ಶನಿವಾರ, ಜುಲೈ 27, 2013

ಕರ್ನಾಟಕದಲ್ಲಿ ಬ್ಯಾಂಕುಗಳು ಕನ್ನಡದಲ್ಲಿ ಸೇವೆ ನೀಡುವುದು ನಿಯಮ

ನಾವುಗಳು ಬ್ಯಾಂಕುಗಳಿಗೆ ಹೋದಾಗ ದುಡ್ಡು ತೆಗೆಯಲು/ತುಂಬಲು ಚಲನ್ ಬರೆದುಕೊಡಿ ಎಂದು ಸಹಾಯ ಕೇಳುವ ಪ್ರಸಂಗಗಳನ್ನು ಗಮನಿಸಬಹುದು. ಇದೇ ಪ್ರಸಂಗ ಏಟಿಎಂಗಳಲ್ಲೂ  ಸಾಮಾನ್ಯವಾಗಿದೆ. ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವ ನಿಯಮವಿದ್ದರೂ  ಈ ನಿಯಮಗಳ ಅರಿವಿಲ್ಲದೆ ವಿದ್ಯಾವಂತರಾಗಿದ್ದರೂ‌ ಸಹ ಅವಿದ್ಯಾವಂತರಾಗುವ ಹಾಗೆ ಆಗಿದೆ. ಬ್ಯಾಂಕುಗಳು ಜನರ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವಂತೆ ರೂಪಿಸಿರುವ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಬ್ಯಾಂಕಿನ ವ್ಯವಹಾರದಲ್ಲಿ ಪಾರದರ್ಶಕತೆ ಸಾಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನ
(RBI) ನಿಯಮಗಳಿಗೆ ಒಳಪಟ್ಟಿರುತ್ತವೆ. RBI.ಬ್ಯಾಂಕಿನ ವಹಿವಾಟುಗಳು ಸರಿಯಾಗಿ ಮತ್ತು
ಸುಗಮವಾಗಿ ನಡೆಯಲೆಂದು ಮತ್ತು ಗ್ರಾಹಕರ ಹಿತ ಕಾಯಲೆಂದು ಹಲವು ನಿಯಮಗಳನ್ನು ರೂಪಿಸಿದೆ.ಈ ನಿಯಮಗಳಿಗೆ ಎಲ್ಲಾ ಖಾಸಗೀ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಬದ್ದವಾಗಿರಬೇಕು. RBI ನಿಯಮ ರೂಪಿಸುವುದರ ಜೊತೆಗೆ ಬ್ಯಾಂಕುಗಳು ನಿಯಮಗಳಿಗೆ ಬದ್ದವಾಗಿ ನಡೆದುಕೊಳ್ಳುತ್ತಿವೆಯೆ
ಎನ್ನುವುದಕ್ಕೆ ಕಣ್ಗಾವಲು ಇಟ್ಟಿರುತ್ತದೆ.

RBIನ ಮಾಸ್ಟರ್ ಸರ್ಕ್ಯುಲೇಶನ್ ಆನ್ ಕಸ್ಟಮರ್ ಸರ್ವಿಸ್ ಇನ್ ಬ್ಯಾಂಕ್ಸ್ (Master
Circular on Customer Service in
Banks<http://www.rbi.org.in/scripts/BS_ViewMasterCirculars.aspx?Id=7363&Mode=0>)
ಎನ್ನುವ ನಿಯಮಾವಳಿಯು ಗ್ರಾಹಕರ ಹಿತ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ
ನಿಯಮಾವಳಿಯಲ್ಲಿ ಗ್ರಾಹಕರ ಪ್ರತಿನಿತ್ಯದ ವಹಿವಾಟುಗಳಲ್ಲಿ ಉಪಯೋಗವಾಗುವಂತಹಾ ಹಲವು ಅಂಶಗಳಿವೆ.ಇದರಲ್ಲಿ ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹಸಬೇಕು ಎನ್ನುವಂತಹಾ ಪ್ರಮುಖವಾದ ಅಂಶಗಳಿವೆ. ಈ ನಿಯಮದಲ್ಲಿ ಹೇಳಿರುವಂತೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಉಪಯೋಗವಾಗಲು ಚಲನ್ ಗಳು, ಖಾತೆ ತೆರೆಯುವ/ ಮುಚ್ಚುವ ಅರ್ಜಿಗಳು ಸೇರಿದಂತೆ ಇನ್ನಿತರೇ ಎಲ್ಲಾ ರೀತಿಯ ಮುದ್ರಿತ ಅರ್ಜಿಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸಬೇಕು ಜೊತೆಗೆ ಚೆಕ್ ಗಳು ಮತ್ತು ಚಲನ್ ಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಬರೆಯುವ ಅವಕಾಶ ಗ್ರಾಹಕರ ಹಕ್ಕಾಗಿದೆ, ಒಟ್ಟಾರೆ ಎಲ್ಲಾ ರೀತಿಯ ಗ್ರಾಹಕ ಸೇವೆಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸುವುದು ಪ್ರತಿಯೊಂದು ಬ್ಯಾಂಕಿನ ಕರ್ತವ್ಯವಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡುವುದು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋಂದು ಬ್ಯಾಂಕಿನ ಕರ್ತವ್ಯವಾಗಿದೆ.

