ್ಲೆಯ ಒಬ್ಬೇ ಒಬ್ಬ ಕಲಾವಿದನಿದ್ದಂತಿಲ್ಲ! ಗುಲ್ಬರ್ಗ ಜಿಲ್ಲೆ ಯಾವುದೇ ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ? ಜೊತೆಗೆ ಶಿವರಾಜ್ ಕುಮಾರ್, ಐಂದ್ರಿತಾ ರೇ ರವರನ್ನ ಬಿಟ್ರೆ ಇನ್ನೊಬ್ಬ ಕರ್ನಾಟಕದ ಕಲಾವಿದನಿದ್ದಂತಿಲ್ಲ. ಕಾರ್ಯಕ್ರಮದಲ್ಲಿ ಕಾಟಾಚಾರಕ್ಕೆ ಕರ್ನಾಟಕದ ಕಲಾವಿದರನ್ನ ಕರೆಸಿ ಯಾರೋ ಗುಲ್ಬರ್ಗ ಗೂ ಕರ್ನಾಟಕಕ್ಕೂ ಹತ್ತಿರದ ಸಂಬಂಧವಿರಲಿ ದೂರದ(10000 ಕಿಲೋಮೀಟರ್ ಗಿಂತ ಹೆಚ್ಚು ಅಂದುಕೊಳ್ಳಬಹುದು) ಸಂಬಂದವೂ ಇಲ್ಲದ ಹಿಂದಿಯ ಸುನಿದಿ ಚೌಹಾನ್, ಮಿಕಾ ಸಿಂಗ್, ಶಕ್ತಿಕುಮಾರ್, ಅದ್ನಾನ್ ಸಾಮಿ,ವಾರಸಿ ಸಹೋದರರಿಗೆ ರಾಜಗಂಬಳಿ ಹಾಸಿ ಸ್ವಾಗತ ನೀಡಲಾಗಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಸರಕಾರವೇ ಹಿಂದಿ ಭಾಷೆಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರುವುದು ದುರಂತ!!!!

ಗುಲ್ಬರ್ಗ ಉತ್ಸವ, ಗುಲ್ಬರ್ಗ ಜಿಲ್ಲೆಯ ಕಲೆ ಸಂಸ್ಖೃತಿಯ ಪ್ರತೀಕವಾಗಬೇಕಾಗಿತ್ತು. ಗುಲ್ಬರ್ಗ ಜಿಲ್ಲೆಯ ಕಲಾವಿದರಿಗೆ, ಕಲೆಗೆ ಪ್ರಾಮುಖ್ಯತೆ ದೊರೆಯಬೇಕಾಗಿತ್ತು.ಆದರೆ ಆಗಿದ್ದೇ ಬೇರೆ. ಖಾಸಗಿಯಾಗಿ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಕಾರ್ಯಕ್ರಮ ನಡೆಸಿದ್ದರೆ ಯಾರೂ ತೆಲೆಕೆಡೆಸಿಕೊಳ್ಳೊ ಅವಶ್ಯಕತೆ ಇರ್ತಿರ್ಲಿಲ್ಲ, ಆದ್ರೆ ನಮ್ಮ ನಾಡಿನ ಕಲೆ/ಕಲಾವಿದರಿಗೆ ಉತ್ತೇಜನ ನೀಡಬೇಕಾದ ಸರಕಾರವೇ ನಮ್ಮ ನಾಡಿನ ಕಲೆ/ಕಲಾವಿರರನ್ನ ಮೂಲೆಗುಂಪು ಮಾಡಿ ಹೊರ ರಾಜ್ಯದ ಕಲೆ/ ಕಲಾವಿದರಿಗೆ ಪ್ರಾಮುಖ್ಯತೆ ನೀಡೋದು ಎಷ್ಟು ಸರಿ? ಕರ್ನಾಟಕದವರ ತೆರಿಗೆ ಹಣದಲ್ಲಿ ಈ ರೀತಿ ಕಾರ್ಯಕ್ರಮ ನಡೆಸೋದ್ರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ, ಕನ್ನಡಕ್ಕೆ ಏನು ಉಪಯೋಗ?

ಕೊನೆಯದಾಗಿ- ಸರಕಾರ ಕೋಟಿ ಕೋಟಿ ಖರ್ಚು ಮಾಡಿ ಕನ್ನಡ ಸಮ್ಮೇಳನಗಳನ್ನ ಆಯೋಜನೆ ಮಾಡುತ್ತೆ ಜೊತೆಗೆ ಕನ್ನಡ ಅಭಿವ್ರುದ್ದಿ ಪ್ರಾಧಿಕಾರ ಗಡಿನಾಡ ಉತ್ಸವ ನಡೆಸಿ ಕನ್ನಡದ ವಾತಾವರಣ ನಿರ್ಮಾಣ ಮಾಡ್ತಿವಿ ಅನ್ನುತ್ತೆ. ಇನ್ನೊಂದೆಡೆ ಅದೇ ಸರಕಾರ ಉತ್ಸವ ನಡೆಯೋ ಪ್ರದೇಶಗಳು ಕರ್ನಾಟಕದಲ್ಲೇ ಇಲ್ಲವೆಂಬಂತೆ, ನಮಗೆ ಸಂಬಂಧವಿಲ್ಲದ ಕಾರ್ಯಕ್ರಮವನ್ನ ಆಯೋಜಿಸಿ ನಾಡಿನ ಜನರನ್ನು ನಾಡಿನಿಂದಲೇ ದೂರವಿಡುವಂತೆ ಮಾಡುತ್ತಿದೆ. ಒಟ್ಟಿನಲ್ಲಿ ಇಲ್ಲಿ ಪೋಲಾಗುತ್ತಿರುವುದು ಕರ್ನಾಟಕದ ಜನರ ತೆರಿಗೆ ಹಣ ಮಾತ್ರ.


ಉತ್ಸವದ ವೆಬ್ ವಿಳಾಸ- http://www.gulbargafestival.com/

1 ಕಾಮೆಂಟ್‌:

  1. ಅರುಣ್, ನಿಮ್ಮ ಮಾತು ಅಕ್ಷರಶಃ ಸತ್ಯ. ಇವರು ಕನ್ನಡ ಸಮ್ಮೇಳನಗಳನ್ನು ಆಯೋಜಿಸಿ ಅಲ್ಲಿಯೂ ತಮ್ಮ ರಾಜಕೀಯದ ಪುಂಗಿ ಓದುತ್ತಾರೆ....ಬಾಯಲ್ಲಿ ಕನ್ನಡ, ಕರ್ನಾಟಕ....ಇವರದು ಬರೀ ನಾಟಕ....ಅನ್ನೋ ಹಾಗಿದೆ ಪರಿಸ್ಥಿತಿ. ಕನ್ನಡಿಗರ ಕೋಟಿಗಟ್ಟಲೆ ತೆರಿಗೆ ಹಣ ಲೂಟಿ ಆಗ್ತಿದೆ ಅಷ್ಟೇ...ತಮ್ಮೀ ಕಾಳಜಿ ಸಮಯೋಚಿತ

    ಪ್ರತ್ಯುತ್ತರಅಳಿಸಿ