ಮೇಲೆ ಹೇಳಿದೆ RBI ನ ನಿಯಮಾನುಸಾರ ಜನರು ಯಾವುದೇ ಅಡೆತಡೆಯಿಲ್ಲದೇ ಕರ್ನಾಟಕದಲ್ಲಿ
ಕನ್ನಡದಲ್ಲೇ ಬ್ಯಾಂಕಿನೊಂದಿಗೆ ವ್ಯವಹರಿಸಬಹುದು. ಕರ್ನಾಟಕದಲ್ಲಿ ಯಾವುದಾರರೂ
ಬ್ಯಾಂಕಿನಲ್ಲಿ ಕನ್ನಡದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸದಿದ್ದರೆ ಅಥವಾ ಕನ್ನಡದಲ್ಲಿ
ಗ್ರಾಹಕ ಸೇವೆ ನೀಡದಿದ್ದರೆ ಅದು RBi ನಿಯಮದ ಉಲ್ಲಂಘನೆಯಾಗುವುದು, ಈ ಬಗ್ಗೆ ಆಯಾ ಬ್ಯಾಂಕಿನ ಮೇಲಿನ ಅಧಿಕಾರಿಗಳಿಗೆ ದೂರು ನೀಡುವುದರ ಜೊತೆಗೆ ನಿಯಮ ಉಲ್ಲಂಘನೆಯ ಬಗ್ಗೆ RBI ನ ಗಮನಕ್ಕೇ ಕೂಡ ತರಬಹುದಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಮಾತನಾಡಿದ್ದು, ಬ್ಯಾಂಕುಗಳ ಸಮಿತಿ ಸಭೆಯಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡಬೇಕೆಂದು ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ

ಗುರುವಾರ, ಜುಲೈ 11, 2013

ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನ ಕೊನೆಗೊಳ್ಳಲಿ

ಸಾರ್ವಜನಿಕರ ಹೆಚ್ಚು ಸಂಪರ್ಕವಿರುವ ಇಲಾಖೆಗಳಲ್ಲಿ ಭಾರತೀಯ ಅಂಚೆ ಇಲಾಖೆಯೂ ಒಂದು. ನಾಗರೀಕರು ಹಳ್ಳಿಯಲ್ಲೇ ಇರಲಿ ನಗರಗಳಲ್ಲೇ ಇರಲಿ ಒಂದಲ್ಲ ಒಂದು ರೀತಿಯಲ್ಲಿ ಈ ಇಲಾಖೆಯ ಸೇವೆಯನ್ನು ಪಡೆದಿರುತ್ತಾರೆ.
ಅಂಚೆ ಇಲಾಖೆಯು ಕರ್ನಾಟಕದಾದ್ಯಂತ ವ್ಯಾಪಿಸಿರುವುದರಿಂದ ಕರ್ನಾಟಕದ ಜನರ ಭಾಷೆಯಾದ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದು ಸೇವೆಯನ್ನು ಪಡೆಯುವ ನಾಗರೀಕರಿಗೆ ಇಲಾಖೆಯೊಂದಿಗಿನ ವ್ಯವಹಾರ ಸುಲಭವಾಗಿಸುತ್ತದೆ

ಆದರೆ ಇತರೇ ಕೇಂದ್ರ ಸರಕಾರಗಳ ಮನಸ್ಥಿತಿಯೇ ಅಂಚೆ ಇಲಾಖೆಯಲ್ಲೂ ಪ್ರತಿಧ್ವನಿಸುತ್ತಿದೆ. ಇತರೇ ಕೇಂದ್ರ ಸರಕಾರದ ಇಲಾಖೆಯಂತೆಯೇ ಕರ್ನಾಟಕದಲ್ಲಿ ಕನ್ನಡದಲ್ಲಿ ಆಡಳಿತ ಮತ್ತು ಸೇವೆ ನೀಡುವುದರ ಬಗ್ಗೆ ಅಂಚೆ ಇಲಾಖೆಯೂ ಸಹ ಬಹಳ ಹಗುರವಾದ ಭಾವನೆಯನ್ನು ಹೊಂದಿರುವಂತಿದೆ. ಕನ್ನಡದೆಡೆಗಿನ ಹಗುರ ಭಾವನೆಯು ಕರ್ನಾಟಕದ ಕೊಟ್ಯಾಂತರ ಕನ್ನಡಿಗರು ತೊಂದರೆಗೆ ಗುರಿಯಾಗುವಂತೆ ಮಾಡಿದೆ. ಕೇಂದ್ರ ಸರಕಾರದ ಹುಳುಕು ಭಾಷಾನೀತಿಯು ಕೇಂದ್ರ ಸರಕಾರದ ಇಲಾಖೆಗಳ ಕನ್ನಡ ವಿರೊಧಿ ನಿಲುವಿಗೆ ಕುಮ್ಮಕ್ಕು ನೀಡುತ್ತಿದೆ ಎಂದರೆ ತಪ್ಪಾಗಲಾರದು

ಅಂಚೆ ಇಲಾಖೆಯಲ್ಲಿ ದೊರೆಯುವ ಪಾರಂಗಳು ಸೇರಿದಂತೆ ಇತರೇ ಸೇವೆಗಳಲ್ಲಿ ಕನ್ನಡ ಇಲ್ಲದ ಬಗ್ಗೆ ಕನ್ನಡ ಗ್ರಾಹಕ ಕೂಟದ ಗೆಳೆಯರು ಅನೇಕ ದೂರುಗಳನ್ನು ನೀಡಿದ್ದೇವೆ. ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲದಿರುವುದು ದುರಂತವೇ ಸರಿ.

ಅಂಚೆ ಇಲಾಖೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಅನೇಕ ರೀತಿಯ ದೂರುಗಳ ಅನ್ವಯ ಅಂಚೆ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲು ಹೋದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪ್ರತಿನಿಧಿಗಳ ಜೊತೆಗೆ ಅಂಚೆ ಇಲಾಖೆಯ ಅಧಿಕಾರಿಯು ಉದ್ದಟತನ ತೊರಿದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಕೇಂದ್ರ ಸರಕಾರದ ಇಲಾಖೆಗಳು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರವಾದ ಭಾವನೆ ಹೊಂದಿರುವುದು ನಿಜಕ್ಕೂ ಆತಂಕ ಪಡುವಂತಹದ್ದಾಗಿದೆ. ಈ ಬಗ್ಗೆ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಇಲಾಖೆಗಳು ಕನ್ನಡದಲ್ಲಿ ಸೇವೆ ನೀಡುವ ಮತ್ತು ಕರ್ನಾಟಕ ಸರಕಾರದ ಪ್ರತಿನಿಧಿಗಳ ಬಗ್ಗೆ ಹಗುರ ಭಾವನೆ ಹೊಂದಿರುವ ಮನಸ್ಥಿತಿಯ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ಕೇಂದ್ರ ಸರಕಾರದ ಇಲಾಖೆಗಳ ಉದ್ದಟತನವನ್ನು  ಕೊನೆಗಾಣಿಸಲಿ.

ಗುರುವಾರ, ಜೂನ್ 27, 2013

2 ಚಕ್ರದ ಗಾಡಿಗಳ ಮಾರುಕಟ್ಟೆಯಲ್ಲಿ ಕನ್ನಡ ಗ್ರಾಹಕ

ಭಾರತ ಎರಡು ಚಕ್ರ ವಾಹನ (2 wheeler)ತಯಾರಿಕೆ ಮತ್ತು ಮಾರಾಟದಲ್ಲಿ ಪ್ರಪಂಚದಲ್ಲೇ 2 ಸ್ಥಾನ ಪಡೆದುಕೊಂಡಿದೆ.. ಇತ್ತೀಚಿನ ವರದಿಗಳಂತೆ ಹೀರೊ, ಹೊಂಡಾ , ಬಜಾಜ್ ಮತ್ತು ಟಿವಿಎಸ್ ಕಂಪನಿಗಳು ಮಾರುಕಟ್ಟೆಯಲ್ಲಿ ಮುಂದಿವೆ..ಇದೀಗ ಹೊರದೇಶದ ಕಂಪನಿಗಳು ಭಾರತದಲ್ಲಿ ವಾಹನ ಮಾರಾಟಕ್ಕೆ ಕೈಹಾಕಿದ್ದು ಹಾರ್ಲೆ ಡೇವಿಡ್ಸನ್ ನಂತಹಾ ಹತ್ತಾರು ಲಕ್ಷ ರೂಪಾಯಿ ಬೆಲೆ ಬಾಳುವ ಗಾಡಿಗಳು ಭಾರತದಲ್ಲಿ ಮಾರಾಟವಾಗುತ್ತಿವೆ.

ಆದರೆ ಈ ಮಾರುಕಟ್ಟೆಯಲ್ಲಿ ಒಬ್ಬ ಗ್ರಾಹಕನ ಭಾಷಾ ಹಕ್ಕುಗಳನ್ನು ಎಷ್ಟರ ಮಟ್ಟಿಗೆ ಗೌರವಿಸಲಾಗುತ್ತಿದೆ ಎಂದು ನೊಡಿದರೆ ನಮಗೆ ಕಾಣುವುದು ಒಂದು ದೊಡ್ಡ ಸೊನ್ನೆಯಷ್ಟೆ! ಬುಕ್ಕಿಂಗ್ ನಿಂದ ಹಿಡಿದು, ಸಾಲಕ್ಕೆ ಸಂಬಂಧಿಸಿದ ವಿಷಯಗಳು, ಗಾಡಿ ಕೊಂಡಿದ್ದಕ್ಕೆ ಕೊಡುವ ರಶೀತಿ, ಹೇಗೆ ಬಳಸಬೇಕೆಂದು ನೀಡುವ ಮ್ಯಾನುಯಲ್ ,ಗ್ಯಾರಂಟಿ, ವಾರಂಟಿ ಸೇರಿದಂತೆ ಅನೇಕ ವಿಷಯಗಳಲ್ಲಿ ಕನ್ನಡವನ್ನು ಕೈಬಿಟ್ಟಿರುವುದು ಕಾಣುತ್ತಿದೆ.

ಈ ಬಗ್ಗೆ ಕಂಪನಿಗಳನ್ನು ಕೇಳಿದರೆ ಭಾರತದಲ್ಲಿ ಅಷ್ಟು ಭಾಷೆಗಳಿವೆ ಇಷ್ಟು ಭಾಷೆಗಳಿವೆ ಎನ್ನುವ ಉತ್ತರ ಬರುತ್ತಾದರೂ, ಕರ್ನಾಟಕದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ಕನ್ನಡ  ಭಾಷೆಯಲ್ಲಿ ಎಲ್ಲಾ ಸೇವೆ ಪಡೆಯುವ ಹಕ್ಕಿದೆ ಎನ್ನುವ ಮಾತು ಕೇಳಿಬರುವುದಿಲ್ಲ. ಇದರ ಜೊತೆಗೆ ಕರ್ನಾಟಕದಲ್ಲಿರುವ ಮಾರುಕಟ್ಟೆಯೂ ಪ್ರತಿ ತಿಂಗಳೂ ನೂರಾರು ಕೋಟಿ ಲಾಭಕೊಡುವಂತಿದ್ದರೂ ಕನ್ನಡದ ಗ್ರಾಹಕರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ

ಕರ್ನಾಟಕದಲ್ಲಿ 2 ವೀಲರ್ ಗಾಡಿಗಳ ಮಾರುಕಟ್ಟೆ ಎಷ್ಟಿದೆ? ಕನ್ನಡದಲ್ಲಿ ಸೇವೆ ನೀಡಲು ಆಗದಿರುವಸ್ಟು ಚಿಕ್ಕದೇ ನಮ್ಮ ರಾಜ್ಯದ ಮಾರುಕಟ್ಟೆ? ಎನ್ನುವುದನ್ನು ಇತ್ತೀಚಿನ ಮಾಹಿತಿಗಳ ಆಧಾರದಲ್ಲಿ ಒಮ್ಮೆ ನೊಡಿ, ನಮ್ಮ ರಾಜ್ಯದ ಮಾರುಕಟ್ಟೆಯ ಬಗ್ಗೆ ತಿಳಿಯೊಣ...

ಭಾರತದಲ್ಲಿ ತಿಂಗಳಿಗೆ ಮಾರಾಟವಾಗುವ 2 ಚಕ್ರ ಗಾಡಿಗಳ ಸಂಖ್ಯೆ ಸುಮಾರು 12 ಲಕ್ಷ, ಒಂದು 2 ಚಕ್ರದ ಗಾಡಿ ಬೆಲೆ ಆವೆರೇಜ್ 50000 ( 50 ಸಾವಿರ ಕಡಿಮೆನೇ, ಗಾಡಿಗಳ ಬೆಲೆ ಈಗ 1 ಲಕ್ಷದ ಆಸುಪಾಸಿನಲ್ಲಿದೆ)ಅಂತ ಇಟ್ಟುಕೊಂಡ್ರೆ, ಸುಮಾರು 6000 ಕೊಟಿ ರೂಪಾಯಿಯಷ್ಟು ಹೊಸ ಗಾಡಿಗಳು ಮಾರಾಟವಾಗುತ್ತೆ! ಇನ್ನು ಸ್ಪೇರ್ಸ & ಸರ್ವಿಸ್ ನಲ್ಲಿ ಸುಮಾರು 2000 ಕೋಟಿ ಅಂದುಕೊಂಡ್ರು ಒಟ್ಟಾರೆ ಕಡಿಮೆ ಅಂದ್ರು ತಿಂಗಳಿಗೆ 8000 ಕೋಟಿ ವಹಿವಾಟು ನಡೆಯುತ್ತೆ.

ಇನ್ನು ಕರ್ನಾಟಕದ ವಿಷಯಕ್ಕೆ ಬಂದ್ರೆ ಈ 8000 ಕೋಟಿಯಲ್ಲಿ, ಕರ್ನಾಟಕದ ಜನ ಸಂಖ್ಯೆ ಮತ್ತು ಕೊಳ್ಳುವ ಸಾಮರ್ಥ್ಯದ ಆಧಾರದಲ್ಲಿ, ಕರ್ನಾಟಕದ್ದು ಕಡಿಮೆ ಅಂದ್ರು 5-8% ಪಾಲಿರಬಹುದು. ಕಡಿಮೆ ಅಂದ್ರು ಸುಮಾರು 500 ಕೋಟಿ ರೂಗಳಷ್ಟು ವ್ಯಾಪಾರ ಕನ್ನಡಿಗರಿಂದಲೇ  ಆಗುತ್ತೆ.ಹೆಚ್ಚು ಲಾಭ ಕೊಡುವ ಉದ್ದಿಮೆಗಳಲ್ಲಿ ವಾಹನ ತಯಾರಿಕೆಯೊ ಒಂದು ಎನ್ನಲಾಗುತ್ತೆ. ಅಂದ್ರೆ ಕರ್ನಾಟಕದಿಂದ ಪ್ರತಿ ತಿಂಗಳು ನೂರಾರು ಕೊಟಿ ಲಾಭವಿದೆ.

ಮಾಹಿತಿಗಳ ಆಧಾರ- http://timesofindia.indiatimes.com/business/india-business/Honda-targeting-second-spot-in-Indian-two-wheeler-market/articleshow/20779991.cms

ಕನ್ನಡಿಗರಿಂದ ಪ್ರತಿ ತಿಂಗಳು ನೂರಾರು ಕೊಟಿ ಲಾಭವಿದ್ದರೂ ಎಷ್ಟು ಕಂಪನಿಗಳು Manual book ಸೇರಿದಂತೆ ಇನ್ನಿತರೇ , ಗಾಡಿಗೆ ಸಂಬಂಧಿಸಿದ ವಿಷಯಗಳನ್ನು ಜನರಿಗೆ ಉಪಯೊಗವಾಗಲಿ ಎಂದು ಕನ್ನಡದಲ್ಲಿ ತಿಳಿಸುತ್ತಿವೆ? ಪ್ರತಿ ತಿಂಗಳು  ಕೋಟಿ ಕೋಟಿ ಲಾಭ ಬೇಕು. ಆದ್ರೆ ಕರ್ನಾಟಕದ ಗ್ರಾಹಕರ ಹಕ್ಕುಗಳಿಗೆ ಬೆಲೆ ಇಲ್ಲ ಅನ್ನೊ ನಡೆ ಎಷ್ಟು ಸರಿ?

ಗ್ರಾಹಕ ಹಕ್ಕೊತ್ತಾಯವೊಂದೇ ಮದ್ದು...
ಗ್ರಾಹಕ ಹಕ್ಕುಗಳಲ್ಲಿ ತಾನು ಕೊಂಡ ವಸ್ತುವಿನ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗ್ರಾಹಕನಿಗಿದೆ(Right to be informed)ಈ ಹಕ್ಕಿನ ಆಧಾರದಲ್ಲಿ ನೀವು ಗಾಡಿ ತಗೊಂಡಾಗ Manual book ಕನ್ನಡದಲ್ಲಿ ಕೊಟ್ಟಿದ್ದಾರೆಯೇ ಎಂದು ನೊಡಿ? ಇಲ್ಲ ಅಂದ್ರೆ , ನಿಮಗೆ ವ್ಯಾಪಾರ ಮಾತ್ರಬೇಕಾ? ನಮ್ಮ ಹಕ್ಕು ಗಳಿಗೆ ಬೆಲೆ ಇಲ್ವ ಅನ್ನೊ ಪ್ರಶ್ನೆ ಕೇಳಿ manual book ಕನ್ನಡದಲ್ಲಿ ಕೊಡಲು ತಿಳಿಸಿ

ಶನಿವಾರ, ಮೇ 4, 2013

ಪ್ರಾದೇಶಿಕ ಪಕ್ಷಕ್ಕಿರಲಿ ನಿಮ್ಮ ಮತ

ಪ್ರಾದೇಶಿಕ ಚಿಂತನೆಯು ಕರ್ನಾಟಕ ರಾಜ್ಯದಲ್ಲಿ ಇಲ್ಲದಿರುವುದರ ಪರಿಣಾಮವಾಗಿ ಹಲವಾರು ರೀತಿಯಲ್ಲಿ ಕನ್ನಡ-ಕರ್ನಾಟಕ-ಕನ್ನಡಿಗರು ಅನ್ಯಾಯಕ್ಕೆ ಒಳಗಾಗಿದ್ದೇವೆ..ರಾಷ್ಟ್ರೀಯ ಪಕ್ಷಗಳಿಗೆ ಕನ್ನಡ ಕನ್ನಡಿಗ ಕರ್ನಾಟಕ ಪ್ರತಿ ಬಾರಿಯೂ ಎರಡನೇಯ ಆದ್ಯತೆ ಪಡೆದುಕೊಳ್ಳುತ್ತಿರುವು ಹಲವಾರು ವಿಶಯಗಳ ಮೂಲಕ ಸಾಭೀತಾಗಿದೆ.

ಭಾರತದ ಒಕ್ಕೂಟದಲ್ಲಿ ಕರ್ನಾಟಕಕ್ಕೆ ದೊರಕ ಬೇಕಾದ ನ್ಯಾಯವನ್ನು ದೊರೆಕಿಸಿಕೊಡಬೇಕಿದೆ, ಕನ್ನಡ ಗ್ರಾಹಕರಿಗೆ ಅನುಕೂಲವಾಗುವಂತೆ ಗ್ರಾಹಕ ಹಕ್ಕು ಕಾಯಿದೆಗಳು ಬದಲಾಗಬೇಕಿದೆ ಮತ್ತು ಭಾರತದ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನ ಮಾನ ದೊರೆಕಿಸುವುದರ ಜೊತೆಗೆ ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಹಲವು ಬದಲಾವಣೆಗಳು ಆಗಬೇಕಿದೆ ಈ ಎಲ್ಲಾ ಬದಲಾವಣೆಗಳು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯವಿದೆ..ಬೇರೆ ಚುನಾವನೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಮ್ಮ ಮತ ದಾನದ ಹಕ್ಕಿನ ಮೂಲಕ ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷಗಳಿಗೆ ಮತ ನೀಡೊಣ..

ಮಂಗಳವಾರ, ಏಪ್ರಿಲ್ 23, 2013

ಕರ್ನಾಟಕ ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಸ್ಥಿತಿಗತಿ

ಕರ್ನಾಟಕ ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಶನಿವಾರ 23-2-2013 ರಂದು, ವಿಕಾಸ ಸೌಧದಲ್ಲಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದವರು ಸಭೆಯೊಂದನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಸರಕಾರದ ಇ-ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರಕಾರಕ್ಕೆ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವ NIC ಸಂಸ್ಥೆಯವರು ಭಾಗವಹಿಸಿದ್ದರು. ಇದೇ ಸಭೆಯಲ್ಲಿ ನಾನೂ ಸಹ ಭಾಗವಹಿಸಿದ್ದೆನು, ಈ ಸಭೆಯಲ್ಲಿ ನಾನು ಅಧಿಕಾರಿಗಳಿಗೆ ನೀಡಿದ Presentation-

ಭಾನುವಾರ, ಫೆಬ್ರವರಿ 24, 2013

ಸರಕಾರಿ ವೆಬ್ ಸೈಟ್ ನಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ

ಕನ್ನಡ ಗ್ರಾಹಕ ಕೂಟದ ಗೆಳೆಯರು ಹಲವಾರು ದಿನಗಳಿಂದ ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಬಳಕೆ ಸರಿಯಾಗಿ ಆಗಿಲ್ಲವೆಂದು ಅನೇಕ ರೀತಿಯಲ್ಲಿ ದನಿಯೆತ್ತುತ್ತಿದ್ದೇವೆ. ಈ ವಿಶಯವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ದ್ದಿ ಪ್ರಾಧಿಕಾರದವರು ನಮ್ಮ ಕೂಟದ ಗೆಳೆಯರು ಈ ವಿಶಯವಾಗಿ ನೀಡುವ ದೂರಿನ ಅನ್ವಯ ಅನೇಕ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಅಭಿವೃದ್ದಿ ಪ್ರಾಧಿಕಾರದ ಸಹಾಯದೊಂದಿದೆ ಈ ವಿಶಯವನ್ನು ಮುಖ್ಯಮಂತ್ರಿಗಳೂ ಸೇರಿದಂತೆ ಸರಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು ಯಶಸ್ವಿಯಾಗಿದ್ದೇವೆ.

ಇದೇ ನಿಟ್ಟಿನಲ್ಲಿ ಶನಿವಾರ 23-2-2013 ರಂದು, ವಿಕಾಸ ಸೌಧದಲ್ಲಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದವರು  ಸರಕಾರಿ ವೆಬ್ ಸೈಟ್ ಗಳಲ್ಲಿ ಕನ್ನಡಕ್ಕೆ ಮೊದಲ ಪ್ರಾಮುಖ್ಯತೆ ಸಿಗಬೇಕೆಂದು ಸಭೆಯೊಂದನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಸರಕಾರದ ಇ-ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರಕಾರಕ್ಕೆ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವ NIC ಸಂಸ್ಥೆಯವರು ಭಾಗವಹಿಸಿದ್ದರು. ಕನ್ನಡ ಗ್ರಾಹಕ ಕೂಟದ ಗೆಳೆಯರು ಹಲವಾರು ಬಾರಿ ಸರಕಾರಿ ವೆಬ್ ಸೈಟ್ ಗಳ ಬಗ್ಗೆ ದೂರು ನೀಡುತ್ತಿರುವುದರಿಂದ ನನ್ನನ್ನು ಸಹ ಆಹ್ವಾನಿಸಿದ್ದರು. ಸಭೆಗೆ ಬಂದಿದ್ದ NIC ಮತ್ತು ಇ-ಆಡಳಿತದ ಅಧಿಕಾರಿಗಳು ಮತ್ತು NIC ಸಂಸ್ಥೆಯವರು ಅತೀ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುವ ಬರವಸೆಯನ್ನು ನೀಡಿದ್ದಾರೆ.

ಸರಕಾರದ ವೆಬ್ ಸೈಟ್ ಗಳಲ್ಲಿ ಕನ್ನಡದ ಸ್ಥಿತಿಯ ಬಗ್ಗೆ ನೀಡಿದ್ದ ವರದಿ ಹೀಗಿದೆ-


ಬುಧವಾರ, ಜನವರಿ 9, 2013

ಕರ್ನಾಟಕದಲ್ಲಿ ಕನ್ನಡ ಹಾಡು ಕೇಳೋದು ತಪ್ಪೇ?


ಕರ್ನಾಟಕದಲ್ಲೇ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ Cafe Coffee Day - Official ಕರ್ನಾಟಕದಲ್ಲೇ ಕನ್ನಡದ ಹಾಡುಗಳನ್ನು ಹಾಕುವುದಿಲ್ಲ ಎಂಬ ಧೋರಣೆ ತೋರಿಸಿದೆ .ಕಾಫೀ ಡೇ ತರಹದ ಅನೇಕ ಹೊರ ದೇಶದ ಕಂಪನಿಗಳು ಕರ್ನಾಟಕದಲ್ಲಿ ಅಂಗಡಿಗಳನ್ನು ತೆರೆದಿದ್ದು, ಕನ್ನಡ ಹಾಡು ಹಾಕಿ ಎಂದು ನೀಡಿದ ಸಲಹೆಯನ್ನು ಸ್ವೀಕರಿಸಿ, ಸಲಹೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಉತ್ತರಿಸಿ ಕನ್ನಡ ಹಾಡುನ್ನು ಹಾಕಲು ಕ್ರಮ ಕೈಗೊಂಡಿದ್ದಾರೆ. ಆದರೆ ನಮ್ಮದೇ ನಾಡಿನ ಕಾಫೀ ಡೇ ನವರು ಕನ್ನಡ ಹಾಡು ಹಾಕಿ ಎನ್ನುವ ಸಲಹೆಯನ್ನು ಸಾರಾ ಸಗಟು ತೆಗೆದುಹಾಕುತ್ತಿರುವುದು ದುರಂತವೇ ಸರಿ. ಇದೆಲ್ಲವುದರ ಜೊತೆಗೆ ಪೇಸ್ ಬುಕ್ಕಿನ ಕಾಫೀ ಡೇ ಯ ಅಧಿಕ್ರುತ ಪೇಜಿನಲ್ಲಿ ಹಲವಾರು ಕನ್ನಡಿಗರು ಈ ಬಗ್ಗೆ ಪ್ರಸ್ತಾಪ ಮಾಡಿದಾಗ, ಯಾವುದೇ ರೀತಿಯ ಉತ್ತರ ನೀಡದೇ, ಕನ್ನಡ ಹಾಡು ಹಾಕಿ ಎಂದು ಕೇಳಿದವರನ್ನೆಲ್ಲಾ ತಮ್ಮ ಪೇಜಿನಿಂದ ಬ್ಯಾನ್ ಮಾಡಿದ್ದಾರೆ. ಇದೀಗ ಬ್ಯಾನ್ ಆದ ಕನ್ನಡಿಗರ ಮನಸ್ಸಿನಲ್ಲಿ ಕರ್ನಾಟಕದಲ್ಲಿ ಕನ್ನಡ ಹಾಡು ಕೇಳುವುದು ತಪ್ಪೇ ಎನ್ನುವಂತಾಗಿದೆ. ಜೊತೆಗೆ ಇದೇ ವಿಶಯವಾಗಿ ಕೆಲವು ಪ್ರಶ್ನೆಗಳು ’ಬ್ಯಾನ್’ ಆದ ಕನ್ನಡಿಗರ ಮನಸ್ಸಿನಲ್ಲಿ ಮೂಡುತ್ತಿದೆ. ಈ ಪ್ರಶ್ನೆಗಳಿಗೆ ಕಾಪಿ ಡೇನವರು ಉತ್ತರಿಸುವ ದಯೆತೋರಲಿ.

ಪ್ರಶ್ನೆಗಳು-
  • ಒಬ್ಬ ಸಾಮಾನ್ಯ ಕನ್ನಡಿಗನಿಗೆ ತಮ್ಮ ಅಂಗಡಿಗೆ  ಬರಲು ಅವಕಾಶವಿದೆಯೇ ಅತವಾ ಎಲ್ಲಾ ಅಂಗಡಿಯಲ್ಲೂ ಒಂದೇ ತರನಾದ ವಾತಾವರಣ ಇರಬೇಕೆಂದು ಒಂದೇ  ತರನಾದ ಜನ ಬರಬೇಕೆಂಬ ನಿಯಮವೇನಾದರೂ ಇದೆಯೇ? 
  • ತಮ್ಮ ಅಂಗಡಿಗ ಬರುವ ಸಾಮಾನ್ಯ ಕನ್ನಡಿಗ ಎರಡನೇ ದರ್ಜೆ ಗ್ರಾಹಕನೇ?
  • ಕನ್ನಡ ಹಾಡು ಬೇಕು ಎನ್ನುವ ಸಾಮಾನ್ಯ ಕನ್ನಡಿಗರಿಗೆ ಪ್ರವೇಶ ನಿರ್ಬಂದಿಸಲಾಗಿದೆ ಎನ್ನುವ ನಾಮಪಲಕವನ್ನು ಹಾಕಬಾರದೇಕೆ?
  •  ಸಾಮಾನ್ಯ ಕನ್ನಡಿಗನೊಬ್ಬನಿಗೆ ಏನಾದರೂ  ನಿಮ್ಮ ಅಂಗಡಿಯಲ್ಲಿ ತೊಂದರೆಯಾರೆ ತಮ್ಮ ಸಂಸ್ತೆಗೆ ದೂರು ನೀಡಬಹುದುದಾದ ಹಕ್ಕಿದೆಯೇ ಅತವಾ ತಾವು ಸಾಮಾನ್ಯ ಕನ್ನಡಿಗರಿಂದ ದೂರನ್ನು ಸ್ವೀಕರಿಸುವುದಿಲ್ಲವೇ?
  •  ಅಂಗಡಿಯ ಮುಂದೆ ತಾವು ಮಾಡಿಕೊಂಡಿರುವ ನಿಯಮದ ಪ್ರಕಾರ ಕರ್ನಾಟಕದ ಅಂಗಡಿಗಳ ಮುಂದೆ ಕನ್ನಡ ಹಾಡು ಹಾಕಲಾಗುವುದಿಲ್ಲ ಎನ್ನುವ ಬೋರ್ಡ್ ಹಾಕಬಾರದೇಕೆ?
ಕೊನೆಯದಾಗಿ-
  •  ಕರ್ನಾಟಕದ ಅಂಗಡಿಯಲ್ಲಿ ಕನ್ನಡದ ಹಾಡುಗಳನ್ನು ಹಾಕಿ ಎಂದು ಕೇಳುವುದು ತಪ್ಪೇ?

ಮಂಗಳವಾರ, ಜನವರಿ 8, 2013

ಕರ್ನಾಟಕದಲ್ಲಿ ಕನ್ನಡ ಹಾಡನ್ನು ಹಾಕಲು ಕೀಳರಿಮೆಯೇಕೆ?

ಕಾಪಿ ಡೇ ನಲ್ಲಿ ಕನ್ನಡದ ಹಾಡುಗಳನ್ನು ಹಾಕದಿರುವುದರ ಬಗ್ಗೆ ಕಾಪಿ ಡೇ ಗೆ ಹೋಗಿದ್ದ ಗೆಳೆಯರೊಬ್ಬರು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಪಿ ಡೇ ತಾವು ದೇಶದ ಎಲ್ಲಾ ಅಂಗಡಿಗಳಲ್ಲೂ ಒಂದೇ ತರನಾದ ವಾತಾವಣವನ್ನು ಹೊಂದಲು, ಹಿಂದಿ/ ಇಂಗ್ಲೀಶ್ ಗೀತೆಗಳನ್ನು ಮಾತ್ರ ಹಾಕುತ್ತೇವೆಂದು ತಿಳಿಸಿದ್ದಾರೆ. 


ಕಾಪಿ ಡೇ ಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಂಗಡಿಯನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಹಿಂದಿ/ಇಂಗ್ಲೀಶ್ ಹಾಡುಗಳನ್ನು ಮಾತ್ರ ಹಾಕುತ್ತೇವೆ ಎನ್ನುವ ಮೂಲಕ ಕಂಪನಿಯು ತನ್ನ ಗ್ರಾಹಕರು, ಬೇಕಿದ್ದರೆ ಬರಲಿ ಇಲ್ಲವೇ ಬಿಡಲಿ ಎನ್ನುವಂತೆ ಆಡುತ್ತಿರುವುದು ಎಶ್ಟರ ಮಟ್ಟಿಗೆ ಸರಿ?

ಹೊರದೇಶದ ಅನೇಕ ಕಾಪಿ ಡೇ ತರನಾದ ಅಂಗಡಿಗಳು ಬಾರತದ ವೈವಿದ್ಯತೆಯನ್ನು ಗೌರವಿಸುವುದನ್ನು ನೋಡಿದ್ದೇನೆ ಆದರೆ ಕಾಪಿ ಡೇಯ ಈ ಉತ್ತರವನ್ನು ಗಮನಿಸಿದ್ರೆ, ಕಾಪಿ ಡೇ ತನ್ನ ಗ್ರಾಹಕರನ್ನು ಸರಿಯಾಗಿ ಅರ್ತ ಮಾಡಿಕೊಳ್ಳಲು ಎಡವುತ್ತಿರುವುದು ಕಾಣಿಸುತ್ತದೆ. ಬಾರತದಂತ ವೈವಿದ್ಯಮಯ ದೇಶದಲ್ಲಿ ದೇಶಕ್ಕೆಲ್ಲಾ ಒಪ್ಪುವಂತೆ ಒಂದೇ ನಿಯಮ ಮಾಡ್ತಿವಿ ಅನ್ನೋದು  ವೈವಿದ್ಯತೆಯಿಂದ ಕೂಡಿರುವ ಗ್ರಾಹಕರು ತಮಗೆ ಬೇಡ ಎನ್ನುವಂತಿದೆ. ಕಾಪಿ ಡೇ ನಂತೆಯೇ ಹೊರದೇಶಗಳ ಅಂಗಡಿಗಳು ಇದೇ ರೀತಿ ವೈವಿದ್ಯತೆಯನ್ನು ಬದಿಗೊಡ್ಡಿ ನಿಯಮ ಮಾಡಿದಲ್ಲಿ ಮುಂದೆ ಆಗುವ ಅನಾಹುತವನ್ನು ಊಹಿಸಿಕೊಳ್ಳಲೂ ಅಸಾದ್ಯ. 

ಈ ರೀತಿಯ ಗ್ರಾಹಕ ವಿರೋದಿ ನಿಯಮವನ್ನು ಮಾಡಿಕೊಳ್ಳಲು, ಇಂದಿಗೂ ಅನೇಕ ಕನ್ನಡದ  ಗ್ರಾಹಕರು ತಮ್ಮ ಬಾಶೆಯಲ್ಲಿ ಸೇವೆ ಕೇಳುವುದು ತಪ್ಪು ಎನ್ನುವಂತಹ ಮನಸ್ತಿತಿ ಹೊಂದಿರುವುದು ಕಾರಣವಾಗಿದೆ. ಕನ್ನಡಿಗರು ತಮ್ಮ ಬಾಶೆಯ ಬಗೆಗಿನ ಕೀಳರಿಮೆಯನ್ನು ತೊಡೆದು ಇಂತಹಾ ನಿಯಮಗಳನ್ನು ಪ್ರಶ್ನಿಸಿದಲ್ಲಿ,  ನಿಯಮ ಬದಲಾಗಿ ಎಲ್ಲೆಡೆ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾದ್ಯವಾದೀತು. 

ತಾವು ಕಾಪಿ ಡೇ ಗೆ ಹೋದ ಸಮಯದಲ್ಲಿ ಅಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗುವಂತೆ ಸಲಹೆಯನ್ನು ನೀಡಿ ಬನ್ನಿ. ಜೊತೆಗೆ ಕೆಳಗಿನ ಕೊಂಡಿಯಲ್ಲೂ ಸಹ ಈ ವಿಶಯದ ಬಗ್ಗೆ ಪ್ರಸ್ತಾಪಿಸಬಹುದು